ಜೂ.೨೨ರಿಂದ ಕನ್ನಡದ ಕೋಟ್ಯಧಿಪತಿ

ಬೆಂಗಳೂರು, ಜೂ. ೧೯-ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮ ಕಲರ್ಸ್ ಕನ್ನಡ ವಾಹಿನಿಯಲ್ಲಿ ಇದೇ ಜೂನ್ ೨೨ ರಿಂದ ಆರಂಭವಾಗಲಿದೆ.
ಜೂ.೨೨ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ ೮ ಗಂಟೆಗೆ ಪ್ರಸಾರವಾಗಲಿರುವ ಕನ್ನಡದ ಕೋಟ್ಯಧಿಪತಿಯನ್ನು ನಟ ಪುನೀತ್ ರಾಜ್‌ಕುಮಾರ್ ಮತ್ತೆ ಈ ಶೋ ನಡೆಸಿಕೊಡಲಿದ್ದಾರೆ.
ಈಗಾಗಲೇ ಕನ್ನಡದ ಕೋಟ್ಯಧಿಪತಿಗೆ ಹುಬ್ಬಳ್ಳಿ, ಮೈಸೂರು, ದಾವಣಗೆರೆ, ಮಂಗಳೂರು ಮತ್ತು ಬೆಂಗಳೂರಿನಲ್ಲಿ ಅಡಿಷನ್ ನಡೆಸಲಾಗಿದೆ. ಒಟ್ಟು ೪೩ ಸಂಚಿಕೆಗಳು ಮೂಡಿಬರಲಿದ್ದು, ನಾಲ್ಕು ಸಂಚಿಕೆಗಳ ಚಿತ್ರೀಕರಣ ಪೂರ್ಣಗೊಳಿಸಲಾಗಿದೆ.
ಈ ಬಾರಿ ವೀಕ್ಷಕರಿಗೂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಇದಕ್ಕಾಗಿಯೇ ವೂಟ್ ಮತ್ತು ಮೈ ಜಿಯೊ ಆಪ್‌ಗಳಲ್ಲಿ ಪ್ಲೇ ಅಲಾಂಗ್ ಆರಂಭಿಸಲಾಗಿದೆ. ಇದರ ಮೂಲಕ ವೀಕ್ಷಕರು ಕಾರ್ಯಕ್ರಮದ ಜೊತೆಯಲ್ಲಿಯೇ ಕೇಳುವ ಪ್ರಶ್ನೆಗಳಿಗೆ ಪ್ಲೇ ಅಲಾಂಗ್‌ನಲ್ಲಿಯೇ ಉತ್ತರಿಸಿ ಬಹುಮಾನ ಗೆಲ್ಲಬಹುದು.
ಹೊಸ ಹುರುಪಿನೊಂದಿಗೆ ಕಾರ್ಯಕ್ರಮ ನಡೆಸಿಕೊಡಲು ಸಿದ್ಧರಾಗಿರುವ ಪುನೀತ್ ರಾಜ್‌ಕುಮಾರ್ ಸಿದ್ಧಾರ್ಥ್ ಬಾಸಾ ನನಗೆ ಈ ಕಾರ್ಯಕ್ರಮಕ್ಕೆ ಸ್ಫೂರ್ತಿ ನೀಡಿದ್ದಾರೆ. ನಾನು ಚಿಕ್ಕವಯಸ್ಸಿನಲ್ಲಿ ಇದ್ದಾಗ ಅವರು ಕ್ವಿಝ್ ಮಾಡುತ್ತಿದ್ದರು. ಅವರನ್ನು ನೋಡಿ ನಾನು ಬೆಳೆದಿದ್ದೇನೆ. ನಾನು ಅವರ ದೊಡ್ಡ ಅಭಿಮಾನಿ ಎಂದು ಪುನೀತ್ ಹೇಳಿದ್ದಾರೆ.
ಅಮಿತಾಬ್ ಬಚ್ಚನ್ ರಂತಹ ದಿಗ್ಗಜ ನಟರು ನಡೆಸಿಕೊಟ್ಟ ಕಾರ್ಯಕ್ರಮವನ್ನು ನಾನು ಹೇಗೆ ಮಾಡೋದು ಎಂಬ ಭಯ ನನ್ನನ್ನು ಕಾಡಿತ್ತು. ಆದರೆ ನನ್ನ ತಾಯಿ ನನಗೆ ಮೊದಲ ಧೈರ್ಯ ನೀಡಿದ್ದರು. ನಿನ್ನಿಂದ ಇದು ಸಾಧ್ಯ ಎಂದು ಮೊದಲು ನನ್ನ ತಾಯಿ ನನಗೆ ಹೇಳಿದರು. ಆ ನಂತರ ನನ್ನ ಸಹೋದರರಾದ ಶಿವಣ್ಣ ಹಾಗೂ ರಾಘಣ್ಣ ಕೂಡ ನನಗೆ ಧೈರ್ಯ ತುಂಬಿದರು. ಅಲ್ಲದೆ ರಾಘಣ್ಣ ಈ ಕಾರ್ಯಕ್ರಮದಲ್ಲೂ ನನ್ನ ಜೊತೆ ಇರ್ತಾರೆ ಎಂದು ಪುನೀತ್ ನೆನೆಪು ಮೆಲುಕು ಹಾಕಿದರು.
‘ಈ ಹಿಂದೆ ಎರಡು ಬಾರಿ ಕಾರ್ಯಕ್ರಮ ನಡೆಸಿ ಕೊಟ್ಟಿದ್ದೇನೆ. ಮೂರನೇ ಬಾರಿಗೆ ಕಾರ್ಯಕ್ರಮ ನಡೆಸಿಕೊಡಲು ಉತ್ಸುಕನಾಗಿದ್ದೇನೆ.ರಾಜ್ಯದ ವಿವಿಧೆಡೆಯಿಂದ ಹಲವು ಮಂದಿ ಕಾರ್ಯಕ್ರಮದ ಮೇಲೆ ಭರವಸೆ ಇಟ್ಟುಕೊಂಡು ಬರುತ್ತಾರೆ. ಕೆಲವರು ದುಃಖ ತೋಡಿಕೊಳ್ಳುತ್ತಾರೆ. ಆದರೆ, ನಾನು ಅವರು ಅಳುವುದನ್ನು ಇಷ್ಟಪಡುವುದಿಲ್ಲ. ಹುಟ್ಟೂರು, ಅಲ್ಲಿನ ಸಂಸ್ಕೃತಿ, ಅವರ ವೃತ್ತಿ ಸೇರಿದಂತೆ ಬದುಕಿನ ಸಂತಸ ಕ್ಷಣಗಳನ್ನು ಹಂಚಿಕೊಳ್ಳುವಾಗ ನನಗೂ ಖುಷಿಯಾಗುತ್ತದೆ‘ ಎಂದು ಹೇಳಿದರು.
ವಾಹಿನಿಯ ಬ್ಯುಸಿನೆಸ್ ಹೆಡ್ ಪರಮೇಶ್ವರ ಗುಂಡ್ಕಲ್ ಮಾತನಾಡಿ, ‘ನಮ್ಮ ವಾಹಿನಿಯಲ್ಲಿ ಮೊದಲ ಬಾರಿಗೆ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮ ನಡೆಯುತ್ತಿದೆ. ಪಾರದರ್ಶಕವಾಗಿ ಕಾರ್ಯಕ್ರಮ ನಡೆಸಿಕೊಡುವುದೇ ನಮ್ಮ ಗುರಿ‘ ಎಂದರು.
ಜ್ಞಾನವೇ ಸಂಪತ್ತು ಎಂಬ ಪರಿಕಲ್ಪನೆಯ ಮೇಲೆ ನೀತಿರುವ ಗೇಮ್ ಶೋ ಇದಾಗಿದೆ ಇದರ ರೂಪು ರೇಷೆಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ ಆದರೆ ಕೋಟಿ ಗೆಲ್ಲಲು ಸ್ಪರ್ಧಿಗಳು ಪಡುವ ಪ್ರಯತ್ನ ಬುದ್ದಿವಂತಿಕೆ ತೋರಿಸುವ ವಿಧಾನ ಹೊಸದಾಗಿರುತ್ತದೆ ಸ್ಪರ್ಧಿಗಳ ಸಂಖ್ಯೆ ಎಷ್ಟಾಗುತ್ತದೆ ಎನ್ನುವುದು ಇನ್ನೂ ಖಚಿವಾಗಿಲ್ಲ ಎಂದು ಅವರು ತಿಳಿಸಿದರು.

Leave a Comment