ಜೆಡಿಯುಗೆ ಉಪ ಸಭಾಧ್ಯಕ್ಷ ಸ್ಥಾನ ನೀಡಲು ಬಿಜೆಪಿ ಚಿಂತನೆ

ನವದೆಹಲಿ, ಜೂನ್ 20: ಲೋಕಸಭೆಯ ಉಪ ಸಭಾಧ್ಯಕ್ಷರ ಹುದ್ದೆಯನ್ನು ಬಿಜೆಪಿ ತನ್ನ ಬಿಹಾರದ ಮಿತ್ರಪಕ್ಷ ಜೆಡಿಯುಗೆ ನೀಡುವ ಸಾಧ್ಯತೆ ಇದೆ.

ಬಿಜೆಪಿ ನೇತೃತ್ವದ ಎನ್‌ಡಿಎ ಸದಸ್ಯರೇ ಅಧಿಕ ಸಂಖ್ಯೆಯಲ್ಲಿರುವ ಲೋಕಸಭೆಯಲ್ಲಿ ವಿರೋಧಪಕ್ಷದಿಂದ ಸಾಂಕೇತಿಕವಾಗಿ ಸ್ಪರ್ಧೆ ನಡೆಯಲಿದೆಯೇ ಅಥವಾ ಇಲ್ಲವೇ ಎಂಬುದು ಸ್ಪಷ್ಟವಾಗಿಲ್ಲ. ಲೋಕಸಭೆಯ ಉಪ ಸಭಾಧ್ಯಕ್ಷ ಯಾರಾಗಲಿದ್ದಾರೆ ಎಂಬುದನ್ನು ಎನ್‌ಡಿಎ ನಿರ್ಧರಿಸಲಿದೆ.

ಸಾಮಾನ್ಯವಾಗಿ ಆಡಳಿತಾರೂಢ ಸರ್ಕಾರದ ಭಾಗವಾಗಿರದ ಪಕ್ಷಕ್ಕೆ ಈ ಹುದ್ದೆಯನ್ನು ನೀಡುವುದು ಸಂಪ್ರದಾಯ. 2014ರಲ್ಲಿ ತಮಿಳುನಾಡಿನ ಎಐಎಡಿಎಂಕೆ ಸಂಸದ ಎಂ. ತಂಬಿದೊರೈ ಅವರಿಗೆ ಬಿಜೆಪಿ ಈ ಹುದ್ದೆ ನೀಡಿತ್ತು. 2019ರ ಚುನಾವಣೆಯಲ್ಲಿ ಎಐಎಡಿಎಂಕೆ, ಬಿಜೆಪಿಯ ಮಿತ್ರಪಕ್ಷವಾಗಿ ಸ್ಪರ್ಧಿಸಿತ್ತು.

ಬಿಜೆಪಿ ಮೂಲಗಳ ಪ್ರಕಾರ ಬಿಜೆಪಿಯ ಬಿಹಾರದ ಮಿತ್ರಪಕ್ಷ ಜೆಡಿಯು ಅಥವಾ ಒಡಿಶಾದ ಬಿಜು ಜನತಾದಳದ ಸಂಸದರೊಬ್ಬರು ಈ ಹುದ್ದೆಗೆ ಏರುವ ಸಾಧ್ಯತೆ ಇದೆ. ಜೆಡಿಯು ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿದ್ದರೂ, ಎನ್‌ಡಿಎ ಸರ್ಕಾರದಲ್ಲಿ ಯಾವುದೇ ಸಚಿವ ಸ್ಥಾನ ಪಡೆದುಕೊಂಡಿಲ್ಲ.

ಈ ನಡುವೆ ಜಗನ್ ಮೋಹನ್ ರೆಡ್ಡಿ ಅವರ ವೈಎಸ್‌ಆರ್ ಕಾಂಗ್ರೆಸ್ ಹೆಸರೂ ಉಪಸಭಾಧ್ಯಕ್ಷರ ಸ್ಥಾನಕ್ಕೆ ಕೇಳಿಬಂದಿದೆ.

Leave a Comment