ಜ್ಯೋತಿರ್ಲಿಂಗ ದೇವಾಲಯ

ಬೆಂಗಳೂರಿನ ಓಂಕಾರ ಆಶ್ರಮ ಪ್ರೇಕ್ಷಣೀಯ ಸ್ಥಳವೂ ಹೌದು, ಧಾರ್ಮಿಕ ಕ್ಷೇತ್ರವೂ ಹೌದು. ಸುತ್ತಣದ ಹಚ್ಚ ಹಸಿರ ರಮಣೀಯ ದೃಶ್ಯದ ಝೇಂಕಾರ ಈ ಪುಣ್ಯ ಕ್ಷೇತ್ರ ಹಲವು ವಿಶಿಷ್ಟತೆಗಳಿಂದ ಕೂಡಿದೆ. ರಾಜ್ಯದ ಏಕೈಕ ಮತ್ಸ್ಯ ನಾರಾಯಣ ದೇವಸ್ಥಾನ ಇರುವುದು ಇದೇ ಕ್ಷೇತ್ರದಲ್ಲಿ. ಮಹಾಶಿವರಾತ್ರಿಯನ್ನು ಇಲ್ಲಿ ಅತ್ಯಂತ ವಿಶಿಷ್ಟವಾಗಿ ಆಚರಣೆ ಮಾಡಲಾಗುತ್ತದೆ. ಶಿವರಾತ್ರಿಯ ಸಂಭ್ರಮದಲ್ಲಿ ಆಶ್ರಮದ ಕಿರು ಪರಿಚಯ ಇಲ್ಲಿದೆ.

ಬೆಂಗಳೂರಿನ ಶ್ರೀನಿವಾಸಪುರದ ಕೆಂಗೇರಿ – ಉತ್ತರಹಳ್ಳಿಗೆ ಹೋಗುವ ಮಾರ್ಗದಲ್ಲಿ ಆಶ್ರಮ ಮತ್ತು ಎಲ್ಲಕ್ಕೂ ಕಲಸವಿಟ್ಟಂತೆ ಶ್ವೇತವರ್ಣದ ವೈಭವದಲ್ಲಿ ನಿರ್ಮಾಣಗೊಂಡಿರುವ ಶ್ರೀದ್ವಾದಶ ಜ್ಯೋತಿರ್ಲಿಂಗ ಭವ್ಯದೇವಸ್ಥಾನವಿದೆ. ಒಟ್ಟು ೧೬ ಎಕರೆ ಜಾಗದಲ್ಲಿ ಈ ಆಶ್ರಮವನ್ನು ನಿರ್ಮಿಸಲಾಗಿದೆ. ವೇದಪಾಠ ಶಾಲೆ, ಯಾಗ ಶಾಲೆ ಮತ್ತು ಗೋ ಶಾಲೆಗಳು ಆಶ್ರಮದಲ್ಲಿವೆ.

೧೯೯೪ರಲ್ಲಿ ಸದ್ಗುರು ಶ್ರೀ ಶಿವಪುರಿ ಮಹಾಸ್ವಾಮಿಗಳು ಭಕ್ತಾಧಿಗಳ ಅನುಕೂಲಕ್ಕೆ ಒಂದೇ ಸ್ಥಳದಲ್ಲಿ ದ್ವಾದಶ ಜ್ಯೋತಿರ್ಲಿಂಗ ದರ್ಶನ ವ್ಯವಸ್ಥೆ ಮಾಡುವ ಉದ್ದೇಶದಿಂದ ಒಂದೊಂದು ಲಿಂಗಕ್ಕೂ ಪ್ರತ್ಯೇಕ ದೇವಸ್ಥಾನ ನಿರ್ಮಿಸುವ ಯೋಜನೆ ಹಮ್ಮಿಕೊಂಡರು. ಅವರ ಆಣತಿಯಂತೆ ೨೦೦೦ರಲ್ಲಿ ದೇವಸ್ಥಾನ ನಿರ್ಮಾಣ ಕಾಮಗಾರಿ ಪ್ರಾರಂಭವಾಯಿತು. ೨೦೦೭ರಲ್ಲಿ ಶಿವಪುರಿಶ್ರೀಗಳು ಬ್ರಹ್ಮಲೀನರಾದನಂತರ  ಪ್ರಸ್ತುತ ಪೀಠಾಧಿಪತಿಗಳಾದ ಶ್ರೀ ಮಧುಸೂದನಾನಂದಪುರಿ ಸ್ವಾಮಿಜಿ ಪೀಠವನ್ನು ಆಲಂಕರಿಸಿ ಗುರುಗಳ ಅಣತಿಯಂತೆ ೨೦೧೧ ಫೆ.೧೬ರಂದು ಜ್ಯೋತಿರ್ಲಿಂಗ ದೇವಸ್ಥಾನಗಳನ್ನು ಲೋಕಾರ್ಪಣೆ ಮಾಡಿರುತ್ತಾರೆ.

ದ್ವಾದಶ ಜ್ಯೋತಿರ್ಲಿಂಗ ದರ್ಶನ:

ರಾಮೇಶ್ವರದಿಂದ ಕೇದಾರದವರೆಗೂ ೧೨ ಜ್ಯೋತಿರ್ಲಿಂಗಗಳು ನೆಲೆಯಾಗಿವೆ. ಭಕ್ತಾಧಿಗಳ ಕೆಲವು ಅನನುಕೂಲಗಳಿಂದಾಗಿ ಎಲ್ಲ ಜ್ಯೋತಿರ್ಲಿಂಗ ದೇವಸ್ಥಾನಗಳನ್ನು ಒಟ್ಟಿಗೆ ದರ್ಶನ ಮಾಡಲು ಸಾಧ್ಯವಾಗುತ್ತಿಲ್ಲ. ಆದರೆ, ಓಂಕಾರ ಆಶ್ರಮದ ಆವರಣದಲ್ಲಿ ೧೨ ಜ್ಯೋತಿರ್ಲಿಂಗಗಳನ್ನು ಒಟ್ಟಿಗೆ ಪ್ರತಿಷ್ಠಾಪಿಸಿದ್ದರಿಂದ ಒಂದೇ ಸ್ಥಳದಲ್ಲಿ ೧೨ ಜ್ಯೋತಿರ್ಲಿಂಗಗಳ ದರ್ಶನ ಭಾಗ್ಯ ಭಕ್ತರಿಗೆ ಸಾಧ್ಯವಾಗಲಿದೆ.

ಪ್ರಧಾನ ದೇವರಾಗಿ ೧೦೮ ಅಡಿ  ಗೋಪುರದ ಗರ್ಭಗುಡಿಯಲ್ಲಿ ಓಂಕಾರೇಶ್ವರ ಲಿಂಗದ ಜೊತೆ ಸ್ಪತಿಕದ ಶ್ರೀಚಕ್ರವಿದ್ದು ದೇವಾಲಯವಿದ್ದು ಓಂಕಾರ ಆಶ್ರಮದಲ್ಲಿ ೧೨ ಜ್ಯೋತಿರ್ಲಿಂಗ ದೇವಸ್ಥಾನಗಳಿಗೆ ಭೇಟಿ ನೀಡಿ ದರ್ಶನ ಪಡೆದರೆ ೧೩ ಸಾವಿರ ಬಾಣಲಿಂಗ ದರ್ಶನದ ಫಲ ಪ್ರಾಪ್ರಿಯಾಗುತ್ತದೆ.

ಹೊರನೋಟದಲ್ಲೇ ಸೊಗಸಾದ ಶ್ವೇತವರ್ಣದ ಗೋಪುರಗಳಿಂದ ಕಂಗೋಳಿಸುವ ದೇಗುಲದಲ್ಲಿ ಮಾಂಧಾತ್ಯ ಪರ್ವತದ ಓಂಕಾರೇಶ್ವರ, ರಾಮೇಶ್ವರದ ರಾಮೇಶ್ವರ, ನಾಸಿಕ್‌ನ ತ್ರೈಯಂಬಕೇಶ್ವರ, ವಾರಣಾಸಿಯ ವಿಶ್ವೇಶ್ವರ, ಕೇದಾರದ ಕೇದಾರನಾಥೇಶ್ವರ, ಉಜ್ಜಯಿನಿಯ ಮಹಾಕಾಳೇಶ್ವರ, ಸೌರಾಷ್ಟ್ರದ ಸೋಮನಾಥೇಶ್ವರ, ಸಹ್ಯಾದ್ರಿಯ ಭೀಮಾಶಂಕರ, ದಾರುಕಾವನದ ನಾಗೇಶ್ವರ, ದೇವಗಿರಿಯ ಘತ್ಮೇಶ್ವರ, ದೇವಘರದ ವೈದ್ಯನಾಥೇಶ್ವರ ಹಾಗೂ ಶ್ರೀಶೈಲದ ಮಲ್ಲಿಕಾರ್ಜುನರನ್ನೊಳಗೊಂಡಂತೆ ಭರತಖಂಡದ ದ್ವಾದಶ ಲಿಂಗಗಳನ್ನು ಪ್ರತ್ಯೇಕವಾದ ಗರ್ಭಗುಡಿಗಳಲ್ಲಿ ಪ್ರತಿಷ್ಠಾಪಿಸಲಾಗಿದೆ.

‘ಮಹಾ’ ಶಿವರಾತ್ರಿ

ಓಂಕಾರ ಆಶ್ರಮದಲ್ಲಿ ಶಿವರಾತ್ರಿಯನ್ನು ವಿಶೇಷವಾಗಿ ಮತ್ತು ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತದೆ. ಅಂದು ಮುಂಜಾನೆ ೬ರಿಂದ ೨೪ ಗಂಟೆಗಳ ಕಾಲ ನಿರಂತರ ಧಾರ್ಮಿಕ ಕಾರ್ಯಗಳು ನೆರವೇರುತ್ತವೆ, ರಥೋತ್ಸವ, ಪಲ್ಲಕ್ಕಿ ಉತ್ಸವ, ನಾಲ್ಕು ಯಾಮ ಪೂಜೆ. ಗಂಗಾಜಲ ಅಭಿಷೇಕ ,ಭಜನೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಇನ್ನೊಂದು ವಿಶೇಷ ಎಂದರೆ, ಶಿವರಾತ್ರಿಯಂದು ಭಕ್ತಾಧಿಗಳಿಗೆ ಓಂಕಾರೇಶ್ವರ ದೇವಸ್ಥಾನದ ಗರ್ಭಗುಡಿಯೊಳಗೆ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ. ದೇವಪ್ರಯಾಗದಿಂದ ಗಂಗಾಜಲವನ್ನು ತರಿಸಲಾಗುತ್ತದೆ. ಆ ಜಲದಿಂದ ಶಿವನಿಗೆ ಅಭಿಷೇಕ ಮಾಡುವ ಸೌಭಾಗ್ಯವನ್ನು ಭಕ್ತರಿಗೆ ನೀಡಲಾಗುತ್ತದೆ. ಶಿವನಿಗೆ ಗಂಗಾಜಲ ಅಭಿಷೇಕ ಮಾಡುವುದರಿಂದ ಸರ್ವ ಪಾಪಗಳು  ನಿವಾರಣೆಯಾಗುತ್ತವೆ.

ಮೊದಲ ನೋಟದಲ್ಲೇ ಮನಸೂರೆಗೊಳ್ಳುವಂತಹ ಲಂಡನ್ನಿನ ಬಿಗ್‌ಬೆನ್ ಗೋಪುರ ಗಡಿಯಾರಕ್ಕಿಂತಲೂ ದೊಡ್ಡದಾದ ಬೆಂಗಳೂರಿನ ಅತಿ ದೊಡ್ಡದಾದ ೪೦ ಅಡಿ ಎತ್ತರದ ವಿಶ್ವದ ಬೃಹತ್ ಗಡಿಯಾರವು ತನ್ನ ಭವ್ಯತೆಯಿಂದ, ಭಿನ್ನತೆಯಿಂದ ಇಡೀ ದೈವಿಕ ಪರಿಸರಕ್ಕೆ ತನ್ನದೇ ಆದ ಶೋಭೆ ತಂದಿದೆ. ಹೆಚ್.ಎಮ್.ಟಿ.ಯವರ ಬೃಹತ್ ಗಡಿಯಾರವನ್ನು ಕಣ್ತುಂಬಿಕೊಂಡು ಸುಮಾರು ೫೦ ಮೆಟ್ಟಿಲುಗಳನ್ನೇರಿ ನಿಂತಲ್ಲಿ ಎದುರಾಗುತ್ತದೆ ಸರ್ವಧರ್ಮಗಳ ಬೀಡು. ಬೃಹತ್ ಆಲದ ಮರದ ಸಮುಚ್ಚಯದಲ್ಲಿನ ಆವರಣದಲ್ಲಿ ಓಂಕಾರೇಶ್ವರ ಹಾಗೂ ವನದುರ್ಗೆಯರನ್ನು ಸುತ್ತುವರೆದಿರುವ ಬುದ್ಧರ ಗೌತಮಬುದ್ಧ, ಜೈನರ ಮಹಾವೀರ, ಕ್ರಿಸ್ತರ ಯೇಸು, ಮುಸಲ್ಮಾನರ ಮೊಹಮದ್ ಪೈಗಂಬರ್, ಹಿಂದೂ ಧರ್ಮದ ಪ್ರತಿಪಾದಕರಾದ ಜಗದ್ಗುರುಗಳಾದ ಶಂಕರಾಚಾರ್ಯ, ಮಧ್ವಾಚಾರ್ಯ ಹಾಗೂ ರಾಮಾನುಜಾಚಾರ್ಯರ, ಸಿಖ್ಖರ ಗುರುಗ್ರಂಥ ಹೀಗೆ ಜಗತ್ತಿನ ಎಲ್ಲಾ ಧರ್ಮಗಳ ಪ್ರತೀಕವೆಂಬಂತೆ ಈ ಎಲ್ಲಾ ಪುಣ್ಯ ಪುರುಷರ ಸುಂದರ ಮೂರ್ತಿಗಳು ಆಸ್ತಿಕರನ್ನಲ್ಲದೆ ಅರಸಿ ಬರುವ ಪ್ರವಾಸಿಗರ ಕಣ್ಮನ ಸೆಳೆಯುತ್ತದೆ. ಪ್ರತಿಯೊಂದು ಮೂರ್ತಿಗಳನ್ನೂ ಒಂದೊಂದು ಪ್ರತ್ಯೇಕ ಮಂಟಪಗಳಲ್ಲಿ ಪ್ರತಿಷ್ಠಾಪಿಸಲಾಗಿದೆ. ಏಕಕಾಲದಲ್ಲಿ ಜಗತ್ತಿನ ಎಲ್ಲಾ ಧರ್ಮಗಳ ಪ್ರತೀಕದಂತಿರುವ ಈ ಮಹನೀಯರನ್ನು ಕಣ್ತುಂಬಿಕೊಳ್ಳುವುದೇ ಒಂದು ಭಾಗ್ಯ. ಇನ್ನೂ ಇಲ್ಲಿಂದ ಕಾಣುವ ಪರಿಸರದ ರಮಣೀಯತೆ ಕಣ್ಣಿಗೆ ಹಬ್ಬವನ್ನುಂಟುಮಾಡುತ್ತದೆ.

ದ್ವಾದಶಲಿಂಗ ದೇಗುಲದ ದರ್ಶನ ಮಾಡಿಕೊಂಡು ಕೆಳಗೆ ಬಂದಲ್ಲಿ ಶ್ರೀ ಶಿವಪುರ ಸ್ವಾಮಿಗಳು ಸಮಾಧಿ ಸ್ಥಳದ ಎದುರಿಗೆ ೧೨೦೦ ಕೆ.ಜಿ. ಭಾರವಿರುವ ಪಂಚಲೋಹದ ಅತಿದೊಡ್ಡ ಗಂಟೆ ಗಮನ ಸೆಳೆಯುತ್ತದೆ. ಮುಂದೆ ಕಲ್ಲಿನಲ್ಲಿ ಕಡೆದ ಕೇವಲ ತನ್ನ ಕೊಕ್ಕಿನ ಬ್ಯಾಲೆನ್ಸ್‌ನಿಂದ ಹಾರುವ ರೀತಿಯಲ್ಲಿ ಕೆತ್ತಲ್ಪಟ್ಟಿರುವ ಗರುಡ, ಗರುಡನ ಎದುರಿನ ಶಿಲ್ಪಕಲಾಕೃತಿಗಳು ನೋಡುಗರನ್ನು ಮಂತ್ರ ಮುಗ್ಧಗೊಳಿಸುತ್ತದೆ.

ಮೆಜೆಸ್ಟಿಕ್‌ನಿಂದ ಪದ್ಮನಾಭನಗರ, ಉತ್ತರಹಳ್ಳಿ, ಚನ್ನಸಂದ್ರ ಮಾರ್ಗದಲ್ಲಿ ಕೇಂಗೇರಿಗೆ ಹೋಗುವ ಮಾರ್ಗದಲ್ಲಿ ಕೇವಲ ೨೦ಕಿ.ಮೀ. ದೂರದಲ್ಲಿದೆ ಈ ರಮಣೀಯ ಪರಿಸರ.

ಓಂಕಾರಶ್ರಮದಲ್ಲಿ ಫೆ  ೧೨ – ಬೆಳಿಗ್ಗೆ ಮಹಾರುದ್ರಯಾಗ, ೧೩ ರಂದು ಇಡೀ ದಿನ ಮತ್ತು ರಾತ್ರಿ ದರ್ಶನ, ಹಗಲು – ರಥೋತ್ಸವ , ಸಂಜೆ ಪಲ್ಲಕ್ಕಿ-ಉತ್ಸವ ಹಾಗೂ ರಾತ್ರಿ ನಾಲ್ಕು ಯಾಮದ ಪ್ರಜೆ, ಭಜನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

ವಿವರಗಳಿಗೆ : ೮೮೮೦೨೯೬೬೬೩,೯೧೪೧೯೨೦೯೨೦,೯೧೪೧೯೩೦೯೩೦

Leave a Comment