ಜೆಡಿಎಸ್ ಏಕಾಂಗಿ ಸ್ಪರ್ಧೆ: ಹೆಚ್‌ಡಿಕೆ

ಮೈಸೂರು, ಸೆ. ೨೧- ರಾಜ್ಯದ 15 ವಿಧಾನಸಭೆಯ ಉಪ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಏಕಾಂಗಿಯಾಗಿ ಸ್ಪರ್ಧೆ ಮಾಡಲಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಇಂದಿಲ್ಲಿ ಪ್ರಕಟಿಸಿದ್ದಾರೆ.

ಕಾಂಗ್ರೆಸ್ ಜತೆ ಉಪ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳಲಿದ್ದಾರೆ ಎನ್ನುವ ಊಹಾಪೋಹಗಳಿಗೆ ಕುಮಾರಸ್ವಾಮಿ ತೆರೆ ಎಳೆದಿದ್ದಾರೆ. ಮೈಸೂರಿನಲ್ಲಿ ಜೆಡಿಎಸ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ವೇಳೆ ನವದೆಹಲಿ ಮುಖ್ಯ ಚುನಾವಣಾ ಆಯುಕ್ತರು ದಿನಾಂಕ ಪ್ರಕಟಿಸುತ್ತಿದ್ದಂತೆ ಕುಮಾರಸ್ವಾಮಿಯವರು ಕಾಂಗ್ರೆಸ್ ಜೊತೆ ಮೈತ್ರಿಮಾಡಿಕೊಳ್ಳದೆ ಸ್ವತಂತ್ರವಾಗಿ ಸ್ಪರ್ಧೆ ಮಾಡುವುದಾಗಿ ತಿಳಿಸಿದರು.

ರಾಜ್ಯದ ಉಪಚುನಾವಣೆಗಳಲ್ಲಿ ಜೆಡಿಎಸ್ ಏಕಾಂಗಿಯಾಗಿ ಸ್ಪರ್ಧಿಸಲಿದ್ದು ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುವಂತೆ ಕಾರ್ಯಕರ್ತರಿಗೆ ಕರೆನೀಡಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿಕ್ಕಿಂತ ಜೆಡಿಎಸ್ ಮೊದಲ ಶತ್ರು ಹೀಗಾಗಿ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಅವರು ತಿಳಿಸಿದರು.

ಉಪಚುನಾವಣೆಗಳಲ್ಲಿ 8 – 10 ಸ್ಥಾನಗಳಲ್ಲಿ ಗೆಲ್ಲಲಿದ್ದೇವೆ. ಹೀಗಾಗಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಭ್ರಮೆಯವೇ ಎದುರಾಗುವುದಿಲ್ಲ ಎಂದರು. ಸರ್ಕಾರ ರಚಿಸಲು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದ್ದಕ್ಕೆ ಪಕ್ಷದ ಅನೇಕ ಕಾರ್ಯಕರ್ತರು ಬೇಸರ ಪಟ್ಟುಕೊಂಡಿದ್ದರು. ಅವರಿಗೂ ನೋವಾಗಿದೆ. ಕಾರ್ಯಕರ್ತರಿಗೆ ನೋವಾಗುವ ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ. ಹೀಗಾಗಿ ಸ್ವತಂತ್ರವಾಗಿ ಸ್ಪರ್ಧಿಸಲು ನಿರ್ಧರಿಸುವುದಾಗಿ ತಿಳಿಸಿದರು.

ರಾಜ್ಯದ ಉಪಚುನಾವಣೆಯ ಫಲಿತಾಂಶದ ಮೇಲೆ ಬಿಜೆಪಿ ಸರ್ಕಾರದ ಭವಿಷ್ಯ ನಿರ್ಧಾರವಾಗಿದ್ದು ಈ ಹಿನ್ನೆಲೆಯಲ್ಲಿಯೇ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಎಲ್ಲರೂ ಒಗ್ಗೂಡಿ ಕೆಲಸ ಮಾಡುವಂತೆ ಕರೆ ನೀಡಿದರು.

ಕಾಂಗ್ರೆಸ್ ನಾಯಕರಿಗೆ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವುದು ಇಷ್ಟವಿರಲಿಲ್ಲ. ಹೀಗಾಗಿ ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯನ್ನು ಕೆಟ್ಟ ಸರ್ಕಾರ ಬಿಂಬಿಸಿದ್ದರು. ಆದರೂ ಅನೇಕ ರೈತ ಪರ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ ಎಂದರು.

Leave a Comment