ಜೆಡಿಎಸ್ ಅಲ್ಪಸಂಖ್ಯಾತರ ಸಮಾವೇಶಕ್ಕೆ ಭರದ ಸಿದ್ದತೆ

ತುಮಕೂರು, ಡಿ. ೭- ನಗರದಲ್ಲಿ ಡಿ. 10 ರಂದು ಜೆಡಿಎಸ್ ಪಕ್ಷದ ವತಿಯಿಂದ ಹಮ್ಮಿಕೊಂಡಿರುವ ರಾಜ್ಯಮಟ್ಟದ ಅಲ್ಪಸಂಖ್ಯಾತರ ಬೃಹತ್ ಸಮಾವೇಶಕ್ಕೆ ಭರದ ಸಿದ್ದತೆ ಕೈಗೊಳ್ಳಲಾಗಿದ್ದು, ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 1.50 ಲಕ್ಷಕ್ಕೂ ಅಧಿಕ ಮಂದಿ ಮುಸ್ಲಿಂ ಸಮುದಾಯದ ಬಾಂಧವರು ಭಾಗವಹಿಸಲಿದ್ದಾರೆ ಎಂದು ಮಾಜಿ ಶಾಸಕ ಡಿ.ಸಿ. ಗೌರಿಶಂಕರ್ ತಿಳಿಸಿದರು.

ನಗರದ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು, ಕಲ್ಪತರು ನಾಡಿನಲ್ಲಿ ಜೆಡಿಎಸ್ ಹಮ್ಮಿಕೊಂಡಿರುವ ಈ ಬೃಹತ್ ಸಮಾವೇಶ ಒಂದು ಐತಿಹಾಸಿಕ ಕಾರ್ಯಕ್ರಮವಾಗಲಿದೆ. ಹಿಂದೆಂದೂ ನಡೆದಿರಬಾದು, ಮುಂದೆಯೂ ನಡೆಯಬಾರದು ಅಷ್ಟರ ಮಟ್ಟಿಗೆ ಸಮಾವೇಶವನ್ನು ಯಶಸ್ವಿಗೊಳಿಸಲು ರಾಜ್ಯ ಹಾಗೂ ಜಿಲ್ಲಾ ಮಟ್ಟದ ನಾಯಕರು ಶ್ರಮ ವಹಿಸಿದ್ದಾರೆ ಎಂದರು.

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡ ಹಾಗೂ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿಯವರ ಆದೇಶದ ಮೇರೆಗೆ ಈ ಸಮಾವೇಶವನ್ನು ನಡೆಸಲಾಗುತ್ತಿದ್ದು, ಈ ಸಮಾವೇಶಕ್ಕೆ ಗ್ರಾಮಾಂತರ ಕ್ಷೇತ್ರದಿಂದ ಕಾರ್ಯಕರ್ತರನ್ನು ಕರೆತರಲು 100 ಬಸ್‌ಗಳ ವ್ಯವಸ್ಥೆ ಮಾಡಲಾಗಿದ್ದು, ಸುಮಾರು 6 ಸಾವಿರಕ್ಕೂ ಅಧಿಕ ಮಂದಿ ಕಾರ್ಯಕರ್ತರು ಗ್ರಾಮಾಂತರ ಕ್ಷೇತ್ರದಿಂದ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ಪಕ್ಷದ ವತಿಯಿಂದ ಪ್ರತಿಯೊಂದು ಜಿಲ್ಲೆಯಲ್ಲೂ ಒಂದೊಂದು ಸಮಾವೇಶ ನಡೆಸಲು ವರಿಷ್ಠರು ಪಟ್ಟಿ ಸಿದ್ದಪಡಿಸಿದ್ದು, ಅದರಂತೆ ತುಮಕೂರಿನಲ್ಲಿ ಅಲ್ಪಸಂಖ್ಯಾತರ ಸಮಾವೇಶ ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಎಸ್ಟಿ ಘಟಕದ ಸಮಾವೇಶ, ಬೇರೆ ಜಿಲ್ಲೆಯಲ್ಲಿ ಮಹಿಳಾ ಸಮಾವೇಶ ಹೀಗೆ ಒಂದೊಂದು ಜಿಲ್ಲೆಯಲ್ಲೂ ಒಂದೊಂದು ಸಮಾವೇಶವನ್ನು ಪಕ್ಷ ನಡೆಸಲಿದೆ ಎಂದರು.

ತುಮಕೂರು ಜಿಲ್ಲೆಯಲ್ಲಿ ಮುಸ್ಲಿಂ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಹಾಗಾಗಿ ತುಮಕೂರಿನಲ್ಲಿನ ರಾಜ್ಯಮಟ್ಟದ ಅಲ್ಪಸಂಖ್ಯಾತರ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಇದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.

ವಾಸ್ತವ ಸ್ಥಿತಿ ಅಧ್ಯಯನ

ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ 470 ಹಳ್ಳಿಗಳಿದ್ದು, ಈಗಾಗಲೇ ತಾವು ಮನೆ ಮನೆಗೆ ಕುಮಾರಣ್ಣ ಕಾರ್ಯಕ್ರಮದ ಮೂಲಕ 200 ಹಳ್ಳಿಗಳಿಗೆ ಭೇಟಿ ನೀಡಿ ಪ್ರತಿ ಮನೆಗೂ ಹೋಗಿ ಈ ಬಾರಿ ನನ್ನನ್ನು ಆಶೀರ್ವದಿಸುವಂತೆ ಮನವಿ ಮಾಡುವ ಜತೆಗೆ ಹಳ್ಳಿಗಳ ವಾಸ್ತವ ಪರಿಸ್ಥಿತಿಯನ್ನು ಅಧ್ಯಯನ ಮಾಡುತ್ತಿದ್ದೇನೆ ಎಂದರು.

ಮನೆ ಮನೆಗೆ ಕುಮಾರಣ್ಣ ಕಾರ್ಯಕ್ರಮದಡಿ ಹಳ್ಳಿಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಬಾರಿ ರಾಜ್ಯದಲ್ಲಿ ಭ್ರಷ್ಟ ರಹಿತ ಸರ್ಕಾರ ರಚನೆಯಾಗಬೇಕು ಎಂಬುದು ಜನರ ಮನಸ್ಸಿಲ್ಲಿರುವುದು ತಿಳಿದು ಬಂದಿದೆ. ಕುಮಾರಸ್ವಾಮಿ ಅವರನ್ನು ಮತ್ತೊಮ್ಮೆ ಮುಖ್ಯಮಂತ್ರಿ ಮಾಡಬೇಕೆಂಬ ಹಂಬಲ ಸಹ ಜನರಲ್ಲಿದೆ ಎಂದರು.

ಮುಂಬರುವ ಚುನಾವಣೆಯಲ್ಲಿ ಯಾರು ಅಭಿವೃದ್ಧಿ ಪರ ಎಂಬುದನ್ನು ಗ್ರಾಮಾಂತರ ಕ್ಷೇತ್ರದ ಜನರೇ ಪ್ರಕಟಿಸಲಿದ್ದಾರೆ ಎಂದು ಪರೋಕ್ಷವಾಗಿ ಶಾಸಕ ಸುರೇಶ್‌ಗೌಡರ ವಿರುದ್ದ ಹರಿಹಾಯ್ದರು.

ತುಮಕೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿ ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ 8 ರಿಂದ 9 ಮಂದಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂಬ ವಿಶ್ವಾಸ ತಮಗಿದೆ ಎಂದರು.

ತುಮಕೂರು ಗ್ರಾಮಾಂತರದಲ್ಲಿ ಪಕ್ಷದ ಸಂಘಟನೆಗಾಗಿ ಅಲ್ಪಸಂಖ್ಯಾತರ ಸಮುದಾಯದ ಪ್ರಬಲ ಅಭ್ಯರ್ಥಿ ಮುಂದೆ ಬಂದರೆ ತಮ್ಮದೇನೂ ಅಭ್ಯಂತರವಿಲ್ಲ. ಒಟ್ಟಿನಲ್ಲಿ ನಮ್ಮ ಪಕ್ಷದ ಸದೃಢವಾಗಿರಬೇಕು. ಚುನಾವಣೆಯಲ್ಲಿ ಅತ್ಯಧಿಕ ಮತಗಳಿಂದ ಗೆಲ್ಲಬೇಕು. ಜತೆಗೆ ಕುಮಾರಣ್ಣ ಮುಖ್ಯಮಂತ್ರಿಯಾಗಬೇಕು ಎಂಬುದು ನನ್ನ ಧ್ಯೇಯ ಎಂದರು.

ಈ ಬಾರಿ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಎರಡು ಉಪಮುಖ್ಯಮಂತ್ರಿ ಸ್ಥಾನಗಳ ಪೈಕಿ ಒಂದು ಅಲ್ಪಸಂಖ್ಯಾತರಿಗೆ ಹಾಗೂ ಮತ್ತೊಂದು ಎಸ್ಸಿ ಸಮುದಾಯದವರಿಗೆ ನೀಡುವುದಾಗಿ ಪಕ್ಷದ ವರಿಷ್ಠರು ಈಗಾಗಲೇ ಘೋಷಿಸಿದ್ದಾರೆ. ಆದ್ದರಿಂದ ರಾಜ್ಯದ ಜನತೆ ಈ ಬಾರಿ ಜೆಡಿಎಸ್ ಪಕ್ಷದ ಅಭ್ಯರ್ಥಿಗಳನ್ನು ಆಶೀರ್ವದಿಸಬೇಕು ಎಂದು ಅವರು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಮೊಹಮದ್ ಇಕ್ಬಾಲ್, ಮುಖಂಡರಾದ ಆರ್.ಜಿ. ಆಂಜಿನಪ್ಪ, ಬೆಳ್ಳಿ ಲೋಕೇಶ್, ಇಮ್ತಿಯಾಜ್ ಅಹಮದ್, ಸುಲ್ತಾನ್ ಮೊಹಮದ್ ಮತ್ತಿತರರು ಉಪಸ್ಥಿತರಿದ್ದರು.

Leave a Comment