ಜೂನ್ 1 ರಿಂದ ಮುಜರಾಯಿ ದೇವಸ್ಥಾನಗಳು ಓಪನ್, ಮಸೀದಿ, ಚರ್ಚ್ ಬಗ್ಗೆ ಇನ್ನೂ ತೀರ್ಮಾನವಿಲ್ಲ: ಪೂಜಾರಿ

ಬೆಂಗಳೂರು, ಮೇ 26- ಜೂನ್ 1 ರಿಂದ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಒಳಪಡುವ ದೇವಸ್ಥಾನಗಳನ್ನು ತೆರೆಯಲು ನಿರ್ಧರಿಸಿದ್ದು, ಮಸೀದಿ, ಚರ್ಚ್ ಗಳನ್ನು ತೆರೆಯವ ಕುರಿತು ಇನ್ನೂ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಮುಜರಾಯಿ ಇಲಾಖೆಯಿಂದ ರಾಜ್ಯದ ಪ್ರಮುಖ ದೇವಾಲಯಗಳ ಇ-ಕಾಣಿಕೆ ಮತ್ತು ಸೇವೆಗಳ ಆನ್ ಲೈನ್ ಬುಕ್ಕಿಂಗ್ ಗೆ ಇಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಚಾಲನೆ ನೀಡಿದ್ದು, 50 ದೇವಸ್ಥಾನಗಳಿಗೆ ಆನ್ ಲೈನ್ ಬುಕಿಂಗ್ ಸೇವೆಯನ್ನು ವಿಸ್ತರಣೆ ಮಾಡಲಾಗುವುದು ಎಂದಿದ್ದಾರೆ.
ಮುಜರಾಯಿ ಇಲಾಖೆಯ ಸರಳ ವಿವಾಹ ಯೋಜನೆಯನ್ನು ಮುಂದುವರೆಸಲು ನಿರ್ಧರಿಸಿದ್ದು, 50 ಜನರಿಗೆ ಸೀಮಿತಗೊಳಿಸಿ ಮದುವೆ ಮಾಡಿಸಲಾಗುವುದು ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಮುಜರಾಯಿ ಇಲಾಖೆ ಪ್ರಗತಿ ಪರಿಶೀಲನಾ ಸಭೆಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಾಮಾಜಿಕ ಅಂತರ ಕಾಯ್ದುಕೊಂಡು ದೇವಸ್ಥಾನಗಳಲ್ಲಿ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು. ಬಹುತೇಕ ಲಾಕ್ ಡೌನ್ ನಿಯಮಗಳು ಸಡಲಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ದೇವಸ್ಥಾನಗಳನ್ನು ತೆರೆಯಲು ಅವಕಾಶ ಕೊಡಲಾಗುವುದು ಎಂದರು.
ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿನ ದೇವಸ್ಥಾನಗಳನ್ನು ತೆರೆದು ಪೂಜಾ ಕೈಂಕರ್ಯಗಳಿಗೆ ಅವಕಾಶ ನೀಡುತ್ತಿದ್ದು, ದೇವಾಲಯಗಳಲ್ಲಿ ಎಲ್ಲ ಸೇವೆಗಳೂ ಇರಲಿವೆ. ಆದರೆ ದೇವರ ಉತ್ಸವಗಳು, ಜಾತ್ರೆ, ಧಾರ್ಮಿಕ ಸಭೆಗಳನ್ನು ನಡೆಸುವಂತಿಲ್ಲ ಎಂದು ಹೇಳಿದರು.

ಆಂಧ್ರಪ್ರದೇಶದ ತಿರುಮಲ ಕರ್ನಾಟಕ ಛತ್ರಕ್ಕೆ ಸೇರಿದ ಸ್ಥಳಗಳಲ್ಲಿ ನೂತನ ವಸತಿ ಗೃಹಗಳ ನಿರ್ಮಾಣಕ್ಕೆ 200 ಕೋಟಿ ರೂ.ಗಳ ಅನುದಾನ ಮಂಜೂರು ಮಾಡುತ್ತಿದ್ದು, ಕಾಮಗಾರಿ ಪ್ರಾರಂಭಕ್ಕೆ ಕ್ರಮವಹಿಸಲು ಸೂಚನೆ ಕೊಡಲಾಗಿದೆ ಎಂದು ಶ್ರೀನಿವಾಸ ಪೂಜಾರಿ ಹೇಳಿದರು.

Share

Leave a Comment