ಜೆಡಿಎಸ್ ಬಿಡಲ್ಲ: ಶಾಸಕ ಅಶ್ವಿನ್ ಸ್ಪಷ್ಟನೆ

ಟಿ ನರಸೀಪುರ, ಫೆ. ೫- ಯಾವುದೇ ಕಾರಣಕ್ಕೂ ಜೆಡಿಎಸ್ ಪಕ್ಷ ಬಿಡುವುದಿಲ್ಲ ಎಂದು ಹೇಳುವ ಮೂಲಕ ಟಿ ನರಸೀಪುರ ಶಾಸಕ ಅಶ್ವಿನ್ ಕುಮಾರ್ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಟಿ ನರಸೀಪುರದಲ್ಲಿ ನಡೆಯಲಿರುವ ಕುಂಭಮೇಳದ ಸ್ಥಳ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್‌ನಿಂದ ಆಯ್ಕೆಯಾಗಿರುವ 37 ಶಾಸಕರು ಸೈನಿಕರಿದ್ದಂತೆ. ತಮಗೆ ರಾಜಕೀಯ ಬದುಕು ನೀಡಿದ್ದು ಮುಖ್ಯಮಂತ್ರಿ ಕುಮಾರಸ್ವಾಮಿ, ಹೀಗಾಗಿ, ಅವರೊಂದಿಗಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಹಣಕಾಸು ಸಮಿತಿ ಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ದೆಹಲಿಗೆ ಸಿಎಂ ಅನುಮತಿ ಪಡೆದೇ ತೆರಳಿದ್ದು ನಿಜ. ಈ ವೇಳೆ ಬಿಜೆಪಿಯ ಯಾವೊಬ್ಬ ನಾಯಕರು ತಮ್ಮನ್ನು ಸಂಪರ್ಕಿಸಿಲ್ಲ. ಪಕ್ಷಾಂತರ ಮಾಡುವ ಅವಶ್ಯಕತೆಯೂ ಇಲ್ಲ ಎಂದು ಸ್ಪಷ್ಟಪಡಿಸಿದರು.
ಈ ಮಧ್ಯೆ ತ್ರಿವಳಿ ಸಂಗಮದಲ್ಲಿ ಫೆ. 17 ರಿಂದ ಮೂರು ದಿನಗಳ ಕಾಲ ನಡೆಯಲಿರುವ ಕುಂಭಮೇಳದ ಪೋಸ್ಟರ್‌ಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ ದೇವೇಗೌಡ ಬಿಡುಗಡೆ ಮಾಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಯಾವುದೇ ಕಾರಣಕ್ಕೂ ಆಪರೇಷನ್‌ಗೆ ಮುಂದಾಗಲ್ಲ. ನಮಗೆ ಇದರ ಅವಶ್ಯಕತೆಯೂ ಇಲ್ಲ, ಮಾರುಕಟ್ಟೆಗಳಲ್ಲಿ ನಡೆಯುವ ಹರಾಜು ಪ್ರಕ್ರಿಯೆಯಂತೆ ಶಾಸಕರನ್ನು 40 ರಿಂದ 50 ಕೋಟಿ ಎಂದು ಬಿಜೆಪಿ ಹರಾಜು ಮಾಡುತ್ತಿದೆ. ಬಿಜೆಪಿಯ ಈ ತಂತ್ರಕ್ಕೆ ಜನರೇ ಬುದ್ಧಿ ಕಲಿಸಲಿದ್ದಾರೆ. ಸಮ್ಮಿಶ್ರ ಸರ್ಕಾರ ಸುಭದ್ರವಾಗಿದ್ದು, ಮುಖ್ಯಮಂತ್ರಿ ಕುಮಾರಸ್ವಾಮಿಯವರೇ ಬಜೆಟ್ ಮಂಡಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಉತ್ತರ ಭಾರತದಲ್ಲಿ ನಡೆಯುವ ಕುಂಭಮೇಳದ ಮಾದರಿಯಲ್ಲೇ ತ್ರಿವಳಿ ಸಂಗಮದಲ್ಲೂ ಆಯೋಜಿಸಲಾಗಿದೆ ಎಂದರು.

Leave a Comment