ಜು.21 ರಾಷ್ಟ್ರೀಯ ಹೆದ್ದಾರಿ ಬಂದ್ ಬೃಹತ್ ಚಳುವಳಿ

ರಾಯಚೂರು.ಜು.12- ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ರವರು ಮಂಡಿಸಿರುವ ಅನಿಶ್ಚಿತ ನಿರ್ಣಯವುಳ್ಳ ಸುಸ್ತಿ ಬೆಳೆ ಸಾಲ ಮನ್ನಾ ಘೋಷಣೆ ಮರು ಪರಿಶೀಲನೆ, ಗ್ರಾಮೀಣ ಪ್ರದೇಶ ಪುನಶ್ಚೇತನಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿಶೇಷ ಪ್ಯಾಕೇಜ್ ಬಿಡುಗಡೆಗೆ ಆಗ್ರಹಿಸಿ ಜು.21 ರಂದು ಬಳ್ಳಾರಿ ಜಿಲ್ಲೆಯ ಹೊಸಪೇಟೆ ಹಿತ್ನಾಳ ಕ್ರಾಸ್ ಬಳಿಯಿರುವ ಎರಡು ರಾಷ್ಟ್ರೀಯ ಹೆದ್ದಾರಿ ಬಂದ್ ಚಳುವಳಿ ಹಮ್ಮಿಕೊಳ್ಳಲಾಗಿದೆಂದು ರಾಜ್ಯ ರೈತ ಸಂಘ ಹಸಿರು ಸೇನೆ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ್ ಹೇಳಿದರು.
ಅವರಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ರಾಜ್ಯ ರೈತರ ಸಾಲ ಸಂಪೂರ್ಣ ಮನ್ನಾ ಮಾಡುವಲ್ಲಿ ಕಾಂಗ್ರೆಸ್-ಜಾದಳ ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ರವರು ಅನ್ನದಾತ ವರ್ಗಕ್ಕೆ ನಂಬಿಕೆ ದ್ರೋಹ ಮಾಡಿದ್ದಾರೆ. ಹೆಚ್‌ಡಿಕೆ ರವರು ಇತ್ತೀಚಿಗೆ ಮಂಡಿಸಿರುವ ಬಜೆಟ್ ಸಾಲ ಮನ್ನಾ ಕೇವಲ ತಾತ್ಕಾಲಿಕ ಮನ್ನಾವಾಗಿದ್ದು, ಬಹುತೇಕ ಅನಿಶ್ಚಿತ ನಿರ್ಣಯಗಳಿಂದ ಕೂಡಿದೆ.
ಸಾಲ ಮನ್ನಾಕ್ಕೆ ವಿಧಿಸಿರುವ ಕಠಿಣ ಷರತ್ತಿನಿಂದಾಗಿ ರೈತ ಸಮುದಾಯಕ್ಕೆ ಸಾಲ ಮನ್ನಾ ಯಾವುದೇ ಪ್ರಯೋಜನಕ್ಕೆ ಬಾರದೆ ಚುನಾವಣಾ ಪ್ರಣಾಳಿಕೆ ನೀಡಿರುವ ಭರವಸೆಗೆ ಬದ್ಧರಾಗದೇ ರೈತ ಸಮುದಾಯಕ್ಕೆ ನಂಬಿಕೆ ವಂಚಿಸಲಾಗಿದೆ. ಪಕ್ಷದ ಪ್ರಣಾಳಿಕೆಯಲ್ಲಿ ರೈತರು, ಗರ್ಭೀಣಿ ಸ್ತ್ರೀಯರು, ವಯೋವೃದ್ಧರಿಗೆ ನೀಡಿರುವ ಭರವಸೆ ಹುಸಿಗೊಳಿಸಿ ಮಾತು ತಪ್ಪಿರುವ ಹೆಚ್‌ಡಿಕೆ ಸ್ವಸಹಾಯ ಗುಂಪುಗಳ ಸಾಲ ಮನ್ನಾ ವಿಚಾರದಲ್ಲಿಯೂ ಮಹಿಳೆಯರಿಗೆ ಟೋಪಿ ಹಾಕಲಾಗಿದೆ.
ಚುನಾವಣಾ ಸಂದರ್ಭದಲ್ಲಿ ನೀಡಿರುವ ಭರವಸೆ ಈಡೇರಿಸದ ಮುಖ್ಯಮಂತ್ರಿ ರೈತ ವಿರೋಧಿ ನೀತಿ ಖಂಡಿಸಿ ರೈತರು ಕೃಷಿ, ಕೂಲಿ ಕಾರ್ಮಿಕರು, ಮಹಿಳಾ ಸ್ವಸಹಾಯ ಗುಂಪುಗಳ ಸಾಲ ಸಂಪೂರ್ಣ ಮನ್ನಾಕ್ಕೆ ಆಗ್ರಹಿಸಿ ಹಾಗೂ ಗ್ರಾಮೀಣ ಪ್ರದೇಶ ಪುನಶ್ಚೇತನಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್‌ ಘೋಷಿಸುವಂತೆ 39ನೇ ರೈತ ಹುತಾತ್ಮ ದಿನವಾದ ಜು.21 ರಂದು ಬಳ್ಳಾರಿಯ ಹಿತ್ನಾಳ ವೃತ್ತದಲ್ಲಿರುವ 50, 63ರ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಏಕ ಕಾಲಕ್ಕೆ ಬೃಹತ್ ರಸ್ತೆ ತಡೆ ಚಳುವಳಿ ಹಮ್ಮಿಕೊಳ್ಳಲಾಗಿದೆ. ರಾಜ್ಯದ 26 ಜಿಲ್ಲೆಗಳ ರೈತರು ಸಾವಿರಾರು ಸಂಖ್ಯೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಬಂದ್ ಚಳುವಳಿಯಲ್ಲಿ ಭಾಗವಹಿಸುವಂತೆ ಕೃಷಿ ಕಾರ್ಮಿಕರು, ರೈತ ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಿದರು.
ರೈತ ಸಂಘ ಜಿಲ್ಲಾಧ್ಯಕ್ಷ ಲಕ್ಷ್ಮಣಗೌಡ ಕಡಗಂದೊಡ್ಡಿ, ಸಂಗಯ್ಯ ಸ್ವಾಮಿ, ಬಸವರಾಜ, ವಿಶ್ವನಾಥ, ಅಮರೇಶ ಆಲ್ದಾಳ್ ಉಪಸ್ಥಿತರಿದ್ದರು.

Leave a Comment