ಜ್ಞಾನವಿಕಾಸಕ್ಕೆ ಪಠ್ಯೇತರ ಚಟುವಟಿಕೆಗಳು ಅವಶ್ಯ

ಕೆ.ಆರ್.ಪೇಟೆ, ಡಿ.3- ಮಕ್ಕಳಲ್ಲಿ ಪರಿಣಾಮಕಾರಿ ಜ್ಞಾನ ವಿಕಾಸಕ್ಕೆ ಪಠ್ಯೇತರ ಚಟುವಟಿಕೆಗಳು ಅಗತ್ಯವಾಗಿವೆ. ಹಾಗಾಗಿ ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಸಾಹಿತ್ಯ ಕೃಷಿ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆಸಕ್ತಿ ಮೂಡಿಸುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಲೋಕಾಯನ ಸಂಸ್ಥೆ ತಾಲೂಕಿನ ಮಕ್ಕಳಿಗೆ ಪಠ್ಯೇತರ ಚಟುವಟಿಕೆ ಕಾರ್ಯಕ್ರಮ ರೂಪಿಸುವ ಮೂಲಕ ಅವರ ಜ್ಞಾನಾಭಿವೃದ್ಧಿಗೆ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದು ನಾಡಿನ ಖ್ಯಾತ ಸಾಹಿತಿ ಪ್ರೊ.ಅ.ರಾ.ಮಿತ್ರ ಹೇಳಿದರು.
ಅವರು ತಾಲೂಕಿನ ಅಕ್ಕಿಹೆಬ್ಬಾಳು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಜಯಶ್ರೀ ಬಯಲು ರಂಗಮಂದಿರದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಲೋಕಾಯನ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮೆ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಲಲಿತ ಪ್ರಬಂಧ ರಚನಾ ಕಮ್ಮಟ ಹಾಗೂ ಶಾಲೆಗೊಂದು ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬರೂ ಹುಟ್ಟೂರನ್ನು ಎಂದಿಗೂ ಮರೆಯಬಾರದು. ವ್ಯಕ್ತಿಯೊಬ್ಬನ ಅಭಿವೃದ್ಧಿಗೆ ಹುಟ್ಟೂರಿನ ಕೊಡುಗೆ ಅಪಾರವಾಗಿರುತ್ತದೆ. ಒಬ್ಬ ವ್ಯಕ್ತಿ ಎಷ್ಟೇ ಉನ್ನತ ಹುದ್ದೆಯಲ್ಲಿದ್ದರೂ ಆತನ ಹುಟ್ಟೂರು ಅಭಿವೃದ್ಧಿಯಾಗದೇ ಇದ್ದರೆ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಯತ್ತ ಸಾರ್ವಜನಿಕರು ಬೊಟ್ಟು ಮಾಡಿ ತೋರಿಸುತ್ತಾರೆ ಹಾಗಾಗಿ ಪ್ರತಿಯೊಬ್ಬರೂ ತಮ್ಮ ಅಭಿವೃದ್ಧಿಯ ಜೊತೆ ಜೊತೆಗೆ ತಮ್ಮ ಹುಟ್ಟೂರಿಗೆ ಏನಾದರೊಂದು ಕೊಡುಗೆ ನೀಡಲು ಶ್ರಮಿಸಬೇಕು. ಈ ನಿಟ್ಟಿನಲ್ಲಿ ಲೋಕಾಯನ ಸಂಸ್ಥೆಯ ಶಶಿಧರ್ ಬಾರೀಘಾಟ್ ಅವರು ತವರೂರು ಅಕ್ಕಿಹೆಬ್ಬಾಳಿನಲ್ಲಿ ಕಳೆದ ಹಲವು ವರ್ಷಗಳಿಂದ ತಮ್ಮ ಲೋಕಾಯನ ಸಂಸ್ಥೆಯ ಮೂಲಕ ಸಂಸ್ಕೃತಿ ಉಳಿಸುವ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ತವರಿನ ಅಭಿವೃದ್ದಿಗೆ ಶ್ರಮಿಸುತ್ತಿದ್ದಾರೆ. ನನ್ನ ಹುಟ್ಟೂರು ಸಹ ಅಕ್ಕಿಹೆಬ್ಬಾಳು ಆಗಿರುವ ಕಾರಣ ನಾನು ಎಲ್ಲೆ ವಾಸವಿರಲಿ ನನ್ನ ಹುಟ್ಟೂರನ್ನು ಸದಾ ಸ್ಮರಿಸುತ್ತೇನೆ ಅವಕಾಶ ಸಿಕ್ಕಾಗೆಲ್ಲಾ ಅಕ್ಕಿಹೆಬ್ಬಾಳಿಗೆ ಬೇಟಿ ನೀಡಿ ತವರಿಗಾಗಿ ಏನಾದರೊಂದು ಸಣ್ಣ ಕಾಣಿಕೆ ನೀಡುವ ಪ್ರಯತ್ನ ಮಾಡುತ್ತಿದ್ದೇನೆ. ನನ್ನ ತಂದೆ ಹುಟ್ಟೂರನ್ನು ಮರೆಯಬೇಡ ಎಂದಿದ್ದರು ಇದನ್ನು ಪಾಲಿಸುತ್ತಾ ನನ್ನ ಮಕ್ಕಳಿಗೂ ಇದನ್ನೇ ಹೇಳಿದ್ದೇನೆ ನೀವು ಎಲ್ಲೆ ಇರಿ ತಮ್ಮ ಹೆಸರಿಗೆ ಮುನ್ನ ಅಕ್ಕಿಹೆಬ್ಬಾಳು ಇರಲೇಬೇಕು ಎಂದು ತಿಳಿಸಿದ್ದೇನೆ ಆದ್ದರಿಂದ ಪ್ರತಿಯೊಬ್ಬರೂ ತಮ್ಮ ತಮ್ಮ ಹುಟ್ಟೂರು ಮರೆಯದೇ ತಮ್ಮ ಕೈಲಾದ ಸೇವೆಯನ್ನು ಹುಟ್ಟೂರಿಗೆ ಸಲ್ಲಿಸುವ ಮೂಲಕ ತವರಿನ ಋಣ ತೀರಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದರೆ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ ಅಲ್ಲದೆ ಬದುಕು ಸಾರ್ಥಕವಾಗುತ್ತದೆ ಎಂದು ತಿಳಿಸಿದರು.
ಮಕ್ಕಳು ಕೇವಲ ಪಠ್ಯ ಪುಸ್ತಕಕ್ಕೆ ಸೀಮಿತರಾಗದೇ ಪಠ್ಯೇತರ ಚಟುವಟಿಕೆಗಳು, ಸಾಹಿತ್ಯ ಕೃಷಿ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳತ್ತ ಆಸಕ್ತಿ ಬೆಳೆಸಿಕೊಳ್ಳಬೇಕು ಈ ಮೂಲಕ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಂಡು ಉನ್ನತ ಸ್ಥಾನಮಾನ ಗಳಿಸಬೇಕು ಈ ಮೂಲಕ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಬೇಕು ಎಂದು ಅ.ರಾ.ಮಿತ್ರ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಅಧಿಕಾರಿ ಎ.ಎಸ್.ನಾಗರಾಜು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಲೋಕಾಯನ ಸಾಂಸ್ಕೃತಿಕ ಸಂಸ್ಥೆಯ ಮುಖ್ಯಸ್ಥ ಶಶಧರ್ ಬಾರಿಘಾಟ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹೆಚ್.ಆರ್.ಪೂರ್ಣಚಂದ್ರತೇಜಸ್ವಿ ಶಾಲೆಗೊಂದು ಕಾರ್ಯಕ್ರಮ 30ವರ್ಷಗಳಿಂದ ನಡೆದು ಬಂದ ಹಾದಿ ಕುರಿತು ಮಾತನಾಡಿದರು. ಸಾಹಿತಿ ಬಲ್ಲೇನಹಳ್ಳಿ ಮಂಜುನಾಥ್ ಪ್ರಧಾನ ಉಪನ್ಯಾಸ ನೀಡಿ ತಾಲೂಕಿನ ಶೀಳನೆರೆ ಬಳ್ಳೇಕೆರೆ ಗ್ರಾಮದವರಾದ ಖ್ಯಾತ ಸಾಹಿತಿ, ಸಿನಿಮಾ ಆಗಿರುವ ಕಾಡು, ಪರಸಂಗದ ಗೆಂಡೆತಿಮ್ಮ, ಬುಜಂಗಯ್ಯನ ದಶಾವತಾರ ಮತ್ತಿತರರ ಕಾದಂಬರಿಗಳ ಕತೃ ಕೃಷ್ಣ ಆಲನಹಳ್ಳಿ ಅವರನ್ನು ಕುರಿತರು ಉಪನ್ಯಾಸ ನೀಡಿದರು.
ಮಲ್ಲಿಗೆ ಕವಿ ಕೆ.ಎಸ್.ನರಸಿಂಹಸ್ವಾಮಿ ಅವರ ಸುಪುತ್ರ ಕೆ.ಎನ್.ಮಹಾಬಲ, ಕೃಷ್ಣ ಸುಬ್ಬರಾವ್, ಡಾ.ಚಿಂತಾಮಣಿಕೂಡ್ಲೀಕೆರೆ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಟಿ.ಜವರೇಗೌಡ, ಪ್ರಾಂಶುಪಾಲ ಶ್ರೀನಿವಾಸ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಮಂಜುನಾಥ್, ಗ್ರಾಮಭಾರತೀ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್.ಸಿ.ಕಿರಣ್‍ಕುಮಾರ್, ಕಸಾಪ ನಗರ ಘಟಕದ ಅಧ್ಯಕ್ಷ ಪಿ.ಡಿ.ಮಹೇಶ್, ಅಂತಾ ರಾಷ್ಟ್ರೀಯ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತರಾದ ಅಂಚಿ ಸಣ್ಣಸ್ವಾಮಿಗೌಡ, ಜಾನಪದ ಪರಿಷತ್ ಅಧ್ಯಕ್ಷ ಕೆ.ಎಸ್.ಸೋಮಶೇಖರ್, ಮಕ್ಕಳ ಸಾಹಿತ್ಯ ವೇದಿಕೆ ಅಧ್ಯಕ್ಷ ಮಾರೇನಹಳ್ಳಿ ಲೋಕೇಶ್, ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಸವಿತಾರಮೇಶ್, ಕಾರ್ಯದರ್ಶಿ ಆರ್.ಎನ್.ಶ್ರೀಧರ್, ಕೋಶಾಧ್ಯಕ್ಷ ಚಂದ್ರಪ್ಪ, ಸಂಘಟನಾ ಸಂಚಾಲಕ ಕನ್ನಡ ನಾಗರಾಜು, ಉಗ್ರಾಣ ಇಲಾಖೆಯ ನಿವೃತ್ತ ಅಧಿಕಾರಿ ಲಕ್ಷ್ಮೇಗೌಡ, ಯುವ ಸಾಹಿತಿ ಮಹಮದ್ ಅಜರುದ್ದೀನ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಮಹೇಶ್‍ನಾಯಕ್(ಪ್ರಥಮ), ಜಿ.ಆರ್.ಅಭಿಷೇಕ್(ದ್ವೀತೀಯ), ಶಬ್ರೀನ್‍ತಾಜ್(ತೃತೀಯ) ಅವರಿಗೆ ಬಹುಮಾನ ವಿತರಣೆ ಮಾಡಲಾಯಿತು.

Leave a Comment