ಜೂನ್ 1 ರಿಂದ ರೈಲು ಪ್ರಯಾಣದ ಮಾರ್ಗಸೂಚಿಗಳ ಪ್ರಕಟ

ನವದೆಹಲಿ, ಮೇ 21 – ಮುಂದಿನ ತಿಂಗಳಿನಿಂದ ರೈಲು ಸೇವೆಗಳನ್ನು ರೈಲ್ವೆ ಇಲಾಖೆ ಮರುಆರಂಭಿಸಲು ನಿರ್ಧರಿಸಿರುವುದರ ನಡುವೆಯೇ ಪ್ರಯಾಣಕ್ಕೆ ಮಾರ್ಗಸೂಚಿಗಳನ್ನು ಹೊರಡಿಸಿದೆ.

ಟಿಕೆಟ್‌ಗಳನ್ನು ಆನ್‌ಲೈನ್ ಮೂಲಕ ಮಾತ್ರ ಕಾಯ್ದಿರಿಸಲು ಅನುಮತಿ ನೀಡಲಾಗಿದೆ. ಯಾವುದೇ ಕಾಯ್ದಿರಿಸದ (ಯುಟಿಎಸ್) ಟಿಕೆಟ್‌ಗಳು, ತತ್ಕಾಲ್ ಮತ್ತು ಪ್ರೀಮಿಯಂ ತತ್ಕಾಲ್‌ ಬುಕ್ಕಿಂಗ್ ಅನ್ನು ಅನುಮತಿಸಲಾಗುವುದಿಲ್ಲ.
ಜೂನ್ 1 ರಿಂದ ರೈಲು ಸೇವೆಗಳಿಗಾಗಿ ರೈಲ್ವೆ ಸಚಿವಾಲಯ ಹೊರಡಿಸಿರುವ ಮಾರ್ಗಸೂಚಿಗಳ ಪ್ರಕಾರ, ಕಾಯ್ದಿರಿಸದ (ಯುಟಿಎಸ್) ಯಾವುದೇ ಟಿಕೆಟ್‌ಗಳನ್ನು ನೀಡಲಾಗುವುದಿಲ್ಲ .ಪ್ರಯಾಣದ ವೇಳೆ ಯಾವುದೇ ಪ್ರಯಾಣಿಕರಿಗೆ ಯಾವುದೇ ಟಿಕೆಟ್‌ಗಳನ್ನು ರೈಲಿನಲ್ಲಿ ನೀಡಲಾಗುವುದಿಲ್ಲ. ಅಲ್ಲದೆ, ಈ ರೈಲುಗಳಲ್ಲಿ ತತ್ಕಾಲ್ ಮತ್ತು ಪ್ರೀಮಿಯಂ ತತ್ಕಾಲ್ ಬುಕಿಂಗ್ ಅನ್ನು ಅನುಮತಿಸಲಾಗುವುದಿಲ್ಲ.
ಈಗಾಗಲೇ 100 ಜೋಡಿ ರೈಲುಗಳನ್ನು ಪಟ್ಟಿ ಮಾಡಲಾಗಿದೆ ಎಂದು ಅಧಿಕೃತ ಹೇಳಿಕೆ ಇಲ್ಲಿ ತಿಳಿಸಿದೆ. ಈ ಎಲ್ಲಾ ರೈಲುಗಳ ಬುಕಿಂಗ್ ಗುರುವಾರ ಬೆಳಿಗ್ಗೆ 10 ಗಂಟೆಯಿಂದ ಆರಂಭವಾಗಲಿದೆ.ಐಆರ್‍ ಸಿಟಿಸಿ ವೆಬ್‌ಸೈಟ್ ಮೂಲಕ ಅಥವಾ ಮೊಬೈಲ್ ಆ್ಯಪ್ ಮೂಲಕ ಮಾತ್ರ ಆನ್‌ಲೈನ್ ಇ-ಟಿಕೆಟಿಂಗ್ ಮಾಡಲಾಗುತ್ತದೆ. ಯಾವುದೇ ರೈಲ್ವೆ ನಿಲ್ದಾಣಗಳ ಕೌಂಟರ್‌ನಲ್ಲಿ ಟಿಕೆಟ್‌ಗಳನ್ನು ಕಾಯ್ದಿರಿಸಲಾಗುವುದಿಲ್ಲ.
ರೈಲ್ವೆ ಸಚಿವಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ಗೃಹ ವ್ಯವಹಾರಗಳ ಸಚಿವಾಲಯದೊಂದಿಗೆ ಸಮಾಲೋಚಿಸಿ ಭಾರತೀಯ ರೈಲ್ವೆ, ರೈಲು ಸೇವೆಗಳನ್ನು ಜೂನ್ 1 ರಿಂದ ಭಾಗಶಃ ಪುನರ್‍ ಪ್ರಾರಂಭಿಸಲು ನಿರ್ಧರಿಸಿದೆ. ದೇಶಾದ್ಯಂತ ಲಾಕ್‌ಡೌನ್‌ ನಿಂದ ಸಿಲುಕಿರುವ ವಲಸಿಗರು ತವರಿಗೆ ಮರಳಲು ಈ ಸೇವೆಯಿಂದ ಅನುಕೂಲವಾಗಲಿದೆ.
ರೈಲಿನಲ್ಲಿ ಯಾವುದೇ ಕಾಯ್ದಿರಿಸದ ಬೋಗಿ ಇರುವುದಿಲ್ಲ. ಮಾರ್ಗಸೂಚಿಗಳಂತೆ, ದೃಢಪಡಿಸಿದ ಟಿಕೆಟ್ ಹೊಂದಿರುವ ಪ್ರಯಾಣಿಕರಿಗೆ ಮಾತ್ರ ರೈಲ್ವೆ ನಿಲ್ದಾಣಕ್ಕೆ ಪ್ರವೇಶಿಸಲು ಅವಕಾಶವಿರುತ್ತದೆ.ರೈಲು ಹತ್ತುವ ಮೊದಲು ಪ್ರಯಾಣಿಕರನ್ನು ತಪಾಸಣೆಗೊಳಪಡಿಸಲಾಗುತ್ತದೆ. ಸೋಂಕು ಲಕ್ಷಣರಹಿತ ಪ್ರಯಾಣಿಕರಿಗೆ ಮಾತ್ರ ರೈಲು ಹತ್ತಲು ಅವಕಾಶ ನೀಡಲಾಗುತ್ತದೆ.

ಪ್ರಯಾಣಿಕರು ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ ಎಂದು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

Leave a Comment