ಜೂನ್ ೨೧ ಮತ್ತು ೨೨ ರಂದು ಆಳ್ವಾಸ್ ಪ್ರಗತಿ- ಬೃಹತ್ ಉದ್ಯೋಗ ಮೇಳ

ಮಂಗಳೂರು, ಜೂ.೧೫- ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದವತಿಯಿಂದ ಆಯೋಜಿಸಲ್ಪಡುತ್ತಿರುವ ಬೃಹತ್ ಉದ್ಯೋಗ ಮೇಳ ಪ್ರಮುಖ ವಲಯಗಳ ಅವಕಾಶಗಳೊಂದಿಗೆ ಜೂನ್ ೨೧ ಮತ್ತು ೨೨ ರಂದು ಮೂಡುಬಿದಿರೆಯ ವಿದ್ಯಾಗಿರಿ ಆವರಣದಲ್ಲಿ ನಡೆಯಲಿದೆ.
ಹನ್ನೊಂದನೆ ಆವೃತ್ತಿಯ ಉದ್ಯೋಗ ಮೇಳ ”ಆಳ್ವಾಸ್ ಪ್ರಗತಿ”ಯನ್ನು ಜೂನ್ ೨೧ ರಂದು ಪೂರ್ವಾಹ್ನ ೦೯.೩೦ಕ್ಕೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್. ಸಚ್ಚಿದಾನಂದ ಉದ್ಘಾಟಿಸಲಿದ್ದು, ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೋ. ಪಿ. ಸುಬ್ರಮಣ್ಯ ಯಡಪಡಿತ್ತಾಯ ಮುಖ್ಯ ಅತಿಥಿ ಗಳಾಗಿ ಆಗಮಿಸಲಿದ್ದಾರೆ. ಮೂಲ್ಕಿ-ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀ ಉಮಾನಾಥ್ ಕೋಟ್ಯಾನ್ ಅಧ್ಯಕ್ಷತೆ ವಹಿಸಲಿದ್ದು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಕಾರ್‍ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.
ಆಳ್ವಾಸ್ ಪ್ರಗತಿ-೨೦೧೯ರ ಹನ್ನೊಂದನೆ ಆವೃತ್ತಿಯಲ್ಲಿ ಐಟಿ, ಐಟಿಎಸ್, ಮ್ಯಾನುಫ್ಯಾಕ್ಚರಿಂಗ್, ಹೆಲ್ತ್‌ಕೇರ್ ಮತ್ತು ಫಾರ್ಮಾ, ಮಾರಾಟ ಮತ್ತು ಚಿಲ್ಲರೆ ವ್ಯಾಪಾರ, ಆಟೋಮೊಬೈಲ್, ಬ್ಯಾಂಕಿಂಗ್ ಮತ್ತು ಹಣಕಾಸು, ಹಾಸ್ಪಿಟಾಲಿಟಿ, ಶಿಕ್ಷಣ ಮತ್ತು ಎನ್‌ಜಿಓಗಳನ್ನು ಪ್ರತಿನಿಧಿಸುವ ಉನ್ನತ ಕಂಪೆನಿಗಳು ನೇಮಕಾತಿ ನಡೆಸಲಿವೆ. ಈ ಕಂಪೆನಿಗಳು ಪದವಿ ಮತ್ತು ಸ್ನಾತಕೋತ್ತರ ಪದವೀಧರರು, ವೈದ್ಯಕೀಯ ಮತ್ತು ಪ್ಯಾರಾ ಮೆಡಿಕಲ್, ಇಂಜಿನಿಯರಿಂಗ್, ಆರ್ಟ್ಸ್, ಕಾಮರ್ಸ್ ಹಾಗೂ ಮ್ಯಾನೇಜ್‌ಮೆಂಟ್, ಬೇಸಿಕ್ ಸೈನ್ಸ್, ನರ್ಸಿಂಗ್, ಐಟಿಐ, ಡಿಪ್ಲೊಮಾ, ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿ ಮತ್ತು ಇತರ ವಿದ್ಯಾರ್ಹತೆಗಳುಳ್ಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸಲಿವೆ. ನರ್ಸ್, ವೈದ್ಯರು, ಫಿಜಿಯೋತೆರಪಿಸ್ಟ್, ಲ್ಯಾಬ್ ಟೆಕ್ನಿಷಿಯನ್, ತೆರಪಿಸ್ಟ್‌ಗಳಿಗೆ ಆರೋಗ್ಯ ಕ್ಷೇತ್ರದ ಪ್ರತಿಷ್ಟಿತ ಆಸ್ಪತ್ರೆಗಳಾದ ಅಪೋಲೋ, ಕ್ಲೌಡ್‌ನೈನ್, ಎ.ಜೆ ಜೊತೆಗೆ ನಾಡಿನ ಇನ್ನಿತರ ಪ್ರತಿಷ್ಟಿತ ೧೫ ಆಸ್ಪತ್ರೆಗಳಲ್ಲಿ ಉದ್ಯೋಗಾವಕಾಶಗಳಿವೆ.

ಮಲ್ಟಿನ್ಯಾಷನಲ್ ಆಡಿಟ್ ಕಂಪೆನಿಗಳಾದ ಇವೈ ಹಾಗೂ ಥಾಮ್ಸನ್ ರಾಯಿಟರ್‍ಸ್ ಈ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲಿವೆ.
ಟೊಯೋಟೊ ಇಂಡಸ್ಟ್ರಿಸ್ ಇಂಜಿನ್ ಇಂಡಿಯಾ ಪ್ರೈ.ಲಿ., ಟಿಎಮ್‌ಇಐಸಿ, ಸ್ಯಾನ್ರಿಯಾ ಇಂಜಿನಿಯರಿಂಗ್, ಸ್ವಿಚ್‌ಗೇರ್ ಎಕ್ಸಪರ್ಟೈಸ್ ಕಂಪೆನಿಗಳು ಮ್ಯಾಕನಿಕಲ್ ಕ್ಷೇತ್ರದ ಪ್ರಮುಖ ೭೦ ಉದ್ಯೋಗಾವಕಾಶವನ್ನು ನೀಡಲಿದೆ.
ಥಾಮ್ಸನ್ ರಾಯಿಟರ್‍ಸ್, ಎಂಫಸಿಸ್, ಮೆವಾಂಟಿಕ್, ಕೋಡ್‌ಕ್ರಾಪ್ಟ್ ಹಾಗೂ ಇನ್ನಿತರ ಐಟಿ ಕಂಪೆನಿಗಳು ಕೋರ್ ಐಟಿ ಕ್ಷೇತ್ರದ ೨೦೦ಕ್ಕೂ ಅಧಿಕ ಅವಕಾಶಗಳ ಜೊತೆಗೆ ಐಟಿಇಎಸ್ ಕ್ಷೇತ್ರದಲ್ಲ್ಲಿ ೨೦೦೦ಕ್ಕೂ ಮಿಕ್ಕಿದ ಉದ್ಯೋಗವಕಾಶಗಳಿವೆ.
ಪ್ರತಿಷ್ಟಿತ ಕಂಪೆನಿಗಳಾದ ಲೇಖಾ ವೈಯರ್‌ಲೆಸ್, ಆರ್‌ಟಿಡಬ್ಲ್ಯೂ ಹೆಲ್ತಕೇರ್, ಕಿಡ್‌ವೆಂಟೋ ಕಂಪೆನಿಗಳು ಕೋರ್ ಇಲೆಕ್ಟ್ರಾನಿಕ್ಸ್ ಇಂಜಿನಿಯರ್‌ಗಳಿಗೆ ಅವಕಾಶ ನೀಡಲಿದೆ.
ಜೆಎಸ್‌ಡಬ್ಲ್ಯೂ , ಯೆಸ್ ಮ್ಯಾನುಫ್ಯಾಕ್ಚರಿಂಗ್, ಅಜಕ್ಸ್ ಇಂಜಿನಿಯರಿಂಗ್ ಪ್ರೈ. ಲಿ, ನೆಕ್ಸ್ಟೀರ್, ಜೆಕೆ ಟೈರ್‍ಸ್, ಕೆಯಿನ್ ಫೈ, ಟಫೆ ಹಾಗೂ ಇನ್ನಿತರ ಪ್ರಮುಖ ಕಂಪೆನಿಗಳು ಡಿಪ್ಲೋಮಾ ವಿದ್ಯಾರ್ಥಿಗಳಿಗೆ ೫೦೦ ಕ್ಕೂ ಅಧಿಕ ಉದ್ಯೋಗಾವಕಾಶವನ್ನು ನೀಡಲಿವೆ.
ಐಟಿಐನ ವಿವಿಧ ಅಂಗಗಳಲ್ಲಿ ಮ್ಯಾನುಫೆಕ್ಚರಿಂಗ್ ವಲಯದ ಉದ್ಯೋಗಾಕಾಂಕ್ಷಿಗಳಿಗೆ ವಿಫುಲ ಅವಕಾಶಗಳಿವೆ
ವಾಣಿಜ್ಯ, ವಿಜ್ಞಾನ ಹಾಗೂ ಕಲಾ ವಿಭಾಗದ ಪದವೀಧರರಿಗೆ ವಿವಿಧ ವಲಯಗಳಲ್ಲಿ ೫೦೦೦ಕ್ಕೂ ಅಧಿಕ ಉದ್ಯೋಗವಕಾಶಗಳಿವೆ.
ಪ್ರತಿಷ್ಟಿತ ಮಲ್ಟಿನ್ಯಾಷನಲ್ ಕಂಪೆನಿ ಹಾಗೂ ನಾಡಿನ ಪ್ರಮುಖ ಬ್ಯಾಂಕ್‌ಗಳಲ್ಲಿ ಎಂ.ಬಿ.ಎ ಮತ್ತು ಎಂಕಾಂ ಪದವೀಧರರಿಗೆ ಕ್ರಮವಾಗಿ ೩೦೦ ಹಾಗೂ ೧೦೦ ಉದ್ಯೋಗವಕಾಶಗಳಿವೆ.
ಅಮೇಜಾನ್ ಕಂಪೆನಿ, ಪದವಿ ಹಾಗೂ ಸ್ನಾತಕೋತ್ತರ ಪದವೀಧರರಿಗೆ ಟಿಆರ್‌ಎಮ್‌ಎಸ್ ಹಾಗೂ ಫ್ರೋಫೈಲ್ ಕಂಟೆಂಟ್ ರೈಟಿಂಗ್ ಕ್ಷೇತ್ರದಲ್ಲಿ ಅರ್ಹ ೧೫೦ ಅಭ್ಯರ್ಥಿಗಳಿಗೆ ಅವಕಾಶವನ್ನು ನೀಡಲಿದೆ.
ಐಬಿಎಂ, ಟೆಕ್ ಮಹೀಂದ್ರಾ, ಹೆಚ್‌ಜಿಎಸ್, ಫಿಡ್‌ಲಿಸ್ ಹಾಗೂ ಇನ್ನಿತರ ಕಂಪೆನಿಗಳು ಟೆಕ್ ಸಪೋರ್ಟನಂತಹ ಉದ್ಯೋಗಾವಕಾಶವಗಳಿಗೆ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದೆ.
ಮಂಗಳೂರು, ಉಡುಪಿ, ಬೆಂಗಳೂರು ಹಾಗೂ ಮೈಸೂರು ಭಾಗದ ಸ್ಟಾರ್ಟಅಪ್ ಕಂಪೆನಿಗಳು ಯುವ ಸಮುದಾಯಕ್ಕೆ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಉತ್ತಮ ಅವಕಾಶವನ್ನು ನೀಡಲಿವೆ. ಉದ್ಯೋಗಾಕಾಂಕ್ಷಿಗಳಿಗೆ ಆನ್‌ಲೈನ್ ನೊಂದಾವಣಿ ಕಡ್ಡಾಯವಾಗಿದ್ದು, ಆ ಮೂಲಕ ಸಂಗ್ರಹವಾದ ಮಾಹಿತಿಯನ್ನು ನೇಮಕಾತಿ ಪ್ರಕ್ರಿಯೆ ಸುಲಲಿತವಾಗಿ ನಡೆಯಲು ಬಳಸಿಕೊಳ್ಳಲಾಗುದು.
ಹೊರ ಜಿಲ್ಲೆಗಳಿಂದ ಬರುವ ಉದ್ಯೋಗಾಕಾಂಕ್ಷಿಗಳಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು.

 

Leave a Comment