ಜೆಸಿಬಿ ಬಳಸಿ ಜಯಮಂಗಲಿ ನದಿಯಿಂದ ಮರಳು ಲೂಟಿ

ಮಧುಗಿರಿ, ನ. ೯- ತಾಲ್ಲೂಕಿನ ಜೀವನದಿ ಜಯಮಂಗಲಿ ನದಿಯಿಂದ ಗುತ್ತಿಗೆದಾರನೊಬ್ಬ ಅಕ್ರಮವಾಗಿ ತನ್ನ ಜಮೀನು ಎಂದು ಹೇಳಿಕೊಂಡು ಜೆಸಿಬಿ ಯಂತ್ರದಿಂದ ಮರಳು ಲೂಟಿ ಮಾಡುತ್ತಿದ್ದು, ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದು, ಒಂದು ಜೆಸಿಬಿ ಹಾಗೂ 1 ಟ್ರಾಕ್ಟರ್‌ನ್ನು ಪೋಲಿಸರು ವಶಕ್ಕೆ ಪಡೆದಿದ್ದಾರೆ.

ತಾಲ್ಲೂಕಿನ ಪುರವರ ಹೋಬಳಿಯ ಸಂಕಾಪುರ ಗೇಟ್ ಬಳಿಯ ಜಯಮಂಗಲಿ ನದಿಯಲ್ಲಿ ಈ ಕೃತ್ಯ ನಡೆಯುತ್ತಿದ್ದು, ರಾಜಾರೋಷವಾಗಿ ಮರಳು ಲೂಟಿ ನಡೆಸಲು ದಂಧೆಕೋರರು ಮುಂದಾಗಿದ್ದಾರೆ.

ಕಳೆದ 6 ತಿಂಗಳ ಹಿಂದೆ ಇದೇ ಜಾಗದಲ್ಲಿ ಮರಳು ತುಂಬಿದ್ದಕ್ಕೆ ತಾಲ್ಲೂಕು ಆಡಳಿತ ಕಡಿವಾಣ ಹಾಕಿದ್ದು, ನದಿಯೊಳಗೆ ಯಾವುದೇ ವಾಹನ ಬಾರದಂತೆ ಗುಂಡಿ ತಗೆಯಲಾಗಿತ್ತು. ನದಿ ಪಕ್ಕದ ಜಮೀನು ಮಾಲೀಕ ಗುತ್ತಿಗೆದಾರ ಮಂಜುನಾಥ್ ಎಂಬಾತ ಜಮೀನಿನಲ್ಲಿ ರಸ್ತೆ ಮಾಡುವ ನೆಪದಲ್ಲಿ ಜೆಸಿಬಿಯನ್ನು ನದಿಯೊಳಗೆ ಇಳಿಸಿದ್ದು, ಮರಳನ್ನು ಜಮೀನಿನಲ್ಲಿ ಕ್ರೂಢೀಕರಿಸಿಕೊಳ್ಳುತ್ತಿದ್ದರು. ಆ ಸಮಯಕ್ಕೆ ಅಲ್ಲಿಗೆ ಬಂದ ಸಾಮಾಜಿಕ ಕಾರ್ಯಕರ್ತರಾದ ರಾಮಚಂದ್ರಪ್ಪ, ಬಾಬು, ಮುದ್ದರಂಗಪ್ಪ, ಪ್ರಸನ್ನಕುಮಾರ್ ಎಂಬುವರು ಈ ಅಕ್ರಮಕ್ಕೆ ತಡೆಯೊಡ್ಡಿದ್ದಾರೆ. ಆಗ ಮಾತಿನ ಚಕಮಕಿ ನಡೆದು ವಿಷಯ ಪೋಲಿಸರ ಕಿವಿಗೆ ಬಿದ್ದಿದ್ದು, ಈಗ ಸದರಿ 2 ವಾಹನಗಳು ಪೋಲಿಸ್ ಠಾಣೆಯಲ್ಲಿವೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ತಾಲ್ಲೂಕು ಆಡಳಿತ ಕಾನೂನು ರೀತಿ ಕ್ರಮಕ್ಕೆ ಮುಂದಾಗುವುದೋ ಕಾದು ನೋಡಬೇಕು.

ಈ ಹಿಂದೆ ಇದೇ ನದಿಯಲ್ಲಿ ಮರಳು ತೆಗೆದ ತಾ.ಪಂ. ಸದಸ್ಯನೊಬ್ಬ 2 ಲಕ್ಷ ರೂ. ದಂಡ ಕಟ್ಟಿದ್ದರು. ಈ ಪ್ರಕರಣ ಮಾಸುವ ಮುಂಚೆಯೇ ಇದೇ ರೀತಿ ಮತ್ತೊಂದು ಪ್ರಕರಣ ನಡೆದಿರುವುದು ತಾಲ್ಲೂಕು ಆಡಳಿತದ ಮೇಲೆ ದಂಧೆಕೋರರಿಗೆ ಭಯವಿಲ್ಲದಂತಾಗಿದೆ ಎಂಬುದು ಕಂಡು ಬರುತ್ತಿದೆ.

ದೂರುದಾರ ರಾಮಚಂದ್ರಪ್ಪ ಮಾತನಾಡಿ, ಈ ಜಮೀನಿನ ಪಕ್ಕದ ಜಮೀನಿನಲ್ಲೂ ಮರಳು ಲೂಟಿ ನಡೆಯುತ್ತಿದೆ. ಅಲ್ಲದೆ ನದಿ ಪಾತ್ರವನ್ನು ಒತ್ತುವರಿ ಮಾಡಿಕೊಂಡಿದ್ದು, ಮರಳು ಸಂಪತ್ತು ಬರಿದಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳು ಜಾಗೃತೆ ವಹಿಸಬೇಕು. ಈ ಬಗ್ಗೆ ಕೊಡಿಗೇನಹಳ್ಳಿ ಪೋಲಿಸ್ ಠಾಣೆಗೆ ದೂರು ನೀಡಿದ್ದರೂ ಇನ್ನೂ ಪ್ರಕರಣ ದಾಖಲಿಸದೆ ಮೀನಾಮೇಷ ಎಣಿಸುತ್ತಿರುವುದು ದಂಧೆಕೋರರ ಜತೆ ಪೊಲೀಸರು ಶಾಮೀಲಾಗಿದ್ದಾರೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ ಎಂದು ದೂರುದಾರರು ಆರೋಪಿಸಿದ್ದಾರೆ.

Leave a Comment