ಜೆಡಿಎಸ್ ನಿರ್ಲಕ್ಷಿಸಿ ಸರ್ಕಾರ ರಚನೆ ಅಸಾಧ್ಯ

ಮಂಗಳೂರು, ನ. ೧೦- ಬಿಜೆಪಿ ಬಗ್ಗೆ ನಾನು ಮೃದುಧೋರಣೆ ಹೊಂದಿಲ್ಲ, ಜೆಡಿಎಸ್ ಪಕ್ಷವನ್ನು ನಿರ್ಲಕ್ಷಿಸಿ ಯಾರೂ ಸರ್ಕಾರ ರಚನೆ ಮಾಡಲು ಸಾಧ್ಯವಿಲ್ಲ, ಉಪ ಚುನಾವಣೆ ಅಥವಾ ಮಧ್ಯಂತರ ಚುನಾವಣೆಯಲ್ಲಿ ಜೆಡಿಎಸ್ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಮಾಜಿ ಪ್ರಧಾನಿ ದೇವೇಗೌಡ ಇಂದಿಲ್ಲಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 15 ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಯಲ್ಲಿ ಬಿಜೆಪಿ 8ಕ್ಕಿಂತ ಕಡಿಮೆ ಸ್ಥಾನ ಗಳಿಸಿದ್ದಲ್ಲಿ ರಾಜ್ಯ ಬಿಜೆಪಿ ಸರ್ಕಾರ ಅತಂತ್ರ ಸ್ಥಿತಿ ತಲುಪಲಿದ್ದು, ಜೆಡಿಎಸ್ ಬೆಂಬಲ ನೀಡಬಹುದೆಂದು ಹೇಳಲಾಗಿತ್ತು. ಆದರೆ, ಉಪ ಚುನಾವಣೆ ಬಳಿಕ ಬಿಜೆಪಿ ಸರ್ಕಾರಕ್ಕೆ ಅತಂತ್ರ ಸ್ಥಿತಿ ಎದುರಾದರೆ ಕಾಂಗ್ರೆಸ್ ಹೈಕಮಾಂಡ್ ತೀರ್ಮಾನ ಅವಲಂಬಿಸಿ ಜೆಡಿಎಸ್ ಮುಂದಿನ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬೀಳಲು ಬಿಡುವುದಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದು, ಜೆಡಿಎಸ್ ವರಿಷ್ಠ ದೇವೇಗೌಡರೂ ಸಹ ಬಿಜೆಪಿ ಸರ್ಕಾರದ ಬಗ್ಗೆ ಮೃದು ಮಾತುಗಳನ್ನಾಡಿದ್ದರು. ಆದರೆ, ಗೌಡರ ಚಿಂತನೆ ಬೇರೆಯಾಗಿದ್ದು, ಆಯಾ ಸಂದರ್ಭಕ್ಕೆ ತಕ್ಕಂತೆ ಪಕ್ಷ ತೀರ್ಮಾ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಪಕ್ಷವನ್ನು ಕಟ್ಟಲು ಸಮಯಬೇಕಿದೆ. ಪುನಃ ಪಕ್ಷ ಕಟ್ಟಲು ರಾಜ್ಯಾದ್ಯಂತ ಪ್ರವಾಸ ಮಾಡುವುದಲ್ಲದೆ ಯುವ ನಾಯಕರನ್ನು ಪಕ್ಷ ಸಂಘಟಿಸುವಂತೆ ಉತ್ತೇಜನ ನೀಡಲಾಗುವುದು ಎಂದು ಹೇಳುವ ಮೂಲಕ ಮಧ್ಯಂತರ ಚುನಾವಣೆಗೆ ಹೋಗದಿರುವ ಸುಳಿವು ನೀಡಿದ್ದಾರೆ.

Leave a Comment