ಜೆಡಿಎಸ್ ಸಾರಥ್ಯ ವಿಶ್ವನಾಥ್‌ಗೆ ಖಚಿತ

ಬೆಂಗಳೂರು, ಆ. ೫- ಜೆಡಿಎಸ್ ಪಕ್ಷಕ್ಕೆ ನೂತನ ಸಾರಥಿ ಯಾರಾಗಲಿದ್ದಾರೆ ಎಂಬುದು ಇಂದು  ಅಂತಿಮಗೊಳ್ಳಲಿದ್ದು, ಬಹುತೇಕ ಹೆಚ್. ವಿಶ್ವನಾಥ್ ಜೆಡಿಎಸ್ ಪಕ್ಷದ ನೂತನ ರಾಜ್ಯಾಧ್ಯಕ್ಷರಾಗಿ ನೇಮಕಗೊಳ್ಳುವ ಸಾಧ್ಯತೆಗಳಿವೆ.

ಜೆಡಿಎಸ್ ಸರ್ವೋಚ್ಛ ನಾಯಕ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ನೇತೃತ್ವದಲ್ಲಿ ಇಂದು ನಡೆದಿರುವ ಪಕ್ಷದ ಹಿರಿಯ ಮುಖಂಡರ ಸಭೆಯಲ್ಲಿ ಹಿರಿಯ ಶಾಸಕರು, ಮಾಜಿ ಸಂಸದರು ಆಗಿರುವ ವಿಶ್ವನಾಥ್ ಅವರನ್ನು ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ನೇಮಕ ಮಾಡುವ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ವಿಶ್ವಸನೀಯ ಮೂಲಗಳು ಹೇಳಿವೆ.

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಜತೆ ಮಾಡಿಕೊಳ್ಳುವ ಸಂಬಂಧ ಹಾಗೂ ನೂತನ ರಾಜ್ಯಾಧ್ಯಕ್ಷರ ನೇಮಕ ಸಂಬಂಧ ಚರ್ಚೆ ನಡೆಸಲು ಈ ಸಭೆ ನಡೆದಿದ್ದು, ಈ ಸಭೆಯಲ್ಲಿ ಜೆಡಿಎಸ್‌ನ ನೂತನ ರಾಜ್ಯಾಧ್ಯಕ್ಷರಾಗಿ ವಿಶ್ವನಾಥ್ ಅವರನ್ನು ಅಂತಿಮಗೊಳಿಸುವ ತೀರ್ಮಾನ ಆಗಲಿದೆ.

ಇಂದಿನ ಸಭೆಯಲ್ಲಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡ್ಯಾನಿಶ್ ಆಲಿ, ಸಚಿವರಾದ ಎಂ.ಸಿ. ಮನಗೂಳಿ, ಸಚಿವರಾದ ಟಿ.ಎಸ್ ಪುಟ್ಟರಾಜು, ವಿಧಾನಸಭಾ ಉಪಾಧ್ಯಕ್ಷ ಕೃಷ್ಣಾರೆಡ್ಡಿ, ಹಿರಿಯ ಮುಖಂಡರಾದ ಪಿ.ಜಿ.ಆರ್. ಸಿಂಧ್ಯಾ, ಪಿ.ಬಿ ಲಿಂಗಯ್ಯ, ಕೋನರೆಡ್ಡಿ ಸೇರಿದಂತೆ ಹಲುವ ಪ್ರಮುಖ ಮುಖಂಡರು ಪಾಲ್ಗೊಂಡಿದ್ದರು.

ಏಕಾಂಗಿ ಸ್ಪರ್ಧೆ

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳದೆ ಏಕಾಂಗಿಯಾಗಿ ಸ್ಪರ್ಧಿಸುವ ಸಾಧ್ಯತೆಗಳಿದ್ದು, ಸ್ಥಳೀಯ ಮಟ್ಟದಲ್ಲಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಹೊಣೆಯನ್ನು ಸ್ಥಳೀಯ ಶಾಸಕರು ಹಾಗೂ ಮುಖಂಡರಿಗೆ ವಹಿಸುವ ಬಗ್ಗೆಯೂ ತೀರ್ಮಾನಗಳು ಆಗಲಿದೆ.

Leave a Comment