ಜೂನ್‌ 2020ರಿಂದ  ‘ಒನ್ ನೇಷನ್, ಒನ್ ರೇಷನ್ ಕಾರ್ಡ್’ ಜಾರಿ : ಕೇಂದ್ರ ಸಚಿವ ಪಾಸ್ವಾನ್ ಘೋಷಣೆ

ನವದೆಹಲಿ : ಜೂನ್‌ 2020ರಿಂದ ರಾಷ್ಟ್ರವ್ಯಾಪ್ತಿ ‘ಒನ್ ನೇಷನ್, ಒನ್ ರೇಷನ್ ಕಾರ್ಡ್’ ಜಾರಿ ಯಾಗಲಿದೆ ಎನ್ನಲಾಗಿದೆ. ಬಡವರಿಗೆ ಸಬ್ಸಿಡಿಯುಕ್ತ ದರದಲ್ಲಿ ಆಹಾರಧಾನ್ಯವನ್ನು ತಡೆಯಿಲ್ಲದೆ ಪೂರೈಸುವ ನಿಟ್ಟಿನಲ್ಲಿ ‘ಒನ್‌ ನೇಷನ್‌, ಒನ್‌ ರೇಷನ್‌ ಕಾರ್ಡ್‌’ ಯೋಜನೆಯನ್ನು ಜಾರಿಗೊಳಿಸುವುದಾಗಿ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ತಿಳಿಸಿದ್ದಾರೆ.

ಅರ್ಹ ಫಲಾನುಭವಿಗಳು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ತಮ್ಮ ಹೆಸರಿನ ಆಹಾರ ಧಾನ್ಯಗಳನ್ನು ದೇಶದ ಯಾವುದೇ ನ್ಯಾಯಯುತ ಬೆಲೆ ಅಂಗಡಿಯಿಂದ (ಎಫ್‌ಪಿಎಸ್) ಅದೇ ಪಡಿತರ ಚೀಟಿ ಬಳಸಿ ಪಡೆಯಲು ಸಾಧ್ಯವಾಗುತ್ತದೆ. ಇಪಿಒಎಸ್ (ಎಲೆಕ್ಟ್ರಾನಿಕ್ ಪಾಯಿಂಟ್ ಆಫ್ ಸೇಲ್) ಸಾಧನಗಳಲ್ಲಿ ಬಯೋಮೆಟ್ರಿಕ್ / ಆಧಾರ್ ಧೃಡಿಕರಣದ ನಂತರ ಇದು ಲಭ್ಯವಾಗಲಿದೆ ಎಂದು ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪಾಸ್ವಾನ್ ಲೋಕಸಭೆಗೆ ತಿಳಿಸಿದರು. ‘ಒನ್ ನೇಷನ್ ಒನ್ ರೇಷನ್ ಕಾರ್ಡ್’ ಉಪಕ್ರಮದ ಅಡಿಯಲ್ಲಿ ಅಂತರ-ರಾಜ್ಯ ಪೋರ್ಟಬಿಲಿಟಿ ಸೌಲಭ್ಯವು ಸಂಪೂರ್ಣ ಆನ್‌ಲೈನ್ ಇಪೋಸ್ ಸಾಧನಗಳನ್ನು ಹೊಂದಿರುವ ಎಫ್‌ಪಿಎಸ್ ಮೂಲಕ ಮಾತ್ರ ಲಭ್ಯವಿರುತ್ತದೆ.

ಇದೇ ವೇಳೆ ಅವರು ಜೂನ್ 1 ರಿಂದ ದೇಶಾದ್ಯಂತ ಈ ಉಪಕ್ರಮವನ್ನು ಜಾರಿಗೆ ತರಲಾಗುವುದು ಎಂದು ಪಾಸ್ವಾನ್ ಹೇಳಿದರು. ಬಡಜನರು ಉದ್ಯೋಗ ಅಥವಾ ಇನ್ಯಾವುದೋ ಕಾರಣಕ್ಕೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ವಲಸೆ ಹೋದಾಗ ನಿರಾತಂಕವಾಗಿ ಆಹಾರ ಧಾನ್ಯ ಪಡೆಯಲು ಹೊಸ ಯೋಜನೆಯಿಂದ ಸಾಧ್ಯವಾಗಲಿದೆ. ಈ ಯೋಜನೆಯಿಂದ ಒಬ್ಬ ವ್ಯಕ್ತಿ ಅಥವಾ ಕುಟುಂಬ ವಿವಿಧ ರಾಜ್ಯಗಳಲ್ಲಿ ಒಂದಕ್ಕಿಂತ ಹೆಚ್ಚು ರೇಷನ್‌ ಕಾರ್ಡ್‌ಗಳನ್ನು ಹೊಂದುವ ಅಗತ್ಯವನ್ನು ನಿವಾರಿಸಲಾಗುತ್ತದೆ.

Leave a Comment