ಜೋಶಿ ಆರಿಸಿ – ಮೋದಿ ಗೆಲ್ಲಿಸಿ : ಶೆಟ್ಟರ

ಹುಬ್ಬಳ್ಳಿ,ಏ16 : ಮೋದಿ ಒಬ್ಬ ದೃಢ ಚಿತ್ತದ ನಾಯಕ. ಇಷ್ಟು ವರ್ಷಗಳ ರಾಜಕೀಯ ಬದುಕಿನಲ್ಲಿ ಒಂದೇ ಒಂದು ಕಪ್ಪು ಚುಕ್ಕೆಯಿಲ್ಲದ, ಭ್ರಷ್ಟಾಚಾರದ ಉದಾಹರಣೆಗಳಿಲ್ಲದೇ ಶುದ್ಧ ಹಸ್ತದ ವ್ಯಕ್ತಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕ ಜಗದೀಶ ಶೆಟ್ಟರ್ ಹೇಳಿದರು.
ನಗರದ ನೂತನ ನ್ಯಾಯಾಲಯ ಸಂಕಿರ್ಣದಲ್ಲಿಂದು ಹುಬ್ಬಳ್ಳಿ ವಕೀಲರ ಸಂಘದೊಂದಿಗೆ ಚುನಾವಣಾ ಪ್ರಚಾರಾರ್ಥವಾಗಿ ಸೇರಿದ್ದ ಸಭೆಯಲ್ಲಿ ವಕೀಲರನ್ನುದ್ದೇಶಿಸಿ ಮಾತನಾಡಿದರು.
ಆರ್ಥಿಕವಾಗಿ ಹನ್ನೊಂದನೇ ಸ್ಥಾನದಲ್ಲಿದ್ದ ಭಾರತವನ್ನು ಬರಿ ಐದೇ ವರ್ಷದಲ್ಲಿ ಐದನೇ ಅತಿ ದೊಡ್ಡ ಆರ್ಥಿಕ ಶಕ್ತಿಯನ್ನಾಗಿ ಬೆಳೆಸಿದವರು. ಜೋಶಿಯವರು ಸಹಿತ ಶುಧ್ಧ ಹಸ್ತದಿಂದ ಈ ಭಾಗದ ಅಭಿವೃದ್ಧಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ಉತ್ತಮರನ್ನು ಕಳೆದುಕೊಳ್ಳಲು ಅವಕಾಶ ಕೊಡಬೇಡಿ. ಎಲ್ಲವನ್ನು ಅವಲೋಕಿಸಿ ಜಾಗೃತ ಮತದಾರರಂತೆ ಮತದಾನ ಮಾಡಿ ಪ್ರಲ್ಹಾದ ಜೋಶಿಯವರನ್ನು ಆರಿಸಿ, ನರೇಂದ್ರ ಮೋದಿಯವರನ್ನು ಗೆಲ್ಲಿಸಿ ಎಂದು  ಜಗದೀಶ ಶೆಟ್ಟರ್ ಹೇಳಿದರು.
ನಾನು ಕೂಡ ಇದೇ ಸಂಘದಿಂದ ವಕೀಲಿ ವೃತ್ತಿ ಪ್ರಾರಂಭಿಸಿ ಬೆಳೆದವನು. ಈ ಸಂಘ ನನಗೆ ನಾಯಕತ್ವ ಗುಣವನ್ನು ಕಲಿಸಿದೆ. ನಾನು ಆರು ಭಾರಿ ಗೆಲ್ಲಲೂ ನೀವೆಲ್ಲರೂ ಕಾರಣ.  ಎಸ್.ಆರ್. ಬೊಮ್ಮಾಯಿ ಮತ್ತು ನಾನು ಇದೇ ಸಂಘದಿಂದ ಬೆಳೆದು ಶಾಸಕರಾದವರು ಎಂದು ತಮ್ಮ ವಕೀಲಿ ಬದುಕಿನ ದಿನಗಳನ್ನು ನೆನಪು ಮಾಡಿಕೊಂಡರು.
ಇದೇ ಸಂದರ್ಭದಲ್ಲಿ  ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ,ಸಂಸದ ಪ್ರಹ್ಲಾದ ಜೋಶಿ ಮಾತನಾಡಿ  ಮೋದಿ ಅಧಿಕಾರಕ್ಕೆ ಬರುವಾಗ ದೇಶದ ಜನ ತಲೆ ತಗ್ಗಿಸುವ ಕೆಲಸ ಮಾಡುವುದಿಲ್ಲ ಎಂದು ಪ್ರಮಾಣ ಮಾಡಿದ್ದರು. ನುಡಿದಂತೆಯೇ ನಡೆದುಕೊಂಡರು. ಆಮೆ ಗತಿಯಲ್ಲಿ ನಡೆಯುತ್ತಿದ್ದ ಎಲ್ಲ ಅಭಿವೃದ್ಧಿ ಕಾರ್ಯಗಳನ್ನು ಊಹೆಗೂ ಮೀರುವಂತಹ ವೇಗದಲ್ಲಿ ಆಗುವಂತೆ ನೋಡಿಕೊಂಡರು. ಹಿಂದಿನ ಪ್ರಧಾನಿಗಳಿಗೆ ತತ್‍ಕ್ಷಣದ ನಿರ್ಣಯಗಳನ್ನು ತೆಗೆದುಕೊಳ್ಳಲು ಸಾದ್ಯವಾಗುತ್ತಿರಲಿಲ್ಲ.

ಆದರೆ ಮೋದಿ ತಕ್ಷಣವೇ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವ ಶಕ್ತಿ ಹೊಂದಿದ್ದಾರೆ. ದೊಡ್ಡ ಮಟ್ಟದಲ್ಲಾಗುತ್ತಿದ್ದ ಸೋರಿಕೆಗಳನ್ನು ತಡೆದಿದ್ದಾರೆ. ಕಳ್ಳದಂದೆಯ ಮೂಲಕ ಮಾಯವಾಗುತ್ತಿದ್ದ ಕೋಟ್ಯಾಂತರ ರೂಪಾಯಿಗಳನ್ನು ಕೇಂದ್ರದ ಬೊಕ್ಕಸಕ್ಕೆ ಬರುವಂತೆ ಮಾಡಿ ದೇಶದ ಒಳಿತಿಗಾಗಿ ಸದ್ಬಳಕೆ ಮಾಡಿದ್ದಾರೆ. ಐದು ವರ್ಷಗಳಲ್ಲಿ ಪ್ರಾಮಾಣಿಕ ಆಡಳಿತ ನೀಡಿದ್ದಾರೆ. ಅದಕ್ಕಾಗಿ ಈಗ ಧೈರ್ಯದಿಂದ ಕೆಲಸ ಮಾಡಿದ್ದೇವೆ. ಮತ ನೀಡಿ ಎಂದು ನಿಮ್ಮ ಮುಂದೆ ಬಂದಿದ್ದೇವೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ  ನ್ಯಾಯಾಲಯದ ಸಂಕಿರ್ಣದಲ್ಲಿರುವ ವಿವಿಧ ಭಾಗಗಳಿಗೆ ತೆರಳಿ ತಮ್ಮ ಅವಧಿಯಲ್ಲಾದ ಕಾರ್ಯ ಸಾಧನೆಗಳನ್ನು ಒಳಗೊಂಡಿರುವ ರಿಪೋರ್ಟ್  ಕಾರ್ಡನ್ನು ನೀಡಿ ವಕೀಲರಲ್ಲಿ ಮತ ಯಾಚಿಸಿದರು.  ಈ ಸಂದರ್ಭದಲ್ಲಿ ಮುಧೋಳ ಶಾಸಕ ಗೋವಿಂದ ಕಾರಜೋಳ, ರಮೇಶ ಬಾಬು, ಮೋಹನ ಲಿಂಬಿಕಾಯಿ, ವಕೀಲರ ಸಂಘದ ಅಧ್ಯಕ್ಷ ಅಶೋಕ ಬಳಿಗಾರ, ಉಪಾಧ್ಯಕ್ಷ ಎಸ್.ವಿ. ಕೊಪ್ಪರ, ಅಶೋಕ ಅಣವೇಕರ, ಪ್ರಧಾನ ಕಾರ್ಯದರ್ಶಿಗಳಾದ ಗುರು ಹಿರೇಮಠ, ಲೋಕೇಶ ಎಂ. ಶೋಭಾ ಪವಾರ ಮತ್ತಿತರರು ಉಪಸ್ಥಿತರಿದ್ದರು.

Leave a Comment