ಜೂನ್ 1ರಿಂದ ನ್ಯಾಯಾಲಯಗಳು ಪುನಾರಂಭ; ಹೈಕೋರ್ಟ್ ನಿಮದ ಮಾರ್ಗಸೂಚಿ ಪ್ರಕಟ

ಬೆಂಗಳೂರು, ಮೇ 26 -ಲಾಕ್ ಡೌನ್ ಹಿನ್ನೆಲೆಯಲ್ಲಿ ಕಳೆದೆರಡು ತಿಂಗಳಿಂದ ಸ್ಥಗಿತಗೊಂಡಿದ್ದ ರಾಜ್ಯದ ಎಲ್ಲಾ ಜಿಲ್ಲಾ ನ್ಯಾಯಾಲಯಗಳು ಜೂನ್ 1ರಿಂದ ಪುನಾರಂಭಗೊಳ್ಳಲಿವೆ. ಇದಕ್ಕಾಗಿ ರಾಜ್ಯ ಹೈಕೋರ್ಟ್ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಸೇರಿದಂತೆ ಹಲವು ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿದೆ.
ಮೊದಲೆರಡು ವಾರಗಳಲ್ಲಿ ಬೆಳಗಿನ ಮತ್ತು ಮಧ್ಯಾಹ್ನದ ಕಲಾಪಗಳಲ್ಲಿ ತಲಾ 10 ಪ್ರಕರಣಗಳ ವಿಚಾರಣೆ ನಡೆಸಬೇಕು. ಈ ಅವಧಿಯಲ್ಲಿ ವಕೀಲರ ಅನುಪಸ್ಥಿತಿಯಲ್ಲಿ ಯಾವುದೇ ಪ್ರಕರಣಗಳ ವಿಚಾರಣೆ ನಡೆಸುವಂತಿಲ್ಲ.ವಿಚಾರಣೆ ವೇಳೆ ಪ್ರಕರಣಗಳಿಗೆ ಸಂಬಂಧಪಟ್ಟ ವಕೀಲರನ್ನು ಹೊರತುಪಡಿಸಿ ಇತರರು ನ್ಯಾಯಲಯದೊಳಗೆ ಇರಲು ಅವಕಾಶವಿಲ್ಲ. ಕಕ್ಷಿದಾರರು, ವಕೀಲರ ಕ್ಲರ್ಕ್ ಗಳಿಗೂ ಪ್ರವೇಶಕ್ಕೆ ಅನುಮತಿ ನೀಡಲಾಗುವುದಿಲ್ಲ.
ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸುವುದಾದರೆ ಎರಡೂ ಪಕ್ಷಗಳ ವಕೀಲರು ಸವಾಲು ಮತ್ತು ಪಾಟಿ ಸವಾಲಿಗೆ ಹಾಜರಿರಬೇಕು. ಇವುಗಳನ್ನು ರೆಕಾರ್ಡ್ ಮಾಡಲಾಗುವುದು.ಯಾವುದೇ ನ್ಯಾಯಾಲಯದ ಹಾಲ್ ನಲ್ಲಿ 20ಕ್ಕಿಂತ ಹೆಚ್ಚು ವಕೀಲರು, ಸಿಬ್ಬಂದಿ ಹಾಜರಿರುವಂತಿಲ್ಲ.ಈ ನಿಯಮ ಮೀರಿದಲ್ಲಿ ಅಂತಹ ನ್ಯಾಯಾಲಯದ ಕಲಾಪ ಸ್ಥಗಿತಗೊಳಿಸಲಾಗುವುದು.
ಪ್ರತಿನಿತ್ಯ ವಿಚಾರಣೆಯ ಪ್ರಕರಣಗಳ ಕುರಿತು ವಕೀಲರಿಗೆ ಎಸ್ ಎಂಎಸ್ ಮೂಲಕ ಮಾಹಿತಿ ನೀಡಲಾಗುವುದು.10 ಅಥವಾ ಅದಕ್ಕೂಹೆಚ್ಚಿನ ನ್ಯಾಯಾಲಯಗಳನ್ನು ಹೊಂದಿರುವ ನ್ಯಾಯಾಲಯಗಳಲ್ಲಿ ಶೇ.50ರಷ್ಟು ಕೋರ್ಟ್ ಗಳನ್ನು ಮಾತ್ರ ನಡೆಸಲು ಅವಕಾಶವಿರುತ್ತದೆ.
ಸಾಧ್ಯವಿರುವಷ್ಟು ಮಟ್ಟಿಗೆ ಶೇ. 50ರಷ್ಟು ಸಿ ದರ್ಜೆಯ ಉದ್ಯೋಗಳಿಗೆ ಕರ್ತವ್ಯಕ್ಕೆ ಹಾಜರಾಗಲು ಸೂಚನೆ ನೀಡಬೇಕು ಎಂಬಿತ್ಯಾದಿ ಮಾರ್ಗಸೂಚಿಗಳನ್ನು ಹೈಕೋರ್ಟ್ ಬಿಡುಗಡೆಗೊಳಿಸಿದೆ.

ಪ್ರತಿ ನ್ಯಾಯಾಲಯದ ಪ್ರವೇಶ ಧ್ವಾರದಲ್ಲಿ ಪ್ರತಿಯೊಬ್ಬರ ಥರ್ಮಲ್ ತಪಾಸಣೆ ನಡೆಸಬೇಕು. ಗುರುತಿನ ಚೀಟಿ ತೋರಿಸುವ ಸಿಬ್ಬಂದಿಗೆ ಮಾತ್ರ ಪ್ರವೇಶ. ಇದಕ್ಕಾಗಿ ಅವರು ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಂಡು ಸರತಿಯಲ್ಲಿ ನಿಲ್ಲಬೇಕು ಎಂದು ಮಾರ್ಗಸೂಚಿ ತಿಳಿಸಿದೆ.

Share

Leave a Comment