ಜ್ಞಾನ ಸಂಪತ್ತು ನಶಿಸಬಾರದು – ಎಂ.ಆರ್.ರವಿ

ಮೈಸೂರು. ಆ,13- ಅನುಭವದಿಂದ ಪಕ್ವವಾಗುವ ಜ್ಞಾನದ ಸಂಪತ್ತು ಎಂದಿಗೂ ನಮ್ಮೊಂದಿಗೆ ನಶಿಸಬಾರದು ಎಂದು ಮಂಗಳೂರಿನ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಎಂ. ಆರ್. ರವಿ ತಿಳಿಸಿದರು.
ಜೆ.ಎಲ್.ಬಿ ರಸ್ತೆಯಲ್ಲಿರುವ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರ್ಸ್ ಎಸ್.ಪಿ. ಭಟ್ ಸಭಾಂಗಣದಲ್ಲಿ ಭಾನುವಾರ ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ ವತಿಯಿಂದ ವಿಜ್ಞಾನಸಾಹಿತಿ ಎಸ್. ರಾಮಪ್ರಸಾದ್ ಅವರ 76ನೇ ಹುಟ್ಟುಹಬ್ಬ ಸಂಭ್ರಮ ಮತ್ತು ಮನೋಮಂಥನ ಕೃತಿ ಬಿಡುಗಡೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ರಾಮಪ್ರಸಾದ್ ಒಂದು ಶಕ್ತಿ ಇಂದಿನ ಸಾಮಾಜಿಕ ವ್ಯವಸ್ಥೆಯ ಶಿಕ್ಷಣ ಸೇರಿದಂತೆ ಇನ್ನಿತರೇ ಸ್ಥಿತಿಗತಿಗಳ ಬಗ್ಗೆ ಆಳವಾದ ಚಿಂತನೆಗಳನ್ನು ತಮ್ಮದೇ ಆದ ಶೈಲಿಯಲ್ಲಿ ಬಹಳ ಅಚ್ಚುಕಟ್ಟಾಗಿ ತಮ್ಮ ಬರವಣಿಗೆಗಳಲ್ಲಿ ರೂಪಿಸಿದ್ದು, ಅವರ ನಿರೂಪಣೆಯು ಸಾಮಾಜಿಕ ಅಂಕುಡೊಂಕುಗಳನ್ನು ಎತ್ತಿಹಿಡಿಯುವುದಲ್ಲದೇ, ಬದುಕನ್ನು ಒಳ್ಳೆಯತನದಲ್ಲಿ ರೂಪಿಸಿಕೊಳ್ಳಲು ನೆರವಾಗುವುದರಲ್ಲಿ ಯಾವುದೇ ಸಂಶಯವಿಲ್ಲವೆಂದು ಹಾಗೂ ಜೀವನದ ಮಹತ್ವವನ್ನು ಉಳಿಸಿಕೊಳ್ಳವುದರಲ್ಲಿ ನೆರವಾಗುತ್ತದೆ ಎಂದು ಹೇಳಿದರು.
ಪ್ರಸ್ತುತ ಜ್ಞಾನ, ವಿಜ್ಞಾನ ಇದೆ. ಆದರೆ ವೈಜ್ಞಾನಿಕ ಮನೋಭಾವ ಎಷ್ಟರ ಮಟ್ಟಿಗೆ ಇದೆ ಎಂದು ಪ್ರಶ್ನಿಸಿಕೊಳ್ಳಬೇಕು. ಅದೇ ರೀತಿ ಚರಿತ್ರೆ ಇದೆ ಆದರೆ ಚಾರಿತ್ರ್ಯ ಕಡಿಮೆಯಾಗಿದೆ ಇಂತಹ ಸಂದರ್ಭದಲ್ಲಿ ರಾಮಪ್ರಸಾದ್ ಅವರ ಆಲೋಚನೆಗಳು ಹೆಚ್ಚು ಅರ್ಥಪೂರ್ಣವಾಗಿವೆ ಎಂದರು.
ಸಮಾರಂಭದಲ್ಲಿ ವಿವೇಕಪ್ರಭ ಸಂಪಾದಕರು ಹಾಗೂ ರಾಮಕೃಷ್ಣ ಆಶ್ರಮದ ಸ್ವಾಮಿ ಜ್ಞಾನಯೋಗಾನಂದ, ಕನ್ನಡ ಮಹಾರಾಣಿ ಕಲಾ ಕಾಲೇಜಿನ ಪ್ರಾದ್ಯಾಪಕ ಬಿ.ವಿ. ವಸಂತಕುಮಾರ್, ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ ಪ್ರಕಾಶಕ ಟಿ.ಎಸ್. ಛಾಯಾಪತಿ, ಎಸ್. ರಾಮಪ್ರಸಾದ್, ಪ್ರತಿಭಾ ಮುರಳಿ ಸೇರಿದಂತೆ ಮತ್ತಿತ್ತರರು ಉಪಸ್ಥಿತರಿದ್ದರು.

Leave a Comment