ಜೂನ್ ಬಳಿಕ ರೈತರ ಬೆಳೆಗಳಿಗೆ ಉತ್ತಮ ಬೆಲೆ: ತರಕಾರಿ ಕೈಗಾಡಿ ಮಾರಾಟಕ್ಕೂ ಪಾಸ್: ಬಿ.ಸಿ.ಪಾಟೀಲ್

ಧಾರವಾಡ, ಏ.6 -ಕೃಷಿ ಇಲಾಖೆ ಹಾಗೂ ಸರ್ಕಾರ ಸದಾ ರೈತರ ಬೆಂಬಲಕ್ಕಿದ್ದು, ಜೂನ್ ತಿಂಗಳಲ್ಲಿ ರೈತರ ಬೆಳೆಗಳಿಗೆ ಉತ್ತಮ ಬೆಲೆ ಬರಲಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇಂದು ಬೆಳಿಗ್ಗೆ ಕೃಷಿ ಸಚಿವರು ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ರೈತರ ಸಮಸ್ಯೆಗಳು, ಕೃಷಿ ಉತ್ಪನ್ನಗಳ ಮಾರಾಟ ಸರಕು ಸಾಗಾಣಿಕೆ, ಬೀಜ ಗೊಬ್ಬರ ಸರಬರಾಜು ಸೇರಿದಂತೆ ಸಮಗ್ರ ಕೃಷಿ ಚಟುವಟಿಕೆಗಳ ಸಂಬಂಧ ಜಿಲ್ಲೆಯ ಕೃಷಿ, ಪೊಲೀಸ್, ಆರೋಗ್ಯ ಸೇರಿದಂತೆ ಇತರೆ ಇಲಾಖೆಗಳ ಅಧಿಕಾರಿಗಳ ಜೊತೆ ಸಭೆ ನಡೆಸಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಅನಿರೀಕ್ಷಿತ ಕೊರೊನಾದಿಂದಾಗಿ ರೈತರ ಬೆಳೆಗಳಿಗೆ ಬೇಡಿಕೆ ಕಡಿಮೆಯಾಗಿದ್ದರೂ ಮುಂದಿನ ದಿನಗಳಲ್ಲಿ ಫಸಲುಗಳಲ್ಲಿ ಉತ್ತಮ ಬೆಲೆ ಬರಲಿದೆ‌‌. ಯಾರೂ ಆತಂಕಕ್ಕೊಳಗಾಗುವ ಅವಶ್ಯಕತೆಯಿಲ್ಲ. ರೈತರ ಪರಿಕರ ಬೆಳೆಗಳು, ತರಕಾರಿ ಹಣ್ಣುಹಂಪಲು ಮಾರಾಟ ಮಾಡಲು ಯಾವುದೇ ನಿರ್ಬಂಧವಿಲ್ಲ. ಸರ್ಕಾರದಿಂದ ಉಗ್ರಾಣ ತೆರೆಯಲು ನಿರ್ಧರಿಸಲಾಗಿದೆ. ತರಕಾರಿ ಮಾರುವ ಕೈಗಾಡಿಯವರೆಗೂ ಪಾಸ್ ನೀಡುವಂತೆ ಕೃಷಿ ಅಧಿಕಾರಿಗಳಿಗೆ ಈ ಸಂದರ್ಭದಲ್ಲಿ ಅವರು ಸೂಚಿಸಿದರು.

ಜಿಲ್ಲೆಯಲ್ಲಿ ರೈತರಿಗೆ ಅಗತ್ಯವಾದ ಬೀಜ ಗೊಬ್ಬರ ಪೂರೈಕೆಗೆ ಯಾವುದೇ ಸಮಸ್ಯೆ ಇಲ್ಲ. ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯಾಪಾರ ವಹಿವಾಟು ಮಾಡಬಹುದಾಗಿದೆ ಎಂದು ಸ್ಪಷ್ಟಪಡಿಸಿದರು.

ಮಧ್ಯವರ್ತಿಗಳ ಹಾವಳಿಯಿಂದ ರೈತರಿಗೆ ಯಾವುದೇ ರೀತಿಯ ಸಮಸ್ಯೆ ಆಗಬಾರದು. ಒಂದು ವೇಳೆ ಯಾರಾದರೂ ಕೊರೊನಾ ಪರಿಸ್ಥಿತಿಯನ್ನು ದುರ್ಬಳಕೆ ಮಾಡಿಕೊಳ್ಳುವುದಾಗಲೀ ರೈತರಿಗೆ ಅನವಶ್ಯಕ ತೊಂದರೆ ಕೊಡುವುದಾಗಲೀ ಮಾಡಿದ್ದು ಕಂಡುಬಂದರೆ ತಕ್ಷಣ ಅಂತಹವರ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ಬಿ‌.ಸಿ.ಪಾಟೀಲ್ ಸೂಚಿಸಿದರು. ಇದೇ ವೇಳೆ ಜಿಲ್ಲೆಯಲ್ಲಿನ ಕೊರೊನಾ ಸ್ಥಿತಿಗತಿ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳಿಂದ ಸಚಿವರು ಮಾಹಿತಿ ಪಡೆದರು.

ಹೊಲಗಳಲ್ಲಿ ಬೋರ್ ವೆಲ್ ಕೊರೆಯಲು ಯಾವುದೇ ತೊಂದರೆ ಇಲ್ಲ. ಕೃಷಿ ಯಂತ್ರೋಪಕರಣಗಳ ಮಾರಾಟಕ್ಕಾಗಲೀ ಅಂಗಡಿಗಳಿಗಾಗಲೀ ದುರಸ್ತಿ ಅಂಗಡಿಗಳಿಗೆ, ಟ್ಯಾಕ್ಟರ್ ಗ್ಯಾರೇಜ್ ಗಳಿಗೆ ವಿನಾಯಿತಿ ನೀಡಲಾಗಿದ್ದು ಸಾಮಾಜಿಕ ಅಂತರ‌ಕಾಯ್ದುಕೊಂಡು ಕಾರ್ಯನಿರ್ವಹಿಸಬಹುದಾಗಿದೆ ಎಂದು ಕೃಷಿ ಸಚಿವರು ಸಭೆಯಲ್ಲಿ ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ಶಾಸಕ ಅಮೃತ್‌ದೇಸಾಯಿ ಮೇಲ್ಮನೆ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ, ಪ್ರಸಾದ್ ಅಬ್ಬಯ್ ಉಪಸ್ಥಿತರಿದ್ದರು.

Leave a Comment