ಜೋಡಿ ಜೋಡಿ ಕಪ್ಪು ರಂಧ್ರಗಳ ಪತ್ತೆ

ಭಾರಿ ಗಾತ್ರದ ಐದು ಜೋಡಿ ಕಪ್ಪು ರಂಧ್ರಗಳನ್ನು (ಬ್ಲಾಕ್ ಹೋಲ್ಸ್) ನಾಸಾ ವಿಜ್ಞಾನಿಗಳ ತಂಡ ಪತ್ತೆ ಮಾಡಿದೆ. ಕಪ್ಪು ರಂಧ್ರಗಳ ರಚನೆ ಮತ್ತು ಅವುಗಳಲ್ಲಿರುವ ಅತಿ ಪ್ರಬಲ ಗುರುತ್ವಾಕರ್ಷಣೆ ಕುರಿತಂತೆ ಅಧ್ಯಯನ ನಡೆಸುತ್ತಿರುವ ಖಗೋಳ ವಿಜ್ಞಾನಿಗಳಿಗೆ ಈ ಕಪ್ಪು ರಂಧ್ರಗಳ ಪತ್ತೆ ಮಹತ್ವದ ಮಾಹಿತಿಯನ್ನು ಒದಗಿಸಲಿದೆ ಎಂದು ಅಧ್ಯಯನ ತಂಡ ಹೇಳಿದೆ. ಈ ಅಧ್ಯಯನ ತಂಡದಲ್ಲಿ ಭಾರತೀಯ ಮೂಲದ ಶೋಭಿತಾ ಸತ್ಪಾಲ್ ಇದ್ದಾರೆ. ಇವರು ಅಮೆರಿಕಾದ ಜಾರ್ಜ್ ಮ್ಯಾಸನ್ ವಿಶ್ವ ವಿದ್ಯಾ ನಿಲಯದಲ್ಲಿರುವ ಖಗೋಳ ವಿಜ್ಞಾನಿ.

ಕಪ್ಪು ರಂಧ್ರಗಳ ಶೋಧನಾ ಕಾರ್ಯದಲ್ಲಿ ಇನ್ಫ್ರಾರೆಡ್ ವಿಕಿರಣ ಮತ್ತು ಎಕ್ಸ್ ರೇ ವಿಧಾನಗಳನ್ನು ವಿಜ್ಞಾನಿಗಳು ಪ್ರಮುಖವಾಗಿ ಬಳಸುತ್ತಿದ್ದು ಇವು ಪರಿಣಾಮಕಾರಿ ಫಲಿತಾಂಶಗಳನ್ನು ನೀಡುತ್ತಿವೆ. ಹೀಗಾಗಿಯೇ ಪತ್ತೆಯಾಗಿರುವ 5 ಜೋಡಿ ಬೃಹತ್ ಕಪ್ಪು ರಂಧ್ರಗಳ ಶೋಧನೆಗೂ ಇದೆ ವಿಧಾನವನ್ನು ವಿಜ್ಞಾನಿಗಳು ಅನುಸರಿಸಿದ್ದರು.

ಈ ಕಪ್ಪು ರಂಧ್ರಗಳ ಪತ್ತೆ ಕಾರ್ಯದಲ್ಲಿ ಇನ್ಫ್ರಾರೆಡ್ ಸ್ಕೈ ಎಕ್ಸ್‌ಪ್ಲೊರರ್ ಸರ್ವೆ ಮತ್ತು ಆರಿ ಜೋನಾದ ಬೃಹತ್ ಬೈನಾಕುಲರ್ ದೂರದರ್ಶಕಗಳ ನೇರವಿನ ಜೊತೆಗೆ ಇತರೆ ದೂರದರ್ಶಕಗಳಿಂದ ಸಂಗ್ರಹವಾಗಿರುವ ಮಾಹಿತಿಯನ್ನು ಕಲೆ ಹಾಕಿ ಅಧ್ಯಯನ ನಡೆಸಲಾಗಿದೆ.

ಆಕಾರದಲ್ಲಿ ದೈತ್ಯ

ಈಗ ಪತ್ತೆಯಾಗಿರುವ 5 ಜೋಡಿ ಕಪ್ಪು ರಂಧ್ರಗಳು ಭಾರಿ ಬೃಹತ್ ಗಾತ್ರದವು. ಸೂರ್ಯನ ತೂಕಕ್ಕಿಂತ 8 ರಿಂದ 36 ಪಟ್ಟು ಹೆಚ್ಚಿನ ದ್ರವ್ಯರಾಶಿ ಹೊಂದಿರುವ ಮೂಲಕ ಒಂದೊಂದು ಕಪ್ಪು ರಂಧ್ರವೂ ಸೂರ್ಯನಿಗಿಂತ ಹಲವು ಲಕ್ಷ ಪಟ್ಟು ತೂಕವನ್ನು ಹೊಂದಿವೆ.

ಎರಡು ನಕ್ಷತ್ರ ಮಂಡಲಗಳು (ಗೆಲಾಕ್ಸಿಗಳು) ಪರಸ್ಪರ ಡಿಕ್ಕಿ ಹೊಡೆದು ಒಂದು ಗೂಡಿ ಈ ಬೃಹತ್ ಕಪ್ಪು ಕುಳಿಗಳು ರಚನೆಯಾಗಿವೆ.

ಆದರೆ ಈ ಎರಡು ಗೆಲಾಕ್ಸಿಗಳು ಪರಸ್ಪರ ಎಷ್ಟು ದೂರದಲ್ಲಿವೆ ಎಂದರೆ ಇವುಗಳ ಕೇಂದ್ರ ಬಿಂದುಗಳು ಸಾವಿರ ಸಾವಿರ ಬೆಳಕಿನ ವರ್ಷಗಳಷ್ಟು ಅಂತರದಲ್ಲಿವೆ ಎಂದೂ ಅಧ್ಯಯನ ತಂಡ ಹೇಳಿದೆ.

ಕಪ್ಪು ರಂಧ್ರಗಳು

ತಾರೆಗಳ ಜೀವಿತಾ ಅವಧಿಯ ಯಾವುದೋ ಹಂತದಲ್ಲಿ ಅದರಲ್ಲಿರುವ ದ್ರವ್ಯ ರಾಶಿಯಲ್ಲಿರುವ ಪರಮಾಣು ಇಂಧನ ಪ್ರಮಾಣ ಕಡಿಮೆ ಯಾಗುತ್ತ ಬಂದಾಗ ತಾರೆಯ ಕೇಂದ್ರ ಭಾಗದಲ್ಲಿರುವ ತಾಪಮಾನದಲ್ಲಿ ಇಳಿಕೆ ಯಾಗುತ್ತದೆ. ಈ ಹಂತದಲ್ಲಿ ನಕ್ಷತ್ರ ಗಾತ್ರದಲ್ಲಿ ಕುಗ್ಗುತ್ತ ಗುರುತ್ವಾಕರ್ಷಣೆ ಸೆಳೆತಕ್ಕೆ ಒಳಗಾಗಿ ಕುಸಿಯುತ್ತದೆ.  ಇದು ಕಪ್ಪು ರಂಧ್ರ ನಿರ್ಮಾಣಕ್ಕೆ ಕಾರಣವಾಗುತ್ತದೆ.

ಕಪ್ಪು ರಂಧ್ರಗಳು ಅತಿ ಪ್ರಬಲ ಗುರುತ್ವಾಕರ್ಷಣೆ ಹೊಂದಿರುತ್ತವೆ. ಇವುಗಳ ಗುರುತ್ವಾಕರ್ಷಣೆ ಎಷ್ಟು ಪ್ರಬಲವಾಗಿರುತ್ತದೆ. ಎಂದರೆ ಇದರ ಗುರುತ್ವಾಕರ್ಷಣೆಗೆ ಒಳಗಾಗಿ ಇದರ ಒಳಕ್ಕೆ ಸೆಳೆಯಲ್ಪಡುವ ಯಾವುದೇ ವಸ್ತು ಮತ್ತೆ ಹೊರ ಬರಲು ಸಾಧ್ಯವೇ ಇಲ್ಲ. ಒಳ ಹೊಕ್ಕ ಬೆಳಕೂ ಕೂಡ ಹೊರ ಬರಲು ಸಾಧ್ಯವಾಗದಷ್ಟು ಪ್ರಬಲ ಗುರುತ್ವಾಕರ್ಷಣೆ ಇವು ಹೊಂದಿರುತ್ತದೆ. ಕಪ್ಪು ರಂಧ್ರಗಳಿಗೆ ಈ ಗುರುತ್ವಾಕರ್ಷಣೆ ಹೇಗೆ ಬರುತ್ತದೆ ಎಂಬುದರ ಬಗ್ಗೆ ನಿರಂತರವಾಗಿ ನಾಸಾ ಅಧ್ಯಯನ ನಡೆಸುತ್ತಿದೆ.

ಇತ್ತೀಚೆಗೆ ಖಗೋಳ ವಿಜ್ಞಾನಿಗಳ ತಂಡ 5 ಜೋಡಿ ಬೃಹತ್ ಕಪ್ಪು ರಂಧ್ರಗಳನ್ನು ಪತ್ತೆ ಹಚ್ಚಿದೆ.

ಇವುಗಳ ಪತ್ತೆಯಿಂದ ದೊಡ್ಡ ದೊಡ್ಡ ಕಪ್ಪು ರಂಧ್ರಗಳು ಹೇಗೆ ನಿರ್ಮಾಣ ವಾಗುತ್ತವೆ ಹಾಗೂ ಅವುಗಳಿಗೆ ಬೆಳಕನ್ನು ಹೊರಕ್ಕೆ ಬಿಡದಂತಹ ಗುರುತ್ವಾಕರ್ಷಣೆ ಹೇಗೆ ಬರುತ್ತದೆ ಎಂಬುದರ ಬಗ್ಗೆ ಅಧ್ಯಯನದಲ್ಲಿ ತೊಡಗಿರುವ  ಖಗೋಳ ವಿಜ್ಞಾನಿಗಳಿಗೆ ಇವು ಸಾಕಷ್ಟು ಮಾಹಿತಿ ಒದಗಿಸಲಿದೆ ಎಂದು ಅಧ್ಯಯನ ತಂಡ ಹೇಳಿದೆ. 

– ಉತ್ತನೂರು ವೆಂಕಟೇಶ್

Leave a Comment