ಜು.13ರಂದು ಲೋಕ ಅದಾಲತ್ : ಎಸ್.ಕೆ.ವಂಟಿಗೋಡಿ

ರಾಜಿ ಸಂಧಾನದ ಮೂಲಕ ಪ್ರಕರಣಗಳು ಬಗೆಹರಿಯಲಿವೆ
ಮೈಸೂರು. ಜೂ.13: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ರಾಜ್ಯದ ನ್ಯಾಯಾಲಯಗಳ ಆವರಣಗಳಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದ್ದು, ಮೈಸೂರಿನ ಜಯನಗರದಲ್ಲಿನ ನ್ಯಾಯಾಲಯಗಳ ಸಂಕೀರ್ಣದಲ್ಲಿರುವ ವ್ಯಾಜ್ಯಗಳ ಪರ್ಯಾಯ ಪರಿಹಾರ ಕೇಂದ್ರದಲ್ಲಿ ಜು.13ರಂದು ಲೋಕ ಅದಾಲತ್ ನಡೆಯಲಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಎಸ್.ಕೆ.ವಂಟಿಗೋಡಿ ತಿಳಿಸಿದರು.
ಅವರಿಂದು ಜಯನಗರದಲ್ಲಿರುವ ನ್ಯಾಯಾಲಯಗಳ ಸಂಕೀರ್ಣದಲ್ಲಿನ ಆವರಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿ 2019ರಲ್ಲಿ ಬೃಹತ್ ಲೋಕ ಅದಾಲತ್ ಇಟ್ಟುಕೊಂಡಿದ್ದೇವೆ. ಅದರಲ್ಲಿ ಎಲ್ಲ ಸಿವಿಲ್ ವ್ಯಾಜ್ಯಗಳು, ಕಾರ್ಮಿಕರಿಗೆ ಸಂಬಂಧಪಟ್ಟ ವ್ಯಾಜ್ಯಗಳು, ಮೋಟಾರು ವಾಹನ ಕಾಯಿದೆಗೆ ಸಂಬಂಧಪಟ್ಟ ಪ್ರಕರಣಗಳು, ವೈವಾಹಿಕ, ಕುಟುಂಬ ನ್ಯಾಯಾಲಯಗಳಿಗೆ ಸಂಬಂಧಿಸಿದ ಪ್ರಕರಣಗಳು ಹಾಗೂ ರಾಜಿಯಾಗಬಲ್ಲಂತಹ ಎಲ್ಲ ಕ್ರಿಮಿನಲ್ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಲೋಕ ಅದಾಲತ್ ನಲ್ಲಿ ಬಗೆಹರಿಸಲಿದ್ದೇವೆ ಎಂದರು.
ಮೈಸೂರು ಮಟ್ಟದಲ್ಲಿ ಕೋ-ಅಪರೇಟಿವ್ ಬ್ಯಾಂಕ್ ಹಗರಣ, ಚಿಟ್ ಫಂಡ್ ಸೇರಿದಂತೆ ಸಾಕಷ್ಟು ಹಗರಣಗಳಿವೆ ಈ ಹಗರಣಗಳಿವೆ, ಕೇಸ್ ನಡೆಯುತ್ತಿವೆ. ಈ ಹಗರಣಗಳಿಗೂ ಇಲ್ಲಿ ಉಪಯೋಗ ಸಿಗಬಹುದೇ ಎಂಬ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಕ್ರಿಮಿನಲ್ ಪ್ರೊಸಿಡ್ ಕೋಡ್ ನಲ್ಲಿ ಶೆಡ್ಯೂಲ್ ಇರಲಿದೆ. ಶೆಡ್ಯೂಲ್ ಸೆಕ್ಷನ್ 320 ಅಂತ. ಆ ಶೆಡ್ಯೂಲ್ ನಲ್ಲಿ ಬರುವಂತಹ ಪ್ರಕರಣಗಳನ್ನು ಮಾತ್ರ ರಾಜಿಮಾಡಬಹುದು. ಈ ಚೀಟಿಂಗ್ ಪ್ರಕರಣಗಳನ್ನು ಮಾಡಲಿಕ್ಕಾಗಲ್ಲ. ಪ್ರಾಡ್, ಫೋರ್ಜರಿ ಕೇಸ್ ಇವುಗಳನ್ನು ಮಾಡಕ್ಕಾಗಲ್ಲ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಅವರಿಗೆ ಸರಿಯಾದ ಕಾನೂನಿನ ಮಾಹಿತಿ ಒದಗಿಸಬಹುದು. ಅವರಿಗೆ ಏನು ಅನ್ಯಾಯವಾಗಿದೆ ಅದನ್ನು ತಿಳಿದುಕೊಂಡು ಅದಕ್ಕೇನು ಪರಿಹಾರ ಎಂದು ಹೇಳುತ್ತೇವೆ. ಎಲ್ಲಿ ಹೋಗಿ ಯಾರನ್ನು ಭೇಟಿಯಾಗಬೇಕೆಂಬ ಎಲ್ಲ ಮಾಹಿತಿಯನ್ನು ಪಡೆಯಬಹುದು. ಅದನ್ನು ನಾವು ಅವರಿಗೆ ಉಚಿತವಾಗಿಯೇ ಸಲಹೆ ನೀಡುತ್ತೇವೆ ಎಂದರು. ಜನಸಾಮಾನ್ಯರಿಗೆ ದಿನನಿತ್ಯ ಅನುಕೂಲವಾಗುವಂತಹ ಕಾನೂನಿನ ಅರಿವು ಮೂಡಿಸಿದರೆ ಮೋಸ ಹೋಗುವುದು ಕಡಿಮೆಯಾಗುತ್ತದೆ ಎಂದು ತಿಳಿಸಿದರು.
ಕಾನೂನಿನ ಮಾಹಿತಿ ಇದ್ದರೆ ಭದ್ರತೆ ಇಲ್ಲದೆ ಹಣ ತೊಡಗಿಸುವುದಾಗಲಿ, ಅಥವಾ ಕಾಗದದಲ್ಲಿ ಬರೆದಿರುವ ವಿಷಯ ಓದದೆ ಸಹಿ ಮಾಡುವುದಾಗಲಿ ಮಾಡಲಾರರು. ವಿಷಯ ತಿಳಿಯದೇ ಸಹಿ ಮಾಡಿದರೆ ಅದೇ ದಾಖಲೆಯಾಗಿ ಕೋರ್ಟ್ ನಲ್ಲಿ ಪ್ರೂವ್ ಆಗಲಿದೆ. ನೀವು ಒಂದು ಕಾಗದದಲ್ಲಿ ಸಹಿ ಮಾಡಿದ್ದೀರೆಂದರೆ ಅದನ್ನು ತಿಳಿದುಕೊಂಡೇ ಮಾಡಿದ್ದೀರೆಂದರ್ಥ. ಆ ಸಹಿ ನಂದಲ್ಲ ಎಂದರೆ ಅದನ್ನು ನೀವು ಪ್ರೂವ್ ಮಾಡಬೇಕಾಗಲಿದೆ. ಲೋನ್ ತೆಗೆದುಕೊಳ್ಳುವಾಗ ಅಥವಾ ಇನ್ನಾವುದಕ್ಕೋ ಅವರು ಬರೆಯುವುದನ್ನು ಸಂಪೂರ್ಣವಾಗಿ ತಿಳಿದುಕೊಂಡು ಆ ನಂತರ ಸಹಿ ಮಾಡಬೇಕಾಗುತ್ತದೆ. ಮೋಸಕ್ಕೊಳಗಾಗುವ ಸಂಭವವಿರುವುದಿಲ್ಲ. ಇತ್ತೀಚೆಗೆ ಚಿಟ್ ಫಂಡ್ ಪ್ರಾಡ್ ತುಂಬಾ ಆಗುತ್ತಿದೆ. ಜನ ಸಾಮಾನ್ಯರು ಕೂಡಿಟ್ಟ ಹಣವನ್ನು ಕಳೆದುಕೊಂಡು ಮೋಸ ಹೋಗುತ್ತಿದ್ದಾರೆ. ಅವರು ಮೋಸಕ್ಕೊಳಗಾಗದೇ ಸಂತೋಷದ ಜೀವನ ನಡೆಸಲು ಕಾನೂನಿನ ಅರಿವು ಮೂಡಿಸಬೇಕಿದೆ ಎಂದರು. ಕಾನೂನು ಸೇವಾ ಪ್ರಾಧಿಕಾರಗಳಿಗೆ ಸಂಪರ್ಕಿಸಲು ಮೈಸೂರು ದೂ.ಸಂ.0821-2330130ಕ್ಕೆ ಕರೆ ಮಾಡಬಹುದು ಎಂದರು.
ಈ ಸಂದರ್ಭ ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ಪಿ.ದೇವಮಾನೆ ಉಪಸ್ಥಿತರಿದ್ದರು.

Leave a Comment