ಜಿ.ಪಂ ಸಾಮಾನ್ಯಸಭೆ ಮತ್ತೆ ಅದೇ ಗೋಳು ಅಧಿಕಾರಿಗಳು ಸಂಪರ್ಕಕ್ಕಿಲ್ಲ ಸದಸ್ಯರ ಆರೋಪ

* ಶಾಲೆಗಳಿಗೆ ಸರಬರಾಜಾದ ಡೆಸ್ಕ್ ಗುಣಮಟ್ಟ ಕಳಪೆ
* ಅನುದಾನ ಹಂಚಿಕೆಯಲ್ಲಿ ತಾರತಮ್ಯ ಸರಿಪಡಿಸಿ
* ಹರಪನಹಳ್ಳಿ ಸದಸ್ಯರ ಮೊದಲ ಸಭೆ ಉತ್ಸಾಹದ ಪಾಲ್ಗೊಳ್ಳುವಿಕೆ
* ಚರ್ಚೆಗೆ ಬಂದ ಪ್ರೋಟಕಾಲ್ ಸಮಸ್ಯೆ
ಬಳ್ಳಾರಿ, ಜು.15: ಇಂದು ನಡೆದ ಜಿಲ್ಲಾ ಪಂಚಾಯ್ತಿಯ 9ನೇ ಸಾಮಾನ್ಯ ಸಭೆಯಲ್ಲೂ ಸದಸ್ಯರ ಗೋಳು ಅದೇ ಆಗಿತ್ತು. ಅಧಿಕಾರಿಗಳು ನಮ್ಮ ಸಂಪರ್ಕಕ್ಕೆ ಸಿಗಲ್ಲ ಎಂಬ ಆರೋಪ, ಇದಕ್ಕೆ ಸಿದ್ಧ ಉತ್ತರವೂ ಅಧ್ಯಕ್ಷೆ ಭಾರತಿ ತಿಮ್ಮಾರೆಡ್ಡಿ, ಸಿಇಓ ಅವರಿಂದ ಬಂತು. ಇನ್ಮುಂದೆ ಹಾಗೇ ಮಾಡಬೇಡಿ ಸದಸ್ಯರಿಗೆ ಗೌರವ ಕೊಡಿ ಎಲ್ಲವುದಕ್ಕೂ ಸಂಪರ್ಕಿಸಿ ಎಂದು ಅಧಿಕಾರಿಗಳಿಗೆ ಸೂಚಿಸಲಾಯಿತು.

ಕಳೆದ ಎರಡು ಬಾರಿ ಕರೆದಿದ್ದ ಸಾಮಾನ್ಯ ಸಭೆ ಕೋರಂ ಕೊರತೆಯಿಂದ ರದ್ದಾಗಿದ್ದವು. ಹರಪನಹಳ್ಳಿ ತಾಲೂಕು ಬಳ್ಳಾರಿ ಜಿಲ್ಲೆಗೆ ಸೇರಿದ ಮೇಲೆ ಕಳೆದ ಬಾರಿ ಕರೆದಿದ್ದ ಸಭೆಯಲ್ಲಿ ಸದಸ್ಯರುಗಳಾದ ಪರುಶುರಾಮ್, ಜಯಶೀಲ, ಮಂಜುನಾಥ ಉತ್ತಂಗಿ, ಡಿ.ಸಿದ್ದಪ್ಪ ಸುವರ್ಣ ನಾಗರಾಜ್, ರಶ್ಮಿ ರಾಜಪ್ಪ, ಸುಶೀಲಮ್ಮ ಹಾಗೂ ತಾಲೂಕು ಪಂಚಾಯ್ತಿ ಅಧ್ಯಕ್ಷೆ ಅನ್ನಪೂರ್ಣ ಅವರು ಆಗಮಿಸಿದ್ದರು. ಆದರೆ ಕೋರಂ ಕೊರತೆಯಿಂದ ಸಭೆ ರದ್ದಾಗಿದ್ದರಿಂದ ಬೇಸರದಿಂದ ಹಿಂದಕ್ಕೆ ಹೋಗಿದ್ದ ಅವರು, ಇಂದು ನಡೆದ ಸಭೆಯಲ್ಲಿ ಮತ್ತೆ ಎಲ್ಲಾ ಏಳು ಜನ ಸದಸ್ಯರು, ಹಾಗೂ ತಾ.ಪಂ. ಅಧ್ಯಕ್ಷರು ಪಾಲ್ಗೊಂಡು ಉತ್ಸಾಹದಿಂದ ಚರ್ಚೆಗಳಲ್ಲಿ ಪಾಲ್ಗೊಂಡಿದ್ದಲ್ಲದೆ ಪ್ರತಿಯೊಂದು ಇಲಾಖೆಯ ಅನುದಾನ ತಮ್ಮ ಕ್ಷೇತ್ರದಲ್ಲಿ ಅನುಷ್ಠಾನವಾಗಬೇಕೆಂಬ ಬಗ್ಗೆ ಹಕ್ಕು ಮಂಡಿಸಿದ್ದು ವಿಶೇಷವಾಗಿತ್ತು.

ಸದಸ್ಯೆ ಜಯಶೀಲ ತಮ್ಮ ಗಮನಕ್ಕೆ ತರದೆ ವಾರ್ಷಿಕ ಕ್ರಿಯಾಯೋಜನೆ ರೂಪಿಸಿದೆ, ಅದನ್ನು ಮಾರ್ಪಾಡು ಮಾಡಿ ಎಂದರು. ಮಂಜುನಾಥ ಉತ್ತಂಗಿ ಅವರು ಅಧಿಕಾರಿಗಳು ನಮಗೆ ಸಂಪರ್ಕಕ್ಕೆ ಇಲ್ಲ. ಅವಱ್ಯಾರು ನಾವ್ಯಾರು ಎಂಬುವಂತೆ ಇದೆ ಎಂದು ಜವಾರಿ ಭಾಷೆಯಲ್ಲಿಯೇ ಮಾತನಾಡುತ್ತಾ, ನಾವೇನಾದರೂ ನಮ್ಮನ್ನು ಆಯ್ಕೆ ಮಾಡಿದ ಜನಕ್ಕೆ ನ್ಯಾಯ ಒದಗಿಸಲು, ಅಧಿಕಾರಿಗಳು ವಿವಿಧ ಕಾಮಗಾರಿ ಕೈಗೊಳ್ಳುವ ಮುನ್ನ ನಮ್ಮೊಡನೆ ಚರ್ಚಿಸಬೇಕೆಂದರು.

ಗುಣಮಟ್ಟ ಸರಿಯಿಲ್ಲ
ಎಸ್.ಎಸ್.ಎಲ್.ಸಿ ಪರೀಕ್ಷಾ ಕೇಂದ್ರಗಳನ್ನು ಹೊಂದಿರುವ 55 ಪ್ರೌಢಶಾಲೆಗಳಿಗೆ ಡೆಸ್ಕ್ ಗಳನ್ನು 1.23 ಕೋಟಿ ರೂ ವೆಚ್ಚದಲ್ಲಿ ಸರಬರಾಜು ಮಾಡುತ್ತಿದೆ ಎಂದು ಸಭೆಗೆ ಡಿಡಿಪಿಐ ಶ್ರೀಧರನ್ ತಿಳಿಸಿದಾಗ, ಉಪಾಧ್ಯಕ್ಷೆ ಧೀನಾ ಮಂಜುನಾಥ್ ಅವರು ಡೆಸ್ಕ್ ಗಳ ಗುಣಮಟ್ಟ ಸರಿಯಿಲ್ಲ ಎಂಬ ಆರೋಪ ಮಾಡಿದರು. ಆಗ ಡೆಸ್ಕ್ ಗಳನ್ನು ಸರಬರಾಜು ಮಾಡಿದ ಮೇಲೆ ಆಯಾ ಕ್ಷೇತ್ರದ ಸದಸ್ಯರಿಗೆ ತೋರಿಸಿ ಅವರ ಸಹಿಪಡೆಯಲು ಅಧ್ಯಕ್ಷೆ ಭಾರತಿ ರೆಡ್ಡಿ ಸೂಚಿಸಿದರು.

ಎಲ್ಲಿದೆ
ಬಳ್ಳಾರಿ ತಾಲೂಕು ಈ ಜಿಲ್ಲೆಯಲ್ಲಿ ಇಲ್ಲವಾ ಎಂದು ಪ್ರಶ್ನೆ ಎತ್ತಿದವರು ಸದಸ್ಯ ಅಲ್ಲಂ ಪ್ರಶಾಂತ್ ಮತ್ತು ಅದಕ್ಕೆ ಧ್ವವಿಗೂಡಿಸಿದ್ದು ಸದಸ್ಯ ಎ.ಮಾನಯ್ಯ ಅವರು, ವಾರ್ಷಿಕ ಕ್ರಿಯಾ ಯೋಜನೆಯಲ್ಲಿ ಆರೋಗ್ಯ, ಸಮಾಜ ಕಲ್ಯಾಣ, ಪಶುಸಂಗೋಪನೆ, ಮೀನುಗಾರಿಕೆ, ತೋಟಗಾರಿಕೆ, ಇಲಾಖೆಗಳಡಿ ಬಳ್ಳಾರಿ ತಾಲೂಕಿಗೆ ಒಂದೇ ಒಂದು ರೂಪಾಯಿ ಅನುದಾನ ನಿಗಧಿಪಡಿಸಿಲ್ಲ. ಬಳ್ಳಾರಿ ತಾಲೂಕು ಈ ಜಿಲ್ಲೆಯಲ್ಲಿ ಇಲ್ವಾ ಎಂದು ಪ್ರಶ್ನಿಸಿದರು. ಆಗ ಅಧ್ಯಕ್ಷರು ಮಧ್ಯ ಪ್ರವೇಶ ಮಾಡಿ ಬೇರೆ ತಾಲೂಕುಗಳಲ್ಲಿ ಎರಡು ಕಾಮಗಾರಿ ಕೈಗೊಂಡಿದ್ದರೆ ಒಂದನ್ನು ತೆಗೆದು ಈ ತಾಲೂಕಿಗೂ ನೀಡಿ ಎಂದು ಅಧ್ಯಕ್ಷರು ಸೂಚಿಸಿದರು.

ಪ್ರೋಟಕಾಲ್
ಸಭೆ ಆರಂಭವಾಗುತ್ತಿದ್ದಂತೆ ಸೋಗಿ ಕ್ಷೇತ್ರದ ಸದಸ್ಯ ವಿಶ್ವನಾಥ್, ಕೂಡ್ಲಿಗಿ ತಾಲೂಕು ಪಂಚಾಯ್ತಿ ಅಧ್ಯಕ್ಷ ವೆಂಕಟೇಶ್ ನಾಯ್ಕ್ ಅಧಿಕಾರಿಗಳು ಗ್ರಾಮ ಪಂಚಾಯ್ತಿಗಳಲ್ಲಿ ಕೈಗೊಳ್ಳುವ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆಗೆ ಪ್ರೋಟಕಾಲ್ ಪಾಲಿಸುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳ ಮೇಲೆ ಯಾವ ಕ್ರಮ ಮೊದಲು ಈ ಬಗ್ಗೆ ತಿಳಿಸಿ ಎಂದು ಪಟ್ಟು ಹಿಡಿದರು.

ಇತ್ತೀಚೆಗೆ ಹಡಗಲಿ ತಾಲೂಕಿನ ಅಯ್ಯನಹಳ್ಳಿಯ ಗ್ರಾಮ ಪಂಚಾಯ್ತಿ ಕಟ್ಟಡ ಉದ್ಘಾಟನಾ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷರನ್ನೆ ಕೈಬಿಡಲಾಗಿದೆ. ನಾಮಫಲಕಗಳಲ್ಲಿ ಗುತ್ತಿಗೆದಾರರ, ಇಂಜಿನೀಯರ್ ಗಳ ಹೆಸರು ಇರುತ್ತೆ. ಜಿ.ಪಂ. ಸದಸ್ಯರ ಹೆಸರು ಇರಲ್ಲ. ಇದು ಸರಿಯೇ ಎಂದರು.

ಈ ರೀತಿ ಇನ್ನು ಮುಂದೆ ಲೋಪ ಆಗದಂತೆ ಮಾಡಿ ಎಂದು ಅಧ್ಯಕ್ಷೆ ಭಾರತಿ ರೆಡ್ಡಿ ಸೂಚಿಸಿದರು.

ಹಡಗಲಿ ತಾಲೂಕು ಪಂಚಾಯ್ತಿ ಈ.ಓ ಪ್ರೋಟಕಾಲ್ ನ್ನು ಕಂದಾಯ ಇಲಾಖೆ ನೋಡಿಕೊಳ್ಳುತ್ತೆ ಅವರು ನೀಡಿದ್ದನ್ನು ಪಾಲಿಸಿದ್ದೇವೆ ಎಂದರು. ಯಾರೇ ನೀಡಲಿ ಪ್ರೋಟಕಾಲ್ ಪ್ರಕಾರ ಜಿ.ಪಂ. ಸದಸ್ಯರು ಗ್ರಾಮ ಪಂಚಾಯ್ತಿ ಅಧ್ಯಕ್ಷರನ್ನು ಕರೆಯದಿದ್ದರ ಬಗ್ಗೆ ಕ್ರಮ ಜರುಗಿಸಬೇಕೆಂದರು. ಆಗ ಸಿ.ಈ.ಓ ನಿತೀಶ್ ಅವರು ಈ ಬಗ್ಗೆ ವರದಿ ತರಿಸಿ ಮುಂದಿನ ಕ್ರಮ ಜರುಗಿಸುವುದಾಗಿ ಹೇಳಿದರು.
ಜಿ.ಪಂ. ಸದಸ್ಯರೆಂದರೆ ದನ ಕಾಯುವರಂತೆ ಭಾವಿಸಲಾಗುತ್ತಿದೆ. ಅಧಿಕಾರಿಗಳಲ್ಲಿ ಈ ಮನೋಭಾವ ಹೋಗಬೇಕೆಂದು ವಿಶ್ವನಾಥ್ ಆಗ್ರಹಿಸಿದರು.

ಪ್ರಭಾರಿಗಳೇ:
ಜಿಲ್ಲಾಮಟ್ಟದಲ್ಲಿ ಎಲ್ಲಾ ಇಲಾಖೆಗಳಿಗೆ ಪ್ರಭಾರ ಅಧಿಕಾರಿಗಳೇ ಕಾರ್ಯನಿರ್ವಹಿಸುತ್ತಿದ್ದು, ಅವರು ಹೇಗೆ‌ ನಿರ್ವಹಣೆ ಮಾಡುತ್ತಾರೆ ಮತ್ತು ಅವರು ಹೇಗೆ ನಮಗೆ ಉತ್ತರ ನೀಡಲು ಸಾಧ್ಯ ಎಂದು ಕೆಲ ಸದಸ್ಯರು ಪ್ರಶ್ನಿಸಿದಕ್ಕೆ ಜಿಪಂ ಸಿಇಒ ಕೆ.ನಿತೀಶ್ ಅವರು ಗ್ರಾಮೀಣ ಕುಡಿಯುವ ನೀರು, ಪಂಚಾಯತ್ ರಾಜ್ ಎಂಜನಿಯರಿಂಗ್ ಇಲಾಖೆಗೆ ಅಧಿಕಾರಿಗಳು ಇನ್ನೂ 15ದಿನಗಳಲ್ಲಿ ಬರಲಿದ್ದಾರೆ. ಪಿಎಂಜಿಎಸ್ವೈ ಗೆ ಮಾತ್ರ ಸಮಸ್ಯೆ ಇದೆ ಎಂದರು.

ಕ್ಷೇತ್ರ ವಾಸ್ತವ್ಯ:
ಜಿಪಂ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಜಿಪಂ ಸಿಇಒ ಅವರು‌‌ ಪ್ರತಿಕ್ಷೇತ್ರದಲ್ಲಿ “ಕ್ಷೇತ್ರವಾಸ್ತವ್ಯ” ನಡೆಸುವ ಮೂಲಕ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು ಎಂದು ಹಂಪಾಪಟ್ಟಣ ಜಿಪಂ ಸದಸ್ಯ ಮಲ್ಲಿಕಾರ್ಜುನ ನಾಯಕ್ ಒತ್ತಾಯಿಸಿದರು.
ಈ ರೀತಿ ಮಾಡುವುದರಿಂದ ಎಲ್ಲಾ ಅಧಿಕಾರಿಗಳು ಒಂದು ಕಡೆ ಸೇರುವುದರ ಜೊತೆಗೆ ಅಲ್ಲಿನ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಕಲ್ಪಿಸಲು ಅನುಕೂಲವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಅಧಿಕಾರಿಗಳೇ ಹೊಣೆ:
ಕಾಮಗಾರಿಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ನಿಗದಿಪಡಿಸಿದ ಅನುದಾನವನ್ನು ಆಯಾ ವರ್ಷದಲ್ಲಿಯೇ ಖರ್ಚು ಮಾಡತಕ್ಕದ್ದು. ಒಂದು ವೇಳೆ ಆ ರೀತಿ ಮಾಡದಿದ್ದರೆ ಆಯಾ‌ ಇಲಾಖೆಯ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು ಎಂದು‌ ಜಿಪಂ ಅಧ್ಯಕ್ಷೆ ಭಾರತಿ ತಿಮ್ಮಾರೆಡ್ಡಿ‌ ಎಚ್ಚರಿಕೆ ನೀಡಿದರು.
ಈ ಹಿಂದೆ ವಯಸ್ಕರ ಶಿಕ್ಷಣ ಅಡಿ ಕೈಗೊಳ್ಳಲಾದ ಕಾರ್ಯಕ್ರಮಗಳ ವಿವರ ನೀಡುವುದರ ಜತೆಗೆ ಈ ವರ್ಷ ಏನೇನು ಮಾಡುತ್ತೀದ್ದೀರಿ ಎಂಬುದರ‌ ವಿವರ ಕೂಡ ಜಿಪಂ

ಸದಸ್ಯರಿಗೆ ತಿಳಿಸುವಂತೆ ಜಿಪಂ ಅಧ್ಯಕ್ಷರು ಸೂಚಿಸಿದರು.

ಕಳೆದ ವರ್ಷ ಯಾವ್ಯಾವ ಇಲಾಖೆಗಳಡಿ ಯಾವ್ಯಾವ ಕಾರ್ಯಕ್ರಮಗಳು ಕೈಗೊಳ್ಳಲಾಗಿದೆ. ಈ ವರ್ಷ ಏನೇನು ಮಾಡುತ್ತಿದ್ದೀವೆ ಎಂಬುದರ‌‌ ವಿವರವನ್ನು 15 ದಿನದೊಳಗೆ‌ ಜಿಪಂ ಸದಸ್ಯರಿಗೆ ನೀಡಲು ಕ್ರಮಕೈಗೊಳ್ಳಲಾಗುವುದು ಎಂದು‌ ಜಿಪಂ ಸಿಇಒ ಕೆ.ನಿತೀಶ್ ತಿಳಿಸಿದರು.

Leave a Comment