ಜೆಡಿಎಸ್ ಶಾಸಕರನ್ನ ಸೆಳೆದರೆ ಹುಷಾರ್

ಬಿಜೆಪಿ ನಾಯಕರಿಗೆ ಎಚ್ಚರಿಕೆ
ಮೈಸೂರು, ಸೆ. 12. ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಬಿಜೆಪಿ ಪ್ರಯತ್ನಕ್ಕೆ ರೇಷ್ಮೆ ಸಚಿವ ಸಾ.ರಾ. ಮಹೇಶ್ ಕಿಡಿಕಾರಿದ್ದಾರೆ.
ಬಿಜೆಪಿಯವರು ನಮ್ಮ ಶಾಸಕರಲ್ಲಿ ಒಬ್ಬೇ ಒಬ್ಬ ಶಾಸಕರನ್ನ ಸೆಳೆಯಲು ಪ್ರಯತ್ನಿಸಿದರೆ ನಾವು ಸುಮ್ಮನೆ ಕೂರುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಕಾಂಗ್ರೆಸ್ – ಜೆಡಿಎಸ್ ಸಮ್ಮಿಶ್ರ ಸರ್ಕಾರ ರಾಜ್ಯದ ಅಭಿವೃಧ್ಧಿ ಕಡೆ ಗಮನ ಕೊಡುತ್ತಿದೆ. ಕೆಲ ಮಾಧ್ಯಮದಲ್ಲಿ ಸರ್ಕಾರ ಬಿದ್ದು ಹೋಗಲಿದೆ ಎಂಬ ಊಹಾಪೋಹಗಳು ಬಿತ್ತರಗೊಳ್ಳುತ್ತಿವೆ. ಕೆಲವು ಬಿಜೆಪಿ ಮುಖಂಡರು ಅಧಿಕಾರದ ಆಸೆ ಇಟ್ಟುಕೊಂಡಿದ್ದಾರೆ. ನಾವು ಅಧಿಕಾರಕ್ಕೆ ಬಂದು ನಾಲ್ಕು ತಿಂಗಳಾಗಿದೆ. ಕೆಲವರಿಗೆ ಇಲ್ಲ ಸಲ್ಲದ ಆಸೆ ತೋರಿಸಿ ಅಸ್ಥಿರಗೊಳಿಸುವ ಪ್ರಯತ್ನ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿಯ 10 ಜನ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ. ನಾನು ಸಹಾ 20 ವರ್ಷ ಬಿಜೆಪಿಯಲ್ಲಿದ್ದವನು. ಇದು ರಾಜಕಾರಣ ನಮಗೂ ರಾಜಕಾರಣ ಮಾಡಲು ಬರುತ್ತದೆ. ನಮ್ಮ ಶಾಸಕರು ಎಲ್ಲರೂ ಒಳ್ಳೆಯವರಿದ್ದಾರೆ. ಒಬ್ಬರನ್ನು ಸೆಳೆಯುವ ಪ್ರಯತ್ನ ಮಾಡಿದರೆ ಜೆಡಿಎಸ್ ಶಾಸಕರು ನಾಯಕರ ಶಕ್ತಿ ಏನು ಎಂದು ಬಿಜೆಪಿಯವರಿಗೆ ಗೊತ್ತಾಗುತ್ತದೆ ಎಂದು ತೀಕ್ಷ್ಣ ಮಾತುಗಳಲ್ಲಿ ಬಿಜೆಪಿ ನಾಯಕರಿಗೆ ಸಚಿವ ಸಾ.ರಾ ಮಹೇಶ್ ಎಚ್ಚರಿಕೆ ಕೊಟ್ಟಿದ್ದಾರೆ.
ನಮ್ಮದು ಪ್ರಾದೇಶಿಕ ಪಕ್ಷವೇ ಆಗಿರಬಹುದು. ನಮ್ಮ ಪಕ್ಷದವರು ರಾಷ್ಟ್ರ ಮಟ್ಟದಲ್ಲಿ ಪ್ರಧಾನಿಯಾಗಿದ್ದಾರೆ. 20 ತಿಂಗಳು ಸಿಎಂ ಆಗಿ ರೈತ ಪರ ಕೆಲಸ ಮಾಡಿದವರಿದ್ದಾರೆ. ನಾವೇನು ಸುಮ್ಮನೆ ಕುಳಿತಿಲ್ಲ. ಬಿಜೆಪಿಯ ಅನೇಕ ಶಾಸಕರು ಮುಖಂಡರು ನಮ್ಮ ಸಂಪರ್ಕದಲ್ಲಿದ್ದಾರೆ. ಜನ ಬಿಜೆಪಿಗೆ ಅಧಿಕಾರ ಕೊಟ್ಟಿದ್ದರು.
ಈಗ ನಮಗೆ ಕೆಲಸ ಮಾಡಲು ಬಿಡಿ ಎಂದು ಬಿಜೆಪಿ ಮುಖಂಡರಿಗೆ ಕಿವಿಮಾತು ಹೇಳಿದ್ದಾರೆ.
ಸಾಲ ಮನ್ನಾ ಮಾಡಿದ ಹಿನ್ನೆಲೆಯಲ್ಲಿ ಸಮ್ಮಿಶ್ರ ಸರ್ಕಾರಕ್ಕೆ ರಾಷ್ಟ್ರಮಟ್ಟದಲ್ಲಿ ಶ್ಲಾಘನೆ ಸಿಕ್ಕಿದೆ. ಆದರೆ, ಬಿಜೆಪಿಯವರು ಪ್ರಧಾನಿ ಭೇಟಿಗೆ ಹೋಗದೆ, ರಾಜ್ಯದಲ್ಲಿ ಸಣ್ಣಮಟ್ಟದ ಕೀಳು ರಾಜಕಾರಣ ಮಾಡುತ್ತಿದ್ದಾರೆ.
ಇದು ಮುಂದುವರಿದರೆ ನಾವು ಸುಮ್ಮನೆ ಕೂರುವುದಿಲ್ಲ ಎಂದು ಎಚ್ಚರಿಸಿದ್ದಾರೆ.

Leave a Comment