ಜೀವನ ಕೌಶಲ್ಯ ತಿಳಿಸುವುದೇ ಶಿಕ್ಷಣದ ಗುರಿ

ದಾವಣಗೆರೆ, ಜ. ೧೧- ಬದುಕಿನ ಮೌಲ್ಯ ಹಾಗೂ ಜೀವನ ಕೌಶಲ್ಯ ಎರಡನ್ನು ತಿಳಿಸುವುದೇ ಶಿಕ್ಷಣದ ಗುರಿಯಾಗಬೇಕು. ಆದರೆ ಇದು ಪರಿಣಾಮಕಾರಿಯಾಗಿ ನಡೆಯುತ್ತಿಲ್ಲ ಎಂದು ಡಯಟ್ ನ ಅಭಿವೃದ್ಧಿಯ ಉಪನಿರ್ದೇಶಕ ಹೆಚ್.ಕೆ. ಲಿಂಗರಾಜು ಹೇಳಿದರು.
ಅವರು ನಗರದ ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ವಿಜ್ಞಾನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ವೇದಿಕೆಯ ಚಟುವಟಿಕೆಗಳ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ಶಿಕ್ಷಣವು ಬರೀ ಪಠ್ಯಕ್ಕಷ್ಟೇ ಸೀಮಿತವಾಗದೇ ಕಾಲ ಕಾಲಕ್ಕೆ ಅನುಗುಣವಾದ ತಂತ್ರಜ್ಞಾನ ಅಭಿವೃದ್ಧಿಯನ್ನು ಶಿಕ್ಷಣವು ಅಳವಡಿಸಿಕೊಳ್ಳಬೇಕೆಂದರು.
ಮತ್ತೊರ್ವ ಮುಖ್ಯ ಅತಿಥಿಗಳಾಗಿ ಜ.ಜ.ಮು. ವೈದ್ಯಕೀಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಬಾಲು ಪಿ.ಎಸ್. ಮಾತನಾಡಿ ಇತರರ ಸಲಹೆ, ಉಪದೇಶ ಕೇಳಬೇಕು. ಆದರೆ ನಿರ್ಧಾರಗಳು ನಮ್ಮದೇ ಆಗಿರಬೇಕು. ಯಾವುದೇ ಕಾರ್ಯ ಮಾಡುವ ಮೊದಲು ಯೋಜನೆ ಮಾಡಿಕೊಳ್ಳಬೇಕು ಎಂದರು.
ಅಧ್ಯಕ್ಷ ಸ್ಥಾನದಿಂದ ಮಾತನಾ‌ಡಿದ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಂ.ಪಿ. ರುದ್ರಪ್ಪನವರು ಒಳ್ಳೆ ಅಭ್ಯಾಸ ರೂಢಿಸಿಕೊಳ್ಳುವುದು ಒಳ್ಳೆಯವರೆನಿಸಿಕೊಳ್ಳುವುದು ತುಂಬಾ ಕಷ್ಟ, ಕೆಟ್ಟದ್ದನ್ನು ಕಲಿಯುವುದು, ಕೆಟ್ಟವರೆನಿಸಿಕೊಳ್ಳುವುದು ಅಷ್ಟೇ ಸುಲಭ ಎಂದರಲ್ಲದೇ ಅಪರೂಪಕ್ಕೊಮ್ಮೆ ತಪ್ಪುಗಳಾಗುವುದು ಸಹಜ ಆದರೆ ತಪ್ಪುಗಳ ಪುನರಾವರ್ತನೆ ಆಗಬಾರದು ಎಂದರು. ವಿದ್ಯಾರ್ಥಿನಿಯರಾದ ಶ್ವೇತಾ ಮತ್ತು ಸಹನಾ ನಿರೂಪಿಸಿದ ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಅನನ್ಯ ಮತ್ತು ಸಂಗಡಿಗರು ಹಾಡಿದರು. ಅರುಣ್ ಸ್ವಾಗತ ಕೋರಿದರು. ಉಪನ್ಯಾಸಕಿ ಶರ್ಮಿಳಾ ವಾರ್ಷಿಕ ವರದಿ ವಾಚನ ಮಾಡಿದರು. ವಿವಿಧ ಸ್ಪರ್ಧಾ ವಿಜೇತರುಗಳಿಗೆ ಬಹುಮಾನ ವಿತರಿಸುವ ಕಾರ್ಯವನ್ನು ಉಪನ್ಯಾಸಕರುಗಳಾದ ಶಿವಕುಮಾರ್, ಮರುಳಸಿದ್ದಪ್ಪ, ಶಿವಶಂಕರ್, ವಿಜಯಕುಮಾರ್, ನಿರ್ವಹಿಸಿದರು. ಸಾಂಸ್ಕೃತಿಕ ಕಾರ್ಯಕ್ರಮಗಳ ನಿರೂಪಣೆಯನ್ನು ನಾಜನೀಸ್ ಮತ್ತು ಸಮೀಕ್ಷಾ ನಿರ್ವಹಿಸಿದರು. ವಂದನೆಗಳನ್ನು ಅರ್ಚನಾ ಸಲ್ಲಿಸಿದರು. ವಿದ್ಯಾರ್ಥಿ ವೇದಿಕೆಯ ಸಂದೇಶ್, ಅರುಣ್ ಉಪಸ್ಥಿತರಿದ್ದರು.

Leave a Comment