ಜೈನರ ಧಾರ್ಮಿಕ ಕ್ಷೇತ್ರ ಮಂದರಗಿರಿ ಬಸ್ತಿ

ತುಮಕೂರು, ನ. ೧೪- ಜಿಲ್ಲೆಯು ಧಾರ್ಮಿಕವಾಗಿ ತನ್ನದೇ ಆದ ವಿಶಿಷ್ಟ ಇತಿಹಾಸವನ್ನು ಹೊಂದಿದೆ. ಹಿಂದು, ಕ್ರೈಸ್ತ, ಇಸ್ಲಾಂ ಸೇರಿದಂತೆ ಸರ್ವಧರ್ಮಗಳ ನೆಲೆಬೀಡಾಗಿರುವ ಜಿಲ್ಲೆಯಲ್ಲಿ  ಜೈನ ಧರ್ಮದವರೂ ತಮ್ಮ ನೆಲೆಯನ್ನು ಕಂಡುಕೊಂಡಿದ್ದಾರೆ.

ಜಿಲ್ಲೆಯ ಕೊರಟಗೆರೆ, ಮಧುಗಿರಿ, ಗುಬ್ಬಿ ಹಾಗೂ ತುಮಕೂರು ತಾಲ್ಲೂಕುಗಳಲ್ಲಿ ಕಾಣ ಸಿಗುವ ಜೈನ ಮಂದಿರಗಳು, ಬಸದಿ, ಸ್ಮಾರಕಗಳು ಇದಕ್ಕೆ ಸಾಕ್ಷಿಯಾಗಿದೆ.

ತುಮಕೂರಿಗೆ ಜೈನ ಧರ್ಮ ಯಾವಾಗ ಬಂದಿತು ಎಂಬುದು ನಿರ್ಧಿಷ್ಟವಾಗಿ ತಿಳಿದು ಬಂದಿಲ್ಲ. ಆದರೆ ಈ ಧರ್ಮ ಕ್ರಿ.ಶ. 677ರಲ್ಲಿ ತನ್ನ ಉನ್ನತಿ ಕಂಡುಕೊಂಡಿತ್ತು.   ಜೈನ ಧರ್ಮೀಯರು ತಮ್ಮ ಧರ್ಮ ಪ್ರಚಾರಕ್ಕಾಗಿ  ಜಿನಮಂದಿರಗಳನ್ನು ನಿರ್ಮಿಸಿಕೊಂಡು ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಬೆಳೆಸಿಕೊಂಡು ಬಂದಿದ್ದಾರೆ. ಜಿಲ್ಲೆಯಲ್ಲಿರುವ ಜೈನ ಸ್ಮಾರಕಗಳಲ್ಲಿ ಬಸದಿ ಬೆಟ್ಟವು ಪ್ರಮುಖವಾದುದು. ತುಮಕೂರು ನಗರದ ಹೊರವಲಯದಲ್ಲಿರುವ ಈ ಬಸದಿ ಬೆಟ್ಟದಲ್ಲಿರುವ ಬಸದಿಗಳು, ವಿಗ್ರಹಗಳು ಅಪೂರ್ವವಾಗಿವೆ.

ಜೈನ ಧರ್ಮದ ಬಗ್ಗೆ ಮಾಹಿತಿ ನೀಡುವ ಕೆಲವು ಶಾಸನಗಳು ಈ ಬಸದಿ ಬೆಟ್ಟದಲ್ಲಿವೆ. ಜೈನ ತೀರ್ಥಂಕರರು ವಾಸ ಮಾಡಿದ ಸ್ಥಳವೇ ಈ ಬಸದಿ ಬೆಟ್ಟ. ಬೆಟ್ಟದ ಮೇಲೆ ನಾಲ್ಕು ಬಸದಿಗಳಿದ್ದು,  ಇವುಗಳಲ್ಲಿ ಎರಡು ಚಂದ್ರಪ್ರಭ ಬಸದಿಗಳಾದರೆ, ಉಳಿದೆರಡರಲ್ಲಿ ಒಂದು ಸುಪಾಶ್ರ್ವನಾಥ ಬಸದಿ. ಮತ್ತೊಂದು ಪಾರ್ಶ್ವನಾಥ ತೀರ್ಥಂಕರ ಬಸದಿ.  ಚಂದ್ರಪ್ರಭ ತೀರ್ಥಂಕರರ ಬಸದಿಯು ನವರಂಗದ ಛಾವಣಿ ಅಥವಾ ಭುವನೇಶ್ವರದಲ್ಲಿರುವ ದಿಕ್ಪಾಲಕರ ಮತ್ತು ಮಧ್ಯದಲ್ಲಿರುವ ಸರ್ಪಶಿಲ್ಪಗಳು ವಿಶಿಷ್ಟವಾಗಿ ಗಮನ ಸೆಳೆಯುತ್ತದೆ.

ಈ ಬಸದಿ ಬೆಟ್ಟವನ್ನು ಮಂದರಗಿರಿ ಎಂದು ಕರೆಯುತ್ತಾರೆ. ಬಸದಿ ಬೆಟ್ಟಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಜೈನ ಧಾರ್ಮಿಕರ ಪುಣ್ಯಕ್ಷೇತ್ರವಾಗಿರುವ ಈ ಬಸದಿ ಬೆಟ್ಟಕ್ಕೆ ಹತ್ತಲು 400 ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ.  ಬೆಟ್ಟದ ಮೇಲೆ ಬ್ರಹ್ಮ, ಯಕ್ಷ ದೇವರ ಮಂದಿರವಿದೆ. ಬಸದಿಗಳ ಪಕ್ಕದಲ್ಲಿ ಒಂದು ಕಟ್ಟೆಯನ್ನು ಕಟ್ಟಲಾಗಿದೆ. ಬೆಟ್ಟದ ಹಿಂಭಾಗದಲ್ಲಿ ಮೈದಾಳ ಕೆರೆಯಿದ್ದು, ಇದನ್ನು ಪದ್ಮಾವತಿ ಕೆರೆಯೆಂದೂ ಕರೆಯುತ್ತಾರೆ. ಪದ್ಮಾವತಿ ಎಂಬ ಮಹಿಳೆ ಕೆರೆಯನ್ನು ಕಟ್ಟಿಸಿ ಭೂಮಿಯನ್ನು ದಾನ ಮಾಡಿದ್ದರಿಂದ ಈ ಕೆರೆಗೆ ಪದ್ಮಾವತಿ ಎಂಬ ಹೆಸರು ಇತ್ತು ಎಂದು ಐತಿಹಾಸಿಕ ಪುರಾವೆಗಳು ತಿಳಿಸುತ್ತವೆ.   ಬೆಟ್ಟದ ಮೇಲಿನ ಬಸದಿಗಳ ಮುಂಭಾಗದಲ್ಲಿರುವ ಹೊಯ್ಸಳ ರಾಜ ನರಸಿಂಹನ ಕಾಲದ ಶಾಸನದಲ್ಲಿ ಇದರ ಬಗ್ಗೆ ಉಲ್ಲೇಖವಿರುವುದು ಕಾಣಬಹುದು.

ಅಲ್ಲದೆ ಕ್ರಿ.ಶ. 1160ರಲ್ಲಿ ಹೊಯ್ಸಳ ರಾಜ ನರಸಿಂಹನ ಪ್ರಧಾನಿ ಎರೆಯಮಂಗಯ್ಯನ ಪತ್ನಿ ಮಾಚಿಯಕ್ಕನು ಜಿನಮಂದಿರವನ್ನು ನಿರ್ಮಿಸಿದ ಬಗ್ಗೆ ಈ ಶಾಸನ ತಿಳಿಸುತ್ತದೆ. ಈ ಜಿನಾಲಯಗಳ ಹಿಂಭಾಗದ ಇಳಿಜಾರಿನಲ್ಲಿ ಬಂಡೆಯ ಮೇಲೆ ಹಲವು ಶಾಸನಗಳಿದ್ದು, ಹಾಳಾಗುವ ಸ್ಥಿತಿಯಲ್ಲಿವೆ.  ಇವುಗಳನ್ನು ಈಗ ಜೀರ್ಣೋದ್ಧಾರ ಮಾಡಿಸಿ ಸಂರಕ್ಷಿಸಲಾಗುತ್ತಿದೆ. ಈ ಶಾಸನಗಳಲ್ಲಿ ಕೆಲವೇ ಅಕ್ಷರಗಳು ಕಾಣ ಸಿಗುವುದರಿಂದ ಇವುಗಳ ಕಾಲ ಸುಮಾರು 10ನೇ ಶತಮಾನವೆಂದು ನಿರ್ಧರಿಸಲಾಗಿದೆ.

ತುಮಕೂರಿನಿಂದ ಬೆಂಗಳೂರಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿ 4ರಲ್ಲಿರುವ ಪಂಡಿತನಹಳ್ಳಿಯಿಂದ ಸ್ವಲ್ಪ ದೂರದಲ್ಲಿದೆ ಈ ಬಸದಿ ಬೆಟ್ಟ.  ಬೆಟ್ಟಕ್ಕೆ ಹೋಗಲು ಸುಗಮ ರಸ್ತೆ ಮಾರ್ಗವಿದೆ.

ಗಮನ ಸೆಳೆಯುವ ಗುರುಮಂದಿರ

ಬಸದಿ ಬೆಟ್ಟವನ್ನು ಹತ್ತುವ ಮೊದಲೇ 1008 ಚಂದ್ರಪ್ರಭ ತೀರ್ಥಂಕರರ ವಿಗ್ರಹ ಸಿಗುತ್ತದೆ. ಸರಿ ಸುಮಾರು 21 ಅಡಿ ಎತ್ತರವಿರುವ ಈ ವಿಗ್ರಹದ ಮುಂದೆ ಒಂದು ಸುಂದರ ಉದ್ಯಾನವನ್ನು ನಿರ್ಮಾಣ ಮಾಡಲಾಗಿದೆ. ಇದರಲ್ಲಿ ನೃತ್ಯಕಾರಂಜಿ ಮತ್ತು ಗಿಡ-ಮರಗಳು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇಲ್ಲಿಯೇ ಜೈನ ತೀರ್ಥಂಕರ(ಗುರು) ಮಂದಿರವಿದೆ. ಮುಗಿಲೆತ್ತರಕ್ಕೆ ಇರುವ ಪಿಂಚಿ(ನವಿಲು ಗರಿ) ಆಕಾರದ ಗುರು ಮಂದಿರದಲ್ಲಿ ಜೈನ ತೀರ್ಥಂಕರರ ದಿನನಿತ್ಯದ ಜೀವನ ಶೈಲಿಯ ದೃಶ್ಯಗಳನ್ನು ಚಿತ್ರಿಸಲಾಗಿದೆ. ಅಲ್ಲದೆ ಜೈನಗುರು ಮುನಿಗಳಾದ ಶಾಂತಿಸಾಗರ ಮುನಿರಾಜರ ಪ್ರತಿಮೆ,  ಫೋಟೋ ಗ್ಯಾಲರಿ ಈ ಗುರು ಮಂದಿರದಲ್ಲಿದೆ.  ಫೋಟೋ ಗ್ಯಾಲರಿಯಲ್ಲಿ ಜೈನ ತೀರ್ಥಂಕರರ ಜೀವನಶೈಲಿಯನ್ನು ಬಿಂಬಿಸುವ ಛಾಯಾಚಿತ್ರಗಳಿದ್ದು, ಜೈನ ಧರ್ಮ ಪರಂಪರೆಯನ್ನು ತಿಳಿಸುವಂತಹ ಫೋಟೋ ಸಂಗ್ರಹಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಜೈನ ಧರ್ಮದ ವಿವಿಧ ಆಚಾರ, ಸಂಪ್ರದಾಯಗಳನ್ನೊಳಗೊಂಡ ಫೋಟೋ ಗ್ಯಾಲರಿ ಪ್ರೇಕ್ಷಕರನ್ನು ಸೆಳೆಯುತ್ತದೆ.  ಕರ್ನಾಟಕದಲ್ಲೇ ಮೊದಲನೇಯದು ಎನ್ನಲಾದ ನವಿಲುಗರಿ ಮಾದರಿಯ ಈ ಗುರು ಮಂದಿರ ಭಾರತದಲ್ಲಿ ಎರಡನೆಯದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಬಸದಿ ಬೆಟ್ಟದಲ್ಲಿ ಹಲವು ಬಂಡೆಗಳ ಮೇಲೆ ಪ್ರಾಣಿ-ಪಕ್ಷಿಗಳ ಚಿತ್ರಗಳನ್ನು ಬಿಡಿಸಲಾಗಿದೆ. ಇತ್ತೀಚೆಗೆ ಭಗವಾನ್ 1008 ಶ್ರೀ ಚಂದ್ರಪ್ರಭ ತೀರ್ಥಂಕರರ ಸಿದ್ಧಕ್ಷೇತ್ರ ಸಮಿತಿಯನ್ನು ರಚಿಸಿ ಬೆಟ್ಟದ ಜೀರ್ಣೋದ್ಧಾರ ಕಾರ್ಯವನ್ನು ನಡೆಸಿಕೊಂಡು ಬರುತ್ತಿದೆ. ಮಂದರಗಿರಿ ಅಥವಾ ಬಸದಿ ಬೆಟ್ಟವೆಂದು ಪ್ರಸಿದ್ಧಿ ಪಡೆದಿರುವ ಈ ತಾಣ  ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುತ್ತಿದೆ.

Leave a Comment