ಜೇಟ್ಲಿ ನಿಧನ ವಾಲಾ ಸಂತಾಪ

ಬೆಂಗಳೂರು, ಆ. ೨೪- ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ನಿಧನಕ್ಕೆ ರಾಜ್ಯಪಾಲ ವಜುಬಾಯಿ ವಾಲಾ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಸೇರಿದಂತೆ, ನಾಡಿನ ಹಲವು ಗಣ್ಯರು ಶೋಕ ವ್ಯಕ್ತಪಡಿಸಿದ್ದಾರೆ.

ಅರುಣ್ ಜೇಟ್ಲಿ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ನಾಳೆ ಅವರ ಅಂತಿಮ ಸಂಸ್ಕಾರದಲ್ಲಿ ಭಾಗವಹಿಸಲಿದ್ದೇನೆ. ಅವರಿಗೆ ಯಾವ ರೀತಿ ಶ್ರದ್ಧಾಂಜಲಿ ಸಲ್ಲಿಸಬೇಕು ಎಂಬುದು ಗೊತ್ತಾಗುತ್ತಿಲ್ಲ ಎಂದು ಹೇಳಿದ್ದಾರೆ.

ಈ ದೇಶ ಕಂಡ ಅಪ್ರತಿಮ ನಾಯಕ, ಅಪರೂಪದ ರಾಜಕಾರಣಿ, ಪ್ರತಿಪಕ್ಷಗಳು ಮೆಚ್ಚುವಂತೆ ಕೆಲಸ ಮಾಡುತ್ತಿದ್ದರು. ಅವರ ಮೇಲೆ ಅಪಾರ ಗೌರವ ಇಟ್ಟುಕೊಂಡಿದ್ದೆ. ಅಪ್ರತಿಮ ನಾಯಕರನ್ನು ಕಳೆದುಕೊಂಡು ಬಿಜೆಪಿ ಪಕ್ಷ ಬಡವಾಗಿದೆ ಎಂದು ಹೇಳಿದ್ದಾರೆ.

ಇಂದು ಮಧ್ಯಾಹ್ನ 2 ಗಂಟೆಗೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ಪತ್ರಿಕಾಗೋಷ್ಠಿ ಕರೆದಿದ್ದರು. ಆದರೆ ಅರುಣ್ ಜೇಟ್ಲಿ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ, ಪತ್ರಿಕಾಗೋಷ್ಠಿಯನ್ನು ಮುಂದೂಡಿದ್ದಾರೆ. ಅವರು, ಅರುಣ್ ಜೇಟ್ಲಿ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಹೆಚ್.ಡಿ. ಕುಮಾರಸ್ವಾಮಿ, ಸಂಸದ ಬಿ.ಎನ್. ಬಚ್ಚೇಗೌಡ ಸೇರಿದಂತೆ, ಹಲವು ಗಣ್ಯರು, ಜೇಟ್ಲಿ ಅವರ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ.

Leave a Comment