ಜೋಟ್‌ ರೂಟ್‌ ಶತಕ : ಬೃಹತ್‌ ಮುನ್ನಡೆಯತ್ತ ಇಂಗ್ಲೆಂಡ್‌

ಸೇಂಟ್‌ ಲೂಸಿಯಾ, ಫೆ 12- ನಾಯಕ ಜೋ ರೂಟ್‌ (111* ರನ್, 209 ಎಸೆತಗಳು) ಅವರ ವೃತ್ತಿ ಜೀವನದ 16 ಶತಕದ ಬಲದಿಂದ ಇಂಗ್ಲೆಂಡ್‌, ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್‌ನಲ್ಲಿ ವೆಸ್ಟ್‌ ಇಂಡೀಸ್‌ಗೆ ಬೃಹತ್‌ ಮೊತ್ತದ ಗುರಿ ನೀಡುವತ್ತ ದಾಪುಗಾಲು ಇಟ್ಟಿದೆ.

 

ಮೊದಲೆರಡು ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದ ಇಂಗ್ಲೆಂಡ್‌ ಈಗಾಗಲೇ ಸರಣಿ ಕೈಚೆಲ್ಲಿಕೊಂಡಿದೆ. ಆದರೆ, ಅಂತಿಮ ಹಾಗೂ ಮೂರನೇ ಪಂದ್ಯದಲ್ಲಿ ಎಚ್ಚೆತ್ತುಕೊಂಡ ಇಂಗ್ಲೆಂಡ್‌, ಉತ್ತಮ ಪ್ರದರ್ಶನ ತೋರುವ ಮೂಲಕ ಆತಿಥೇಯರ ವಿರುದ್ಧ ಮೇಲುಗೈ ಸಾಧಿಸಿದೆ.

 

ಇಲ್ಲಿನ ಡೆರೆನ್‌ ಸಮ್ಮಿ ರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ವಿಕೆಟ್‌ ನಷ್ಟವಿಲ್ಲದೆ 19 ರನ್‌ ಗಳಿಂದ ದ್ವಿತೀಯ ಇನಿಂಗ್ಸ್‌ ಮುಂದುವರಿಸಿದ ಪ್ರವಾಸಿ ಇಂಗ್ಲೆಂಡ್‌, ಮೂರನೇ ದಿನದ ಅಂತ್ಯಕ್ಕೆ 100 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ ಕಳೆದುಕೊಂಡು 325 ರನ್‌ ದಾಖಲಿಸಿತು. ಇದರೊಂದಿಗೆ 448 ರನ್‌ ಬೃಹತ್‌ ಮುನ್ನಡೆ ಸಾಧಿಸಿತು.

 

ರೋರಿ ಬರ್ನ್ಸ್‌(10 ರನ್‌) ಹಾಗೂ ಕೀಟನ್‌ ಜೆನ್ನಿಂಗ್ಸ್ (23 ರನ್‌) ಜೋಡಿ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಇರಲಿಲ್ಲ. ಆದರೆ, ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಮಾಡಿದ ಜೋ ಡೆನ್ಲಿ 99 ಎಸೆತಗಳಲ್ಲಿ  69 ರನ್‌ ಗಳಿಸಿ ತಂಡದ ಮೊತ್ತ 100ರ ಗಡಿ ದಾಟಿಸಿದರು. ಬಳಿಕ ಅವರು, ಗ್ಯಾಬ್ರಿಯಲ್‌ ಎಸೆತದಲ್ಲಿ ಔಟ್‌ ಆದರು.

 

ರೂಟ್‌-ಬಟ್ಲರ್‌ ಜುಗಲ್ಬಂದಿ:

 

ನಾಯಕ ಜೋ ರೂಟ್‌ ಹಾಗೂ ಜೋಸ್‌ ಬಟ್ಲರ್‌ ಜೋಡಿಯು ಉತ್ತಮ ಬ್ಯಾಟಿಂಗ್‌ ಮಾಡುವಲ್ಲಿ ಸಫಲವಾಯಿತು. ಈ ಜೋಡಿ ಮುರಿಯದ ನಾಲ್ಕನೇ ವಿಕೆಟ್‌ಗೆ 107 ರನ್‌ಗಳ ಜತೆಯಾಟವಾಡಿತು. ಇದರೊಂದಿಗೆ ತಂಡದ ಮೊತ್ತ 250ರ ಗಡಿ ದಾಟಿತು. ತಮ್ಮ ಸೊಗಸಾದ ಬ್ಯಾಟಿಂಗ್‌ನಿಂದ ಅರ್ಧ ಶತಕ ಗಳಿಸಿದ್ದ ಜೋಸ್‌ ಬಟ್ಲರ್‌(56 ರನ್‌, 115 ಎಸೆತಗಳು) ಅವರನ್ನು ಕೇಮರ್‌ ರೋಚ್‌ ಕ್ಲೀನ್‌ ಬೌಲ್ಡ್‌ ಮಾಡಿದರು.

 

ಕಳೆದ ಎರಡು ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ್ದ ನಾಯಕ ಜೋ ರೂಟ್‌ ಮೂರನೇ ಪಂದ್ಯದ ದ್ವಿತೀಯ ಇನಿಂಗ್ಸ್‌ನಲ್ಲಿ ಅಮೋಘ ಬ್ಯಾಟಿಂಗ್‌ ಪ್ರದರ್ಶನ ನೀಡಿದರು. ಸತತ ಐದು ಇನಿಂಗ್ಸ್‌ಗಳಲ್ಲಿ 30ರ ಗಡಿ ದಾಟುವಲ್ಲಿ ಎಡವಿದ್ದ ರೂಟ್‌, ಈ ಇನಿಂಗ್ಸ್‌ನಲ್ಲಿ ವಿಂಡೀಸ್ ಬೌಲರ್‌ಗಳಿಗೆ ಪ್ರಬಲ ಪ್ರತಿರೋಧ ತೋರಿದರು. ಎದುರಿಸಿದ 209 ಎಸೆತಗಳಲ್ಲಿ 9 ಬೌಂಡರಿ ಸಹಿತ ಅಜೇಯ 111 ರನ್‌ ದಾಖಲಿಸಿ ವಿಕೆಟ್‌ ಕಾಯ್ದುಕೊಂಡಿದ್ದಾರೆ. ಮತ್ತೊಂದು ತುದಿಯಲ್ಲಿ ಬೆನ್‌ ಸ್ಟೋಕ್ಸ್‌ (29 * ರನ್‌) ಇದ್ದಾರೆ.

 

 

ಸಂಕ್ಷಿಪ್ತ ಸ್ಕೋರ್‌

 

ಇಂಗ್ಲೆಂಡ್‌

ಪ್ರಥಮ ಇನಿಂಗ್ಸ್‌: 277

ದ್ವಿತೀಯ ಇನಿಂಗ್ಸ್‌: 325/4(100)

ಜೋ ರೂಟ್‌-111*

ಜೋ ಡೆನ್ಲಿ-69

ಬಟ್ಲರ್‌-56

ಬೌಲಿಂಗ್‌: ಕಿಮೋ ಪಾಲ್‌ 11 ಕ್ಕೆ 1

 

 

ವೆಸ್ಟ್‌ ಇಂಡೀಸ್‌

ಪ್ರಥಮ ಇನಿಂಗ್ಸ್‌: 154

 

 

 

Leave a Comment