ಜೀವನದಲ್ಲಿ ಯಶಸ್ಸು ಸಾಧಿಸಲು ಸತತ ಪ್ರಯತ್ನ ಅಗತ್ಯ

ಮೈಸೂರು, ಆ.2- ಜೀವನದಲ್ಲಿ ಯಶಸ್ಸು ಪಡೆಯಬೇಕಾದರೆ ಪ್ರಯತ್ನವು ಪರಾಕಾಷ್ಟತೆಯನ್ನು ಮುಟ್ಟಿದಾಗ ಮಾತ್ರ ಸಾಧ್ಯ ಎಂದು ಮಾಜಿ ಸಂಸದ ಸಿ.ಹೆಚ್. ವಿಯಶಂಕರ್ ಹೇಳಿದರು.
ಅವರು ಇಂದು ಬೆಳಿಗ್ಗೆ ವಿದ್ಯಾವರ್ಧಕ ಕಾಲೇಜು ಸಭಾಂಗಣದಲ್ಲಿ ವಿದ್ಯಾವರ್ಧಕ ಕಾನೂನು ಕಾಲೇಜಿಗೆ ನೂತನವಾಗಿ ಪಾದಾರ್ಪಣೆ ಮಾಡುವ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಅವರು ನೂತನ ವಿದ್ಯಾರ್ಥಿಗಳನ್ನು ಕುರಿತು ನೀವು ಎಂತಹ ಯೋಚನೆಗಳನ್ನು ಸ್ವಾಗತಿಸಲು ಸಿದ್ಧರಿದ್ದೀರಿ? ಎಂತಹ ಯೋಚನೆಗಳನ್ನು ನಿಮ್ಮಿಂದ ಹೊರಕಳುಹಿಸಲು ಸಿದ್ದರಿದ್ದೀರಿ? ಎಂಬುದರ ಬಗ್ಗೆ ಸಿಂಹಾವಲೋಕನ ಮಾಡಿಕೊಳ್ಳುವುದು ಬಹಳ ಅವಶ್ಯ ಎಂದರು.
ಯಾರೇ ಆಗಲಿ ತಮ್ಮ ಜೀವನದಲ್ಲಿ ಯಶಸ್ಸು ಸಾಧಿಸಬೇಕಾದರೆ ಅವರಲ್ಲಿ ಯಶಸ್ಸು ಸಾಧಿಸಲು ಸತತ ಪ್ರಯತ್ನ ಮಾಡಬೇಕು. ಮೊದಲ ಪ್ರಯತ್ನವು ವಿಫಲವಾದರೂ ಅದನ್ನು ಪರಿಗಣಿಸದೆ ಇನ್ನೂ ಹೆಚ್ಚಿನ ಆಸಕ್ತಿ ವಹಿಸಿ ಪ್ರತ್ನಿಸಿದಾಗ ಪರಾಕಾಷ್ಠತೆಯನ್ನು ಖಂಡಿತ ತಲುಪಲು ಸಾಧ್ಯ ಎಂದರು.
ಸಮಾಜದಲ್ಲಿ ಆದಷ್ಟು ಮಟ್ಟಿಗೆ ಉತ್ತಮರೊಂದಿಗೆ ಸ್ನೇಹ ಹಾಗೂ ಸಹವಾಸಗಳನ್ನು ಬೆಳೆಸಿಕೊಳ್ಳುವುದರಿಂದ ಜೀವನದಲ್ಲಿ ಉತ್ತಮ ಹೆಸರುಗಳಿಸಲು ಸಾಧ್ಯ. ಹಾಗಾಗಿ ಸಾಧ್ಯವಷ್ಟು ಮಟ್ಟಿಗೂ ಉತ್ತಮರೊಂದಿಗೆ ಬಾಂಧವ್ಯ ಬೆಳಸಿಕೊಂಡು ದುರ್ಜನರ ಸಹವಾಸದಿಂದ ದೂರ ಇರುವಂತೆ ನೂತನ ವಿದ್ಯಾರ್ಥಿಗಳಿಗೆ ವಿಜಯಶಂಕರ್ ಕಿವಿಮಾತು ಹೇಳಿದರು.
ವಿದ್ಯಾರ್ಥಿಗಳು ತಮ್ಮ ನಿಜ ಜೀವನದಲ್ಲಿ ಸಾಮಾನ್ಯ ಪ್ರಜ್ಞೆಯನ್ನು ಬೆಳೆಸಿಕೊಳ್ಳುವುದನ್ನು ರೂಢಿಸಿಕೊಳ್ಳಬೇಕು. ಈ ದಿಸೆಯಲ್ಲಿ ದೇಶ ಸುತ್ತು-ಕೋಶ ಓದು ಎಂಬುದನ್ನು ನೆನಪು ಮಾಡಿಕೊಂಡು ಅದರಂತೆ ನಡೆದುಕೊಳ್ಳುವುದನ್ನು ಅಭ್ಯಸಿಸಿಕೊಳ್ಳಬೇಕೆಂದರು.
ಕಾನೂನು ಅಧ್ಯಯನ, ವೈದ್ಯಕೀಯ ವಿಜ್ಞಾನ ಹಾಗೂ ಇಂಜಿನಿಯರಿಂಗ್ ಅಧ್ಯಯನಗಳಿಗೆ ಲಕ್ಷ್ಮಣ ರೇಖೆ ಎಂಬುದು ಇಲ್ಲ. ಇವುಗಳನ್ನು ವಿಶ್ವದೆಲ್ಲೆಡೆ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿದ್ದರೂ, ಕಾನೂನು ಅಧ್ಯಯನಕ್ಕೆ ವಿಶಿಷ್ಟ ಸ್ಥಾನ ಮಾನಗಳಿದ್ದು, ನೀವು ಕಾನೂನು ಶಾಸ್ತ್ರವನ್ನು ಅಧ್ಯಯನ ಮಾಡಿದ ನಂತರ ಪ್ರಾಮಾಣಿಕವಾಗಿ ತಮ್ಮ ವಾದ-ವಿವಾದಗಳನ್ನು ಮೂಡಿಸುವುದರ ಮೂಲಕ ಕಾನೂನು ಶಾಸ್ತ್ರದ ಮಹತ್ವವನ್ನು ಎತ್ತಿ ಹಿಡಿಯುವಂತೆ ನೂತನ ವಿದ್ಯಾರ್ಥಿಗಳಿಗೆ ವಿಜಯಶಂಕರ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ವಿದ್ಯಾವರ್ಧಕ ವಿದ್ಯಾ ಸಂಸ್ಥೆಯ ಅಧ್ಯಕ್ಷ ಗುಂಡಪ್ಪಗೌಡ, ಗೌರವ ಕಾರ್ಯದರ್ಶಿ ಪಿ.ವಿಶ್ವನಾಥ್, ಖಜಾಂಚಿ ಶ್ರೀಶೈಲ ರಾಮಣ್ಣನವರ ಸದಸ್ಯ ಸ್ವಾಮಿ ಲಿಂಗಪ್ಪ, ಕಾನೂನು ಕಾಲೇಜು ಪ್ರಾಂಶುಪಾಲ ಪ್ರೊ.ಕೆ.ಬಿ. ವಾಸುದೇವ ಹಾಗೂ ನೂತನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Comment