ಜೋಡಿ ಹತ್ಯೆ ಆರೋಪಿಗಳ ಬಂಧನಕ್ಕೆ ಆಗ್ರಹ

ಕೋಟ, ಫೆ.೪- ಮಣೂರು ಚಿಕ್ಕನಕೆರೆಯಲ್ಲಿ ಭರತ್ ಹಾಗೂ ಯತೀಶ್ ಎಂಬವರ ಜೋಡಿ ಕೊಲೆ ಪ್ರಕರಣದ ಆರೋಪಿಗಳನ್ನು ಶೀಘ್ರ ಬಂಧಿಸಿ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ಕೋಟ ನಾಗರಿಕ ಹಿತರಕ್ಷಣಾ ವೇದಿಕೆಯ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ರವಿವಾರ ಕೋಟ ಸಂತೆ ಮಾರುಕಟ್ಟೆಯ ಸರ್ವಿಸ್ ರಸ್ತೆಯ ಸಮೀಪ ಪ್ರತಿಭಟನೆ ನಡೆಸಿತು.

ಘಟನೆ ನಡೆದು ವಾರ ಕಳೆದರೂ ಯಾವುದೇ ಆರೋಪಿಗಳನ್ನು ಬಂಧಿಸಿಲ್ಲ. ಇದರಿಂದ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಯಾಗಿದೆ. ಆದುದರಿಂದ ತನಿಖೆಯನ್ನು ತೀವ್ರಗೊಳಿಸಿ ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ಆರೋಪಿಗಳಿಗೆ ನ್ಯಾಯಾಲಯ ಗಲ್ಲು ಶಿಕ್ಷೆಯಾಗುವಂತಹ ರೀತಿಯಲ್ಲಿ ಕ್ರಮ ತೆಗೆದುಕೊಳ್ಳ ಬೇಕು. ಅಲ್ಲದೆ ಆರೋಪಿಗಳ ಕುಟುಂಬವನ್ನು ಇಲ್ಲಿಂದ ಗಡಿಪಾರು ಮಾಡ ಬೇಕು ಪ್ರತಿಭಟನಕಾರರು ಒತ್ತಾಯಿಸಿದರು. ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಈ ಕೊಲೆ ಕೃತ್ಯವು ಇಡೀ ಗ್ರಾಮಕ್ಕೆ ಕಪ್ಪುಚುಕ್ಕೆಯಾಗಿದೆ. ಮುಂದೆ ಇಂತಹ ಘಟನೆಗಳು ನಡೆಯದಂತೆ ಪೊಲೀಸರು ಕ್ರಮ ತೆಗೆದುಕೊಳ್ಳಬೇಕು. ಅಮಾಯಕ ಯುವಕರನ್ನು ಹತ್ಯೆಗೈದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಮೂರು ದಿನಗಳೊಳಗೆ ಪ್ರಕರಣದ ಆರೋಪಿಗಳ ಬಂಧಿಸದಿದ್ದರೆ ಈ ವಿಚಾರ ವನ್ನು ಮುಖ್ಯಮಂತ್ರಿ ಗಮನಕ್ಕೆ ತರಲಾಗುವುದು ಎಂದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರ್ಗಿ ಅವರಿಗೆ ಪ್ರತಿಭಟನಕಾರರು ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ಎಸ್ಪಿ, ಈ ಪ್ರಕರಣ ಸಂಬಂಧ ಈಗಾಗಲೇ ನಾಲ್ಕು ತಂಡಗಳನ್ನು ರಚಿಸಲಾಗಿದ್ದು, ಆರೋಪಿಗಳಿಗೆ ಶೋಧ ಕಾರ್ಯ ನಡೆಸಲಾಗುತ್ತಿದೆ.ಈ ಪ್ರಕರಣದಲ್ಲಿ ಯಾರೇ ತಪ್ಪಿತಸ್ಥರಿದ್ದರೂ ಅವರನ್ನು ಬಿಡುವ ಪ್ರಶ್ನೆಯೇ ಇಲ್ಲ. ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಕುಟುಂಬಗಳಿಗೆ ನೆರವಾಗುವ ನಿಟ್ಟಿನಲ್ಲಿ ಸಾರ್ವಜನಿಕ ರಿಂದ ದೇಣಿಗೆಯನ್ನು ಸಂಗ್ರಹಿಸಲಾಯಿತು. ಇಂಟೆಕ್ ರಾಜ್ಯಾಧ್ಯಕ್ಷ ರಾಕೇಶ್ ಮಲ್ಲಿ, ಜಯ ಕರ್ನಾಟಕ ಜಿಲ್ಲಾಧ್ಯಕ್ಷ ಸತೀಶ್ ಪೂಜಾರಿ, ಹೆದ್ದಾರಿ ಜಾಗೃತಿ ಸಮಿತಿಯ ಅಧ್ಯಕ್ಷ ಪ್ರತಾಪ್ ಶೆಟ್ಟಿ ಸಾಸ್ತಾನ, ಸಾಮಾಜಿಕ ಹೋರಾಟಗಾರ ದಿನೇಶ್ ಗಾಣಿಗ ಕೋಟ, ಕುಂದಾಪುರ ಪುರಸಭೆ ಮಾಜಿ ಉಪಾಧ್ಯಕ್ಷ ರಾಜೇಶ ಕಾವೇರಿ, ಕುಂದಾಪುರ ಕಲಾಕ್ಷೇತ್ರದ ಅಧ್ಯಕ್ಷ ಕಿಶೋರ್ ಕುಮಾರ್, ಕೋಟ ಜಾಮೀಯ ಮಸೀದಿ ಲಿಯಾಕತ್ ಅಲಿ, ಭಗತ್ ಸಿಂಗ್ ಕ್ರಾಂತಿಕಾರಿ ಬಳಗದ ಧನಂಜಯ್ ಕುಂದಾಪುರ, ಮೊಗವೀರ ಯುವ ಸಂಘಟನೆಯ ಎಂ.ಎಸ್. ಸಂಜೀವ, ಶಿವರಾಮ ಕೆ.ಎಂ. ಮಾತನಾಡಿದರು. ಜಿಪಂ ಸದಸ್ಯ ರಾಘವೇಂದ್ರ ಕಾಂಚನ್, ತಾಪಂ ಸದಸ್ಯೆ ಲಲಿತಾ ಪೂಜಾರಿ, ಕೋಟ ಗ್ರಾಪಂ ಅಧ್ಯಕ್ಷೆ ವನಿತಾ ಶ್ರೀಧರ್ ಆಚಾರ್ಯ, ಕೋಟತಟ್ಟು ಗ್ರಾಪಂ ಅಧ್ಯಕ್ಷ ರಘು ತಿಂಗಳಾಯ, ನ್ಯಾಯವಾದಿ ಶ್ಯಾಮ್ಸುಂದರ್ ನಾಯರಿ, ಸಾಸ್ತಾನ ವಿಠಲ ಪೂಜಾರಿ, ಕೋಡಿಕನ್ಯಾಣ ಜಯಂತ್ ಅಮೀನ್, ಮೊಗವೀರ ಯುವ ಸಂಘಟನೆಯ ಚಂದ್ರ ಮೆಂಡನ್ ಮೊದಲಾದವರು ಉಪಸ್ಥಿತರಿದ್ದರು. ಪ್ರಶಾಂತ್ ಶೆಟ್ಟಿ ಸಾಸ್ತಾನ ಕಾರ್ಯಕ್ರಮ ನಿರೂಪಿಸಿದರು.

ಪ್ರತಿಭಟನೆ ಹಿನ್ನೆಲೆಯಲ್ಲಿ ಉಡುಪಿ ಡಿವೈಎಸ್ಪಿ ಜೈಶಂಕರ್, ಕುಂದಾಪುರ ಡಿವೈಎಸ್ಪಿ ದಿನೇಶ್ ಕುಮಾರ್, ಬ್ರಹ್ಮಾವರ ವೃತ್ತ ನಿರೀಕ್ಷಕ ಶ್ರೀಕಾಂತ್, ಕೋಟ ಠಾಣಾ ಉಪನಿರೀಕ್ಷಕ ನರಸಿಂಹ ಶೆಟ್ಟಿ ಸ್ಥಳದಲ್ಲಿ ಹಾಜರಿದ್ದು, ಬಿಗಿ ಪೊಲೀಸ್ ಭದ್ರತೆಯನ್ನು ಒದಗಿಸಿದ್ದರು.

Leave a Comment