ಜು.19ಕ್ಕೆ ರೈತ ಹುತಾತ್ಮ ದಿನಾಚರಣೆ

ದಾವಣಗೆರೆ, ಜು. 17- ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸಂಯುಕ್ತಾಶ್ರಯದಲ್ಲಿ ರೈತ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಹೆಚ್.ಎಸ್.ರುದ್ರಪ್ಪ, ಪ್ರೊ. ಎಂ.ಬಿ.ನಂಜುಂಡಸ್ವಾಮಿ ಹಾಗೂ ರೈತ ಹೋರಾಟಗಾರ ಸುಂದರೇಶ್ ಅವರ ಸ್ಮರಣೋತ್ಸವ ಮತ್ತು ರೈತ ಹುತಾತ್ಮ ದಿನಾಚರಣೆ ಕಾರ್ಯಕ್ರಮವನ್ನು ಜು. 19 ರಂದು ಬೆಳಗ್ಗೆ 10.30 ಕ್ಕೆ ಹೊನ್ನಾಳಿಯ ಶ್ರೀ ಚನ್ನಪ್ಪಸ್ವಾಮಿ ಸಮುದಾಯ ಭವನ ಹಿರೇಕಲ್ಮಠದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರೈತ ಸಂಘದ ಕಾರ್ಯದರ್ಶಿ ಬಲ್ಲೂರು ರವಿಕುಮಾರ್ ಹೇಳಿದರು. ಸುದ್ದಿಗೋಷ್ಟಿಯಲ್ಲಿಂದು ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ಹಿರೇಕಲ್ಮಠದ ಒಡೆಯ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮೀಜಿಗಳು ಹಾಗೂ ಶಿವಮೊಗ್ಗದ ಬಸವಕೇಂದ್ರದ ಬಸವಮರಳುಸಿದ್ದಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಕೃಷಿ ಸಮಾಜ ಜಿಲ್ಲಾಧ್ಯಕ್ಷರಾದ ಹನುಮಂತಪ್ಪ ಕುಂದೂರು ಅಧ್ಯಕ್ಷತೆ ವಹಿಸಲಿದ್ದಾರೆ. ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯಾಧ್ಯಕ್ಷರಾದ ಬಡಗಲಪುರ ನಾಗೇಂದ್ರಪ್ಪ ಉದ್ಘಾಟಿಸಲಿದ್ದಾರೆ. ಹೊನ್ನಾಳಿ ತಾಲ್ಲೂಕು ರೈತ ಸಂಘದ ಅಧ್ಯಕ್ಷ ಎಂ.ಬಸವರಾಜಪ್ಪ ಪ್ರಾಸ್ತಾವಿಕ ನುಡಿಯಾಡಲಿದ್ದಾರೆ. ಜಿಲ್ಲಾಧಿಕಾರಿ ಶಿವಮೂರ್ತಿ ಎನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್, ಉಪವಿಭಾಗಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಹೊನ್ನಾಳಿ ತಹಶೀಲ್ದಾರ್ ತುಷಾರ ಬಿ ಹೊಸೂರು, ನ್ಯಾಮತಿ ತಹಶೀಲ್ದಾರ್ ರಶ್ಮಿ ಹಾಲೇಶ್ ಭಾಗವಹಿಸಲಿದ್ದಾರೆಂದರು. ರಾಜ್ಯದಲ್ಲಿ ಸುಭದ್ರ ಸರ್ಕಾರ ಇಲ್ಲವೆಂಬ ಕಾರಣಕ್ಕೆ ಸರ್ಕಾರಿ ಇಲಾಖೆಗಳಲ್ಲಿ ಸರಿಯಾಗಿ ಕೆಲಸಗಳು ಆಗುತ್ತಿಲ್ಲ, ಈ ಬಗ್ಗೆ ಸಭೆ ಕರೆಯಬೇಕೆಂದು ಡಿಸಿ ಮತ್ತು ಸಿಎಸ್ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಆದರು ಸಹ ಅವರು ನಿರ್ಲಕ್ಷ್ಯ ತೋರುತ್ತಿದ್ದಾರೆ. ಸರ್ವೇ ಇಲಾಖೆಯಲ್ಲಿ 2500 ಕೇಸುಗಳು ಬಾಕಿ ಇವೆ. ಭೂಸ್ವಾಧೀನ ಪರಿಹಾರ ಸರಿಯಾಗಿ ನೀಡುತ್ತಿಲ್ಲ, ಸಿಜಿ ಆಸ್ಪತ್ರೆಯಲ್ಲಿ ಬಿಪಿ, ಶುಗರ್ ಮಾತ್ರೆಗಳ ಸಮಸ್ಯೆ ಇದೆ. ಈ ಬಗ್ಗೆ ಸಭೆ ಕರೆದು ಕ್ರಮಕೈಗೊಳ್ಳುವಂತೆ ಆದೇಶಿಸಬೇಕು. ಅದನ್ನು ಬಿಟ್ಟು ಮರಳು, ಜೆಲ್ಲಿ ಇವುಗಳ ಸಭೆ ಮಾಡುತ್ತಾ ಕಾಲಹರಣ ಮಾಡುತ್ತಿದ್ದಾರೆ. ಒಂದು ವಾರದೊಳಗಾಗಿ ಸಮಸ್ಯೆಗಳಿಗೆ ಸಭೆ ನಡೆಸಿ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಪಾಲರು ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತಂದು ಜಿಲ್ಲೆಯಲ್ಲಿ ಜಿಲ್ಲಾ ವಿಶೇಷ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ಅವರನ್ನು ನೇಮಕ ಮಾಡುವಂತೆ ಮನವಿ ಮಾಡಲಾಗುವುದು. ರೈತರ, ಜನರ ಸಮಸ್ಯೆಗಳ ಗಮನಹರಿಸದಿದ್ದಲ್ಲಿ ಡಿಸಿ, ಸಿಎಸ್ ಹಠಾವೋ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. ಸುದ್ದಿಗೋಷ್ಟಿಯಲ್ಲಿ ರೈತ ಮುಖಂಡರುಗಳಾದ ರೇವಣಸಿದ್ದಪ್ಪ, ಹನುಮಂತಪ್ಪ, ಭೀಮಪ್ಪ, ಕರಿಬಸಪ್ಪ, ಬಸವರಾಜ್, ದಶರಥ ಮತ್ತಿತರರಿದ್ದರು.
ಬಾಕ್ಸ್
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಹಯೋಗದಲ್ಲಿ ಬರಮುಕ್ತ ಕರ್ನಾಟಕ ಆಂದೋಲನ, ಸ್ವರಾಜ್ ಇಂಡಿಯಾ ಪಕ್ಷ 39ನೇ ರೈತ ಹುತಾತ್ಮ ದಿನಾಚರಣೆ ಅಂಗವಾಗಿ ಜು. 21 ರಂದು ಬೆಳಗ್ಗೆ 11 ಗಂಟೆಗೆ ಬೆಳಗಾವಿಯ ಗಾಂಧಿಭವನದಲ್ಲಿ ರೈತರ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಮೆರವಣಿಗೆಯೂ ಕಿತ್ತೂರು ರಾಣಿಚೆನ್ನಮ್ಮ ಸರ್ಕಲ್ ನಿಂದ ಹೊರಡಲಿದೆ. -ಬಲ್ಲೂರು ರವಿಕುಮಾರ್

Leave a Comment