ಜು.23 ರಂದು ಕೃಷ್ಣರಾಜಮುಡಿ ಕಿರೀಟಧಾರಣ ಮಹೋತ್ಸವ

ಮೇಲುಕೋಟೆ : ಜು.18- ಚೆಲುವನಾರಾಯಣಸ್ವಾಮಿಯವರ ಐತಿಹಾಸಿಕ ಕೃಷ್ಣರಾಜಮುಡಿ ಕಿರೀಟಧಾರಣ ಮಹೋತ್ಸವ ಜುಲೈ 23 ರ ಮಂಗಳವಾರ ರಾತ್ರಿ 8 ಗಂಟೆಗೆ ನಡೆಯಲಿದ್ದು ಪೂರ್ವಭಾವಾವಿ ಕಾರ್ಯಕ್ರಮಗಳು 18ರ ಗುರುವಾರ ದಿಂದಲೇ ಆರಂಭವಾಗಲಿದೆ.
ಮುಮ್ಮುಡಿ ಕೃಷ್ಣರಾಜ ಒಡೆಯರ್ ಜನ್ಮನಕ್ಷತ್ರದ ಅಂಗವಾಗಿ ಆಷಾಡ ದ್ವೀತಿಯಾ ಶ್ರವಣನಕ್ಷತ್ರದ ದಿನವಾದ ಜುಲೈ18ರ ಗುರುವಾರದಂದು ಬೆಳಿಗ್ಗೆ ಶ್ರವಣನಕ್ಷತ್ರ ಉತ್ಸವಗಳು ನೆರವೇರಿತು. ನಂತರ ಮೂಲಮೂರ್ತಿ ಶ್ರೀ ತಿರುನಾರಾಯಣಸ್ವಾಮಿ ಹಾಗೂ ಬೆಟ್ಟದೊಡೆಯ ಶ್ರೀ ಯೋಗನರಸಿಂಹಸ್ವಾಮಿ ಹಾಗೂ ಆಚಾರ್ಯ ರಾಮಾನುರಿಗೆ ಮಹಾಭಿಷೇಕ ನಡೆಯಿತು. ಬೆಳಿಗ್ಗೆ 10 ಗಂಟೆಯವೇಳೆಗೆ ಮಹಾಭಿಷೇಕದ ಧಾರ್ಮಿಕ ಕೈಂಕರ್ಯಗಳು ಆರಂಭವಾಗಿ ಸಂಜೆ 5 ಗಂಟೆಗೆ ಕಲ್ಯಾಣೋತ್ಸವದೊಂದಿಗೆ ಮೊದಲದಿನ ಕಾರ್ಯಕ್ರಮಗಳು ಮುಕ್ತಾಯವಾಗಲಿದೆ
ಮುಮ್ಮುಡಿ ಶ್ರೀಕೃಷ್ಣರಾಜ ಒಡೆಯರ್ ಹೆಸರಲ್ಲಿ ನಡೆಯುತ್ತಾ ಬಂದಿರುವ ಹತ್ತು ದಿನಗಳ ಐತಿಹಾಸಿಕ ಕೃಷ್ಣರಾಜಮುಡಿ ಆಷಾಡ ಜಾತ್ರಾಮಹೋತ್ಸವ ಜುಲೈ 20 ರಿಂದ ಆರಂಭವಾಗಿ 29ರವರೆಗೆ ಹತ್ತು ದಿನಗಳಕಾಲ ನಡೆಯಲಿದ್ದು, ಬ್ರಹ್ಮೋತ್ಸವದ ಪ್ರಮುಖದಿನಾದ 23ರಂದು ರಾತ್ರಿ ಚೆಲುವನಾರಾಯಣಸ್ವಾಮಿಗೆ ಒಡೆಯರ್ ಭಕ್ತಿಪೂರ್ವಕವಾಗಿ ಸ್ವಾಮಿಗೆ ನೀಡಿರುವ ವಜ್ರಖಚಿತ ಕೃಷ್ಣರಾಜಮುಡಿ ಕಿರೀಟ ಧರಿಸಿ ಉತ್ಸವ ಮಾಡಲಾಗುತ್ತದೆ.
ಜಾತ್ರಾಮಹೋತ್ಸವದಲ್ಲಿ 19ರಂದು ಆಡಿಶುಕ್ರವಾರ ಅಧಿವಾಸರ ರಕ್ಷಾಬಂಧನ, 20 ರಂದು ಒಂದನೇ ತಿರುನಾಳ್ ನಿಮಿತ್ತ ಬೆಳಿಗ್ಗೆ 11 ಗಂಟೆಗೆ ದ್ವಜಾರೋಹಣ, ರಾತ್ರಿ ಭೇರಿತಾಡನ, 21 ರಂದು ಭಾನುವಾರ ಸಂಜೆ ನಾಗವಲ್ಲೀ ಮಹೋತ್ಸವ, ಶೇಷವಾಹನೋತ್ಸವ, 22 ರಂದು ಚಂದ್ರಮಂಡಲವಾಹನೋತ್ಸವ, 24ರಂದು ಸಂಜೆ ಪ್ರಹ್ಲಾದಪರಿಪಾಲನ, 25 ರಂದು ಸಂಜೆ ಗಜೇಂದ್ರಮೋಕ್ಷ ಅಶ್ವ ಹಾಗೂ ಗಜವಾಹನೋತ್ಸವ, 26 ಗುರುವಾರ ರಥೋತ್ಸವದ ಸಾಂಕೇತಿಕ ಉತ್ಸವ, 27 ರಂದು ತೆಪ್ಪೋತ್ಸವದ ಸಾಂಕೇತಿಕ ಉತ್ಸವ, ಡೋಲೋತ್ಸವ ಅಶ್ವವಾಹನೋತ್ಸವ 28 ರೋಹಿಣೀನಕ್ಷತ್ರ ಬೆಳಿಗ್ಗೆ 7ಕ್ಕೆ ಸಂದಾನಸೇವೆ, ಚೂರ್ಣಾಭಿಷೇಕ ಮದ್ಯಾಹ್ನ 11ಕ್ಕೆ ಅವಭೃತ, ಸಂಜೆ ಪರಕಾಲಮಠದಲ್ಲಿ ಪಟ್ಟಾಭಿಷೇಕ ಹಾಗೂ 29 ರಂದು ಪುಷ್ಪಯಾಗದೊಂದಿಗೆ ಕೃಷ್ಣರಾಜಮುಡಿ ಬ್ರಹ್ಮೋತ್ಸವ ಮುಕ್ತಾಯವಾಗಲಿದೆ.

Leave a Comment