ಜೆಡಿಎಸ್ ತಂತ್ರಗಾರಿಕೆ ಕೈ ಕಿಡಿಕಿಡಿ

ಬೆಂಗಳೂರು, ಅ. ೧೨- ರಾಜ್ಯದಲ್ಲಿನ ದೋಸ್ತಿ ಸರ್ಕಾರದ ಪಾಲುದಾರ ಪಕ್ಷ ಜೆಡಿಎಸ್‌ನ ಒಳತಂತ್ರಗಳ ಬಗ್ಗೆ ಮಿತ್ರಪಕ್ಷ ಕಾಂಗ್ರೆಸ್ ನಾಯಕರಲ್ಲಿ ಅಸಮಾಧಾನದ ಹೊಗೆಯಾಡುತ್ತಿದೆ. ಇತ್ತೀಚೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ, ಜೆಡಿಎಸ್ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹಾಗೂ ಮತ್ತೊಬ್ಬ ಪುತ್ರ ರೇವಣ್ಣ ಅವರ ದೆಹಲಿ ಭೇಟಿ ರಾಜಕೀಯ ವಲಯದಲ್ಲಿ ನಾನಾ ರೀತಿಯ ಊಹಾಪೋಹಗಳಿಗೆ ಕಾರಣವಾಗಿದ್ದು, ಇದರ ಲಾಭ ಪಡೆಯಲು ಬಿಜೆಪಿ ಹವಣಿಸುತ್ತಿದೆ.

ಕುಮಾರಸ್ವಾಮಿ, ಅವರ ತಂದೆ ದೇವೇಗೌಡ ಮತ್ತು ಸಹೋದರ ರೇವಣ್ಣ ಅವರೊಂದಿಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಮಾತುಕತೆ ನಡೆಸಿರುವುದು ಕಾಂಗ್ರೆಸ್ ನಾಯಕರಲ್ಲಿ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಈ ನಡುವೆ ಬಿಎಸ್‌ಪಿಯ ಏಕೈಕ ಶಾಸಕ ಹಾಗೂ ಕುಮಾರಸ್ವಾಮಿ ಅವರ ಸಂಪುಟದಲ್ಲಿ ಸಚಿವರಾಗಿದ್ದ ಎನ್. ಮಹೇಶ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ದೋಸ್ತಿಗಳ ನಡುವೆ ಇರುಸುಮುರುಸಿಗೆ ಕಾರಣವಾಗಿದೆ. ವಿವಿಧ ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ  ಕಾಂಗ್ರೆಸ್ ಅಭ್ಯರ್ಥಿಗಳನ್ನು ಸೋಲಿಸುವ ಮಾಯಾವತಿ ಅವರ ನಿರ್ಧಾರದ ಹಿನ್ನೆಲೆಯಲ್ಲಿ ಮಹೇಶ್ ರಾಜೀನಾಮೆ ನೀಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ ಬಿಜೆಪಿ ದೋಸ್ತಿಗಾಗಿ ಅವರು, ರಾಜೀನಾಮೆ ನೀಡಿದ್ದಾರೆ ಎಂಬ ಸುದ್ದಿ ಹರಡಿದೆ.

ಇದರ ಬೆನ್ನಲ್ಲೇ ಬಿಜೆಪಿ ನಾಯಕರು ಸರ್ಕಾರ ಪತನವಾಗುವುದನ್ನೇ ಹೊಂಚುಹಾಕಿ ಕುಳಿತಿದ್ದು, ಮುಂದೆ ಎದುರಾಗಬಹುದಾದ ರಾಜಕೀಯ ಬೆಳವಣಿಗೆಗಳ ಲಾಭ ಪಡೆಯಲು ರಾಜಕೀಯ ಕಾರ್ಯತಂತ್ರ ರೂಪಿಸುತ್ತಿದ್ದಾರೆ.

ರಾಹುಲ್ ಗಾಂಧಿ ಅವರನ್ನು ಏಕಾಏಕಿ ಭೇಟಿ ಮಾಡಿರುವ ದೇವೇಗೌಡರ ಕುಟುಂಬ ಸದಸ್ಯರ ಹುನ್ನಾರ ಏನಿರಬಹುದೆಂದು ಮನಗಂಡಿರುವ ಕಾಂಗ್ರೆಸ್ ನಾಯಕರು ಸರ್ಕಾರವನ್ನು  ಉಳಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಆದರೆ ಜೆಡಿಎಸ್‌ಗೆ ಇದು ಅನಿವಾರ್ಯವಲ್ಲ ಎಂಬ ಸಂದೇಶವನ್ನು ರಾಹುಲ್ ಗಾಂಧಿ ಅವರಿಗೆ ತಲುಪಿಸಲಾಗಿದೆ.

ರಾಜನಾಥ್ ಸಿಂಗ್ ಅವರ ಭೇಟಿ ಸಂದರ್ಭದಲ್ಲಿ ದೋಸ್ತಿ ಸರ್ಕಾರಕ್ಕೆ ಚ್ಯುತಿ ತರುವ ಯಾವುದೇ ಪ್ರಯತ್ನವನ್ನು ಮಾಡಬಾರದು, ಒಂದು ವೇಳೆ ಸರ್ಕಾರ ಪತನವಾದರೆ, ನೀವೇ ಜವಾಬ್ದಾರರಾಗಬೇಕಾಗುತ್ತದೆ. ರಾಜ್ಯ ನಾಯಕರಿಗೆ ನೀವು ಈ ವಿಚಾರದಲ್ಲಿ ಎಚ್ಚರಿಕೆ ನೀಡಬೇಕು ಎಂಬ ನಿಟ್ಟಿನಲ್ಲಿ ಜೆಡಿಎಸ್ ನಾಯಕರು ಚರ್ಚಿಸಿದ್ದಾರೆ ಎನ್ನಲಾಗಿದೆ.

ಇತ್ತೀಚೆಗೆ ರಾಜನಾಥ್ ಸಿಂಗ್ ಅವರು ಬೆಂಗಳೂರಿಗೆ ಭೇಟಿಕೊಟ್ಟ ಸಂದರ್ಭದಲ್ಲಿ ಕುಮಾರಸ್ವಾಮಿ ಅವರು ಗುಟ್ಟಾಗಿ ಮಾತುಕತೆ ನಡೆಸಿರುವುದು ಮುಂದಿನ ರಾಜಕೀಯ ಬೆಳವಣಿಗೆಗಳು ಏನು ಬೇಕಾದರೂ ಆಗಬಹುದು ಎಂಬ ಸೂಚನೆಯನ್ನು ನೀಡಲಾಗಿದೆ. ಅಂತಹ ಸಂದರ್ಭದಲ್ಲಿ ಅದರ ಲಾಭವನ್ನು ಪಡೆಯಲು ಬಿಜೆಪಿ ನಾಯಕರು ಈಗಿನಿಂದಲೇ ಕಾರ್ಯತಂತ್ರ ಹೆಣೆಯುತ್ತಿದ್ದಾರೆ.

ಲೋಕಸಭೆ ಮತ್ತು ವಿಧಾನಸಭೆಗಳಿಗೆ ನವೆಂಬರ್ 3 ರಂದು ನಡೆಯಲಿರುವ ಉಪಚುನಾವಣೆ ನಂತರ ಆಪರೇಷನ್ ಕಮಲದ ಮೂಲಕ ಕಾಂಗ್ರೆಸ್ ಪಕ್ಷದ ಕನಿಷ್ಟ 15 ಶಾಸಕರನ್ನು ತನ್ನೆಡೆಗೆ ಸೆಳೆದುಕೊಂಡು ಸರ್ಕಾರ ರಚಿಸಲು ರಣತಂತ್ರ ರೂಪಿಸಲಾಗುತ್ತಿದೆ. ಈಗಾಗಲೇ ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ಉಂಟಾಗಿರುವ ಅತೃಪ್ತಿ ಮತ್ತು ಅಸಮಾಧಾನದ ಲಾಭ ಪಡೆಯಲು ಬಿಜೆಪಿ ಮುಂದಾಗಿದೆ.

ಶಿಕ್ಷಣ ಸಚಿವ ಮಹೇಶ್ ರಾಜೀನಾಮೆ ನೀಡಿರುವುದೂ ಬಿಜೆಪಿ ನಾಯಕರಲ್ಲಿ ಹೊಸ ಆಶಾಕಿರಣವನ್ನು ಮೂಡಿಸಿದೆ. ಮಾಯಾವತಿ ಅವರ ಸೂಚನೆಯಂತೆ ಮಹೇಶ್ ರಾಜೀನಾಮೆ ನೀಡಿದ್ದರೂ ಇದರ ಹಿಂದೆ ರಾಜಕೀಯ ಲಾಭ – ನಷ್ಟಗಳ ಲೆಕ್ಕಾಚಾರ ನಡೆದಿದೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.

ಪಕ್ಷದ ಸಂಘಟನೆ ಮಾಡಬೇಕಾಗಿದೆ ಎಂಬ ಸಬೂಬನ್ನು ಮಹೇಶ್ ಮುಂದಿಡುವ ಮೂಲಕ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೆ ಕಾಂಗ್ರೆಸ್ ಜೊತೆಗೆ ಮಹಾಮೈತ್ರಿಕೂಟ ರಚಿಸಲು ಮಾಯಾವತಿ ಸಮ್ಮತಿಸಿಲ್ಲದ ಕಾರಣ, ಪ್ರತ್ಯೇಕವಾಗಿ ಗುರುತಿಸಿಕೊಳ್ಳಲು ತೀರ್ಮಾನಿಸಲಾಗಿದೆ.

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಜೊತೆಗೆ ಹೆಜ್ಜೆ ಹಾಕುವ ಬಗ್ಗೆಯೂ ಮಾಯಾವತಿ ಚಿಂತನೆ ನಡೆಸಿದ್ದಾರೆ. ಈ ಕಾರಣಕ್ಕಾಗಿ ಮಹೇಶ್ ಅವರನ್ನು ರಾಜೀನಾಮೆ ಕೊಡಿಸಲು ತೀರ್ಮಾನಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ನಡುವೆ ರಾಜ್ಯ ಬಿಜೆಪಿಯ ಪ್ರಭಾವಿ ನಾಯಕರಲ್ಲಿ ಒಬ್ಬರಾಗಿರುವ ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್ ದೋಸ್ತಿ ಸರ್ಕಾರ ಶೀಘ್ರ ಪತನವಾಗಲಿದ್ದು, ನವೆಂಬರ್ ತಿಂಗಳಲ್ಲಿ ನಮ್ಮದೇ ಸರ್ಕಾರ ರಚನೆಯಾಗಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿರುವುದು ಹಲವು ಸಾಧ್ಯತೆಗಳನ್ನು ಹುಟ್ಟುಹಾಕಿದೆ.

ಸಚಿವ ಸಂಪುಟ ಪುನರ್ ರಚನೆ ಸಂದರ್ಭದಲ್ಲಿ ಅರಣ್ಯ ಸಚಿವ ಆರ್. ಶಂಕರ್ ಅವರನ್ನು ಕೈಬಿಡಲಾಗುವುದು ಎಂಬ ಮಾತುಗಳು ಕೇಳಿಬರುತ್ತಿದ್ದು, ಇದು ನಿಜವಾದಲ್ಲಿ ಶಂಕರ್ ಬಿಜೆಪಿಯತ್ತ ವಾಲುವುದು ಖಚಿತ ಎನ್ನಲಾಗುತ್ತಿದೆ. ಇದೇ ರೀತಿ ಹಲವು ಬಗೆಯ ಅಸಮಾಧಾನವನ್ನು ಹೊಂದಿರುವ ಕಾಂಗ್ರೆಸ್‌ನ ಶಾಸಕರನ್ನು ತನ್ನೆಡೆಗೆ ಸೆಳೆಯುವ ಪ್ರಯತ್ನಕ್ಕೆ ತೆರೆಮರೆಯಲ್ಲಿ ಬಿಜೆಪಿ ಕಾರ್ಯತಂತ್ರ ಹೆಣೆಯುತ್ತಿದೆ.

Leave a Comment