ಜೋಡುಪಾಲ ದುರ್ಘಟನೆ

ಮಣ್ಣಿನಡಿ ಸಿಲುಕಿದ್ದ ಮೃತದೇಹ ಹೊರಕ್ಕೆ
ಸುಳ್ಯ, ಆ.೧೮- ಸಂಪಾಜೆ-ಮಡಿಕೇರಿ ಮಧ್ಯದ ಜೋಡುಪಾಲ ಎಂಬಲ್ಲಿ ನಿನ್ನೆ ರಾತ್ರಿ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿದ ಪರಿಣಾಮವಾಗಿ ಮೂರು ಮನೆಗಳು ಸಂಪೂರ್ಣ ಧ್ವಂಸಗೊಂಡಿವೆ. ಈ ಮನೆಗಳಲ್ಲಿದ್ದ ಆರು ಮಂದಿ ಮಣ್ಣಿನಡಿ ಸಿಲುಕಿದ್ದು, ಓರ್ವರ ಮೃತದೇಹ ಪತ್ತೆಯಾಗಿದೆ. ಓರ್ವ ಮಹಿಳೆ ಹಾಗೂ ನಾಲ್ವರು ಮಕ್ಕಳು ನಾಪತ್ತೆಯಾಗಿದ್ದು, ಮಣ್ಣಿನಡಿಯಲ್ಲಿ ಸಿಲುಕಿರಬೇಕೆಂದು ಶಂಕಿಸಲಾಗಿದೆ. ಬಸಪ್ಪ ಎಂಬವರ ಮೃತದೇಹ ಮಣ್ಣಿನಡಿಯಲ್ಲಿ ಪತ್ತೆಯಾಗಿದೆ.
ಗುರುವಾರದಿಂದಲೇ ಜೋಡುಪಾಲದ ಮೇಲ್ಭಾಗದ ಗುಡ್ಡ ಕುಸಿದು ಜಾರಲಾರಂಭಿಸಿತ್ತು. ಈ ಹಿನ್ನೆಲೆಯಲ್ಲಿ ಅಲ್ಲಿರುವ ಮನೆಯವರನ್ನು ಪಕ್ಕದ ಶಾಲೆಗೆ ಸ್ಥಳಾಂತರಿಸಲಾಗಿತ್ತು. ನೀರಿನೊಂದಿಗೆ ಗುಡ್ಡ ಸಂಪೂರ್ಣ ಕುಸಿದ ಪರಿಣಾಮ ತಳಭಾಗದಲ್ಲಿದ್ದ ೩ ಮನೆಗಳು ಸಂಪೂರ್ಣ ನಾಶವಾಗಿವೆ. ಪರಿಸರದಲ್ಲಿ ಭಾರೀ ಪ್ರಮಾಣದಲ್ಲಿ ರಸ್ತೆಯಿಡೀ ನೀರು ಹರಿದು ಬರುತ್ತಿದ್ದು, ಸುಮಾರು ೩ ಕಿಲೋಮೀಟರ್‌ನಷ್ಟು ವಾಹನವಾಗಲಿ, ಜನರಾಗಲಿ ತೆರಳಲು ಸಾಧ್ಯವಿಲ್ಲದಂತಹ ವಾತಾವರಣ ನಿರ್ಮಾಣವಾಗಿತ್ತು. ಬಳಿಕ ಮಂಗಳೂರಿನಿಂದ ರಾಷ್ಟ್ರೀಯ ವಿಪತ್ತು ನಿಗ್ರಹ ದಳ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿತು. ಸುಳ್ಯ ಎಸ್ಸೈ ಮಂಜುನಾಥ್ ಮತ್ತು ಸಿಬ್ಬಂದಿ, ಊರವರು ಸಹಕಾರ ನೀಡಿದರು. ಅಪರಾಹ್ನದ ವೇಳೆಗೆ ಬಸಪ್ಪನವರ ಮೃತದೇಹವನ್ನು ಮಣ್ಣಿನಡಿಯಿಂದ ಹೊರತೆಗೆಯಲಾಗಿದೆ. ಅವರ ಪತ್ನಿ ಮತ್ತು ಇಬ್ಬರು ಮಕ್ಕಳು ಇನ್ನೂ ಪತ್ತೆಯಾಗಿಲ್ಲ. ಇನ್ನೊಂದು ಮನೆಯ ನಿವಾಸಿ ಹಮೀದ್ ಎಂಬವರ ಇಬ್ಬರು ಮಕ್ಕಳು ಕೂಡಾ ನಾಪತ್ತೆಯಾಗಿದ್ದು, ಕಾರ್ಯಾಚರಣೆ ಮುಂದುವರಿದಿದೆ.
ಈ ಮಧ್ಯೆ ಶಾಲೆಯೊಳಗೆ ಸಿಲುಕಿಕೊಂಡಿದ್ದ ಸುಮಾರು ೬೦ರಷ್ಟು ಮಂದಿಯನ್ನು ಹಗ್ಗದ ಸಹಾಯದಿಂದ ಕರೆತಂದು ಕಲ್ಲುಗುಂಡಿ ಶಾಲೆ ಮತ್ತು ಅರಂತೋಡು ತೆಕ್ಕಿಲ್ ಶಾಲೆಗೆ ಸ್ಥಳಾಂತರಿಸಲಾಗಿದೆ. ಇನ್ನೂ ನೂರಕ್ಕೂ ಅಧಿಕ ಮಂದಿ ಆ ಪ್ರದೇಶದಲ್ಲಿ ಸಿಲುಕಿಕೊಂಡಿದ್ದು, ಅವರ ರಕ್ಷಣಾ ಕಾರ್ಯ ಸಾಗಿದೆ. ಊರವರು ಸಂತ್ರಸ್ತರಿಗೆ ಆಹಾರ ತಲುಪಿಸುವ ವ್ಯವಸ್ಥೆ ಮಾಡಿದ್ದಾರೆ. ಈ ಪ್ರದೇಶದಲ್ಲಿ ಇನ್ನೂ ನೀರು ಸಹಿತವಾಗಿ ಬೃಹತ್ ಕಲ್ಲುಗಳು ಗುಡ್ಡದಿಂದ ಜಾರಿ ಬರುತ್ತಿದ್ದು, ರಕ್ಷಣಾ ಕಾರ್ಯಕ್ಕೆ ತೊಡಕಾಗಿ ಪರಿಣಮಿಸಿದೆ. ಘಟನಾ ಸ್ಥಳಕ್ಕೆ ದಕ ಜಿಲ್ಲಾ ಉಸ್ತುವಾರಿ ಸಚಿವ ಖಾದರ್ ಭೇಟಿ ನೀಡಿದ್ದಾರೆ.

Leave a Comment