ಜೆ‌ಡಿಎಸ್ ಸಹವಾಸ ಬೇಡ- ಜಬ್ಬಾರ್ ಗುಡುಗು

(ನಮ್ಮ ಪ್ರತಿನಿಧಿಯಿಂದ)
ಬೆಂಗಳೂರು, ಜು. ೧೧- ವಿಧಾನ ಪರಿಷತ್‌ನ ಸಭಾಪತಿ ಸ್ಥಾನ ಕಾಂಗ್ರೆಸ್ ಪಕ್ಷಕ್ಕೆ ಸಿಗಬೇಕು. ಇಲ್ಲದಿದ್ದರೆ ಮೈತ್ರಿ ಸರ್ಕಾರವೂ ಬೇಡ, ಜೆಡಿಎಸ್ ಜತೆ ಹೊಂದಾಣಿಕೆಯೂ ಬೇಡ ಎಂದು ವಿಧಾನ ಪರಿಷತ್‌‌‌ನ ಕಾಂಗ್ರೆಸ್ ಸದಸ್ಯ ಅಬ್ದುಲ್ ಜಬ್ಬಾರ್ ಗುಡುಗಿದರು.
ವಿಧಾನಸಭೆಯ ಸಭಾಂಗಣದಲ್ಲಿಂದು ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಭಾಪತಿ ಸ್ಥಾನವನ್ನು ಕಾಂಗ್ರೆಸ್‌ಗೆ ಪಡೆಯುವ ಬಗ್ಗೆ ನಡೆದ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಅಬ್ದುಲ್ ಜಬ್ಬಾರ್, ಯಾವುದೇ ಕಾರಣಕ್ಕೂ ಜೆಡಿಎಸ್‌ಗೆ ಸಭಾಪತಿ ಸ್ಥಾನ ಹೋಗಬಾರದು. ಕಾಂಗ್ರೆಸ್ ಸದಸ್ಯರುಗಳೇ ಹೆಚ್ಚಾಗಿದ್ದಾರೆ, ನಮಗೆ ಆ ಸ್ಥಾನ ಸಿಗಬೇಕು. ಸಿಗುವಂತೆ ನೋಡಿಕೊಳ್ಳಿ ಎಂದು ನಾಯಕರುಗಳಿಗೆ ಮನವಿ ಮಾಡಿ, ಒಂದು ವೇಳೆ ಸಭಾಪತಿ ಸ್ಥಾನ ಬಿಟ್ಟುಕೊಡಲು ಜೆಡಿಎಸ್ ಒಪ್ಪದಿದ್ದರೆ ಸಮ್ಮಿಶ್ರ ಸರ್ಕಾರವೇ ಬೇಡ ಎಂಬ ಅರ್ಥದಲ್ಲಿ ಮಾತನಾಡಿದರು ಎಂದ ಮೂಲಗಳು ಹೇಳಿವೆ.
ವಿಧಾನ ಪರಿಷತ್‌ನ ಸಭಾಪತಿ ಸ್ಥಾನವನ್ನು ಜೆಡಿಎಸ್‌ಗೆ ಬಿಟ್ಟು ಕೊಡುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಹೊಂದಿದೆ. ಹಾಗಾಗಿ ಸಭಾಪತಿ ಸ್ಥಾನ ನಮಗೆ ಬಿಡಬೇಕು ಎಂದು ಸಭೆಯಲ್ಲಿ ಪಾಲ್ಗೊಂಡ ಹಲವು ವಿಧಾನ ಪರಿಷತ್ ಸದಸ್ಯರು ಹೇಳಿದರು ಎನ್ನಲಾಗಿದೆ.

Leave a Comment