ಜೂನ್ ನಲ್ಲಿಯೇ ಐಪಿಎಲ್ ಭವಿಷ್ಯ ತೀರ್ಮಾನ

ನವದೆಹಲಿ, ಮೇ 29 – ಟಿ-20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ಬಗ್ಗೆ ಜೂನ್‌ನಲ್ಲಿ ತೀರ್ಮಾನವಾದ ಬಳಿಕವೇ ಐಪಿಎಲ್‌ ಭವಿಷ್ಯದ ಬಗ್ಗೆ ತೀರ್ಮಾನ ಹೊರಬೀಳಲು ಸಾಧ್ಯ ಎನ್ನಲಾಗಿದೆ.

ಈ ವರ್ಷದ ಅಕ್ಟೋಬರ್-ನವೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಸಲು ಉದ್ದೇಶಿಸಿರುವ ಟಿ-20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ವೇಳಾಪಟ್ಟಿ ಕುರಿತ ನಿರ್ಧಾರವನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಜೂನ್ 10 ರವರೆಗೆ ಮುಂದೂಡಿದೆ.  ಹಾಗಾಗಿ ಜೂನ್ 10ರ ಬಳಿಕವೇ ಇಂಡಿಯನ್ ಪ್ರೀಮಿಯರ್ ಲೀಗ್ ನ 13 ನೇ ಆವೃತ್ತಿಗೆ ಸಂಬಂಧಿಸಿದ ತೀರ್ಮಾನ ಹೊರ ಹೊಮ್ಮುವ ಸಾಧ್ಯತೆಯಿದೆ.

ಜಾಗತಿಕ ಸಾಂಕ್ರಾಮಿಕ ರೋಗವಾಗಿ ಮಾರ್ಪಟ್ಟಿರುವ ಕೊರೊನಾ ವೈರಸ್‌ನಿಂದಾಗಿ ಈ ವರ್ಷ ನಡೆಯಲಿರುವ ಟಿ 20 ವಿಶ್ವಕಪ್ ಅನ್ನು 2022 ರವರೆಗೆ ಮುಂದೂಡಬಹುದೆಂದು ಎಂದು ಹೇಳಲಾಗಿತ್ತು. ಆದರೆ ಈಗ ವಿಶ್ವಕಪ್ ನಡೆಯುತ್ತದೆಯೇ ಅಥವಾ ಮುಂದೂಡಲಾಗುತ್ತದೆಯೇ ಎನ್ನುವುದನ್ನು ಜೂನ್‌ನಲ್ಲಿ ನಿರ್ಧರಿಸಲಾಗುವುದು. ಐಪಿಎಲ್‌ನ ಭವಿಷ್ಯವು ವಿಶ್ವಕಪ್‌ನ ಭವಿಷ್ಯದೊಂದಿಗೆ ಸಂಬಂಧ ಹೊಂದಿದೆ. ವಿಶ್ವಕಪ್‌ಗೆ ಸಂಬಂಧಿಸಿದಂತೆ ಯಾವುದೇ ನಿರ್ಧಾರ ತೆಗೆದುಕೊಳ್ಳುವುದು ಐಪಿಎಲ್‌ನ ಭವಿಷ್ಯವನ್ನು ಅವಲಂಬಿಸಿದೆ.

ವಿಶ್ವಕಪ್ ಅಕ್ಟೋಬರ್ 18 ರಿಂದ ನವೆಂಬರ್ 15 ರವರೆಗೆ ಆಸ್ಟ್ರೇಲಿಯಾದಲ್ಲಿ ನಡೆಸಲು ಉದ್ದೇಶಿಸಲಾಗಿದೆ. ವಿಶ್ವಕಪ್ ಮುಂದೂಡಿದರೆ, ಐಪಿಎಲ್ ನ 13 ನೇ ಆವೃತ್ತಿಯನ್ನು ನಡೆಸುವ ಮಾರ್ಗ ತೆರೆಯಬಹುದು ಎಂದು ಅಂದಾಜಿಸಲಾಗುತ್ತಿದೆ.

Share

Leave a Comment