ಜೆಡಿಎಸ್ ನಾಯಕರ ವಿರುದ್ಧ ಹೊರಟ್ಟಿ ವಾಗ್ದಾಳಿ

ಬೆಂಗಳೂರು, ಅ. ೨೩- ಸದ್ಯದ ಪರಿಸ್ಥಿತಿಯನ್ನು ನೋಡಿದರೆ ರಾಜ್ಯದಲ್ಲಿ ಜೆಡಿಎಸ್‌‌ಗೆ ಭವಿಷ್ಯ ಕಷ್ಟ ಎಂದು ಜೆಡಿಎಸ್‌ನ ವಿಧಾನಪರಿಷತ್‌ನ ಸದಸ್ಯ ಬಸವರಾಜ ಹೊರಟ್ಟಿ ದಳಪತಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಪ್ರಾದೇಶಿಕ ಪಕ್ಷವನ್ನಾಗಿ ಪರಿಣಾಮಕಾರಿಯಾಗಿ ಕಟ್ಟಬಹುದಿತ್ತು. ಆದರೆ, ಅವರು ಕುಟುಂಬ ಮತ್ತು ಒಕ್ಕಲಿಗ ಸಮುದಾಯಕಷ್ಟೇ ಪಕ್ಷವನ್ನು ಸೀಮಿತಿಗೊಳಿಸಿದ್ದರು ಎಂದು ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ವಿಧಾನ ಪರಿಷತ್ ಸಭಾಪತಿ ಸ್ಥಾನ ಖಚಿತ ಎಂದು ಭರವಸೆ ನೀಡಿ ಬೆಳಗಾಗುವುದರೊಳಗಾಗಿ ಆ ಸ್ಥಾನಕ್ಕೆ ಮತ್ತೊಬ್ಬರನ್ನು ಕೂರಿಸಲಾಯಿತು.

ಅದೇ ರೀತಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರಾವಧಿಯಲ್ಲಿ ಸಚಿವ ಸ್ಥಾನ ತಪ್ಪಿಸಲಾಯಿತು ಎಂದು ವಾಗ್ದಾಳಿ ನಡೆಸಿದರು. ನಾನು ಲಿಂಗಾಯತ ಸಮುದಾಯದವನಾಗಿದ್ದರಿಂದ ಸಚಿವ ಸ್ಥಾನ ನೀಡಲಿಲ್ಲ. ಅದರ ಬದಲು ಒಕ್ಕಲಿಗ ಸಮುದಾಯದವನಾಗಿದ್ದರೆ, ಸಚಿವ ಸ್ಥಾನದ ಪಟ್ಟಿಯಲ್ಲಿ ನನ್ನ ಹೆಸರೂ ಇರುತ್ತಿತ್ತು. ಪಕ್ಷದಲ್ಲಿ ಯಾವೊಬ್ಬ ನಾಯಕನನ್ನು ಅವರು ಬೆಳೆಸಲಿಲ್ಲ. ರಾಜ್ಯದಲ್ಲಿ ಲಿಂಗಾಯತ ಸಮುದಾಯ ದೊಡ್ಡ ಸಮುದಾಯ. ಆದರೆ, ಆ ಸಮುದಾಯವನ್ನು ಜೆಡಿಎಸ್ ವರಿಷ್ಠರು ನಿರ್ಲಕ್ಷಿಸಿದರು ಎಂದರು.

ಸಮ್ಮಿಶ್ರ ಸರ್ಕಾರದಲ್ಲಿ ಶಾಸಕ ನಿರ್ಲಕ್ಷ್ಯ ಧೋರಣೆಯನ್ನು ಪ್ರತಿಭಟಿಸಿ ಕೆಲ ಶಾಸಕರು ರಾಜೀನಾಮೆ ನೀಡಿದಾಗ ಸೌಜನ್ಯಕ್ಕೂ ಅವರೊಂದಿಗೆ ಕುಮಾರಸ್ವಾಮಿ ಮಾತನಾಡಲಿಲ್ಲ. ಆಗಲೇ ಎಚ್ಚೆತ್ತುಕೊಂಡು ಸಮಸ್ಯೆ ಬಗೆಹರಿಸಿದರೆ ಸರ್ಕಾರವು ಉಳಿಯುತ್ತಿತ್ತು. ಈಗ ಕಾಲ ಮಿಂಚಿ ಹೋಗಿದೆ. ಮುಂದೆ ಏನೂ ಬೇಕಾದರು ಆಗಬಹುದು ಎಂದು ಹೇಳಿದರು.

ಜೆಡಿಎಸ್ ನಾಯಕರೇ ಸಭಾಪತಿ ಸ್ಥಾನವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಟ್ಟರು. ಈ ವಿಷಯವನ್ನು ಸ್ವತಃ ಪರಮೇಶ್ವರ್ ಅವರೇ ತಿಳಿಸಿದ್ದರು. ನಮ್ಮನ್ನು ಪಕ್ಷದಲ್ಲಿ ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ಸದ್ಯದ ಪರಿಸ್ಥಿತಿ ನೋಡಿದರೆ ಜೆಡಿಎಸ್‌ಗೆ ರಾಜ್ಯದಲ್ಲಿ ಭವಿಷ್ಯ ಇಲ್ಲ ಎಂದು ಹೇಳಿದರು.

Leave a Comment