ಜಿ.ಪಂ ಸದಸ್ಯ – ಪಾಂಡವಪುರ ಎಸಿ ಮಾತಿನ ಚಕಮಕಿ ; ಭೂಸ್ವಾಧೀನಕ್ಕೆ ಪರಿಹಾರ – ರೈತರ ಸಭೆ

ಕೆ.ಆರ್.ಪೇಟೆ,ನ.14- ಭೂಸ್ವಾಧೀನ ಪರಿಹಾರ ನೀಡುವ ಸಂಬಂಧ ನಡೆಯುತ್ತಿದ್ದ ಸಭೆಯಲ್ಲಿ ರೈತರಿಗೆ ಏನೂ ಹೇಳದೇ ಸ್ವಾಧೀನ ಒಪ್ಪಿಗೆ ಪತ್ರಕ್ಕೆ ಸಹಿ ಪಡೆಯುತ್ತಿದ್ದನ್ನು ಪ್ರಶ್ನಿಸಿದ ಜಿ.ಪಂ.ಸದಸ್ಯ ಹಾಗೂ ಹಿರಿಯ ವಕೀಲ ಬಿ.ಎಲ್.ದೇವರಾಜು ಅವರಿಗೆ ನೀವು ಯಾವ ಜನಪ್ರತಿನಿಧಿಯಾದ್ರೆ ನನಗೇನ್ರಿ ಸುಮ್ಮನೆ ಹೊರಗೆ ನಡೀರಿ ಎಂದು ಪಾಂಡವಪುರ ಉಪವಿಭಾಗಾಧಿಕಾರಿ ಯಶೋಧ ಅವರು ಧಮಕಿ ಹಾಕಿದ ಘಟನೆ ನಡೆಯಿತು.
ಇಂದು ಮಿನಿವಿಧಾನ ಸೌಧದ ಸಭಾಂಗಣದಲ್ಲಿ ಬೆಂಗಳೂರು-ಜಲಸೂರು ರಾಜ್ಯ ಹೆದ್ದಾರಿಗೆ ಬೈಪಾಸ್ ರಸ್ತೆಯನ್ನು ನಿರ್ಮಿಸಲು ತಾಲೂಕಿನ ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಪರಿಹಾರ ನೀಡುವ ಸಂಬಂಧ ಪಟ್ಟಣದ ಹೊರವಲಯದಲ್ಲಿ ಬೈಪಾಸ್ ರಸ್ತೆಯನ್ನು ನಿರ್ಮಾಣ ಮಾಡಲು ಬೆಡದಹಳ್ಳಿ, ಶೆಟ್ಟನಾಯಕನಕೊಪ್ಪಲು, ವಳಗೆರೆ ಮೆಣಸ, ಬೊಮ್ಮನಾಯಕನಹಳ್ಳಿ, ಅಗ್ರಹಾರಬಾಚಹಳ್ಳಿ, ಚಿಕ್ಕೋನಹಳ್ಳಿ, ಚಿಕ್ಕೋಸಹಳ್ಳಿ, ಹೊಸಹೊಳಲು ಕೊಪ್ಪಲು, ಬಿಲ್ಲರಾಮನಹಳ್ಳಿ, ವ್ಯಾಪ್ತಿಯ ರೈತರ ಅಭಿಪ್ರಾಯ ಸಂಗ್ರಹಣಾ ಸಭೆಯನ್ನು ಕರೆಯಲಾಗಿತ್ತು.
ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಎಲ್.ದೇವರಾಜು ಮತ್ತು ಪಾಂಡವಪುರ ಉಪವಿಭಾಗಾಧಿಕಾರಿ ಯಶೋಧಾ ಅವರ ನಡುವೆ ತೀವ್ರ ಮಾತಿನ ಚಕಮಕಿ ನಡೆದು ನಿಮ್ಮ ಪ್ರಶ್ನೆಗೆ ನಾನು ಉತ್ತರನೀಡಬೇಕಿಲ್ಲ, ನೀವು ಜನಪ್ರತಿನಿಧಿಯಾದ್ರೆ ನನಗೇನು ಹೊರಗೆ ನಡೀರಿ ಎಂಬ ಮಾತಿಗೆ ಕೆರಳಿದ ದೇವರಾಜು ರೈತರೊಂದಿಗೆ ಮಿನಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಭೆ ಕರೆದಿರುವ ವಿಚಾರ ತಿಳಿದ ಜಿ.ಪಂ.ಸದಸ್ಯ ಬಿ.ಎಲ್.ದೇವರಾಜು ಸಭೆಗೆ ಹೋಗಿ ರೈತರಿಗೆ ಅನ್ಯಾಯವಾಗದಂತೆ ಪರಿಹಾರ ನಿಗಧಿಪಡಿಸಬೇಕು, ರೈತರ ಭೂಮಿಯಲ್ಲಿರುವ ತೆಂಗಿನ ಮರಗಳು ಸೇರಿದಂತೆ ಇತರೆ ಮರಗಳು ಹಾಗೂ ಇನ್ನಿತರೆ ವಸ್ತುಗಳ ಬಗ್ಗೆ ಜಂಟಿ ಸರ್ವೇ ಕಾರ್ಯ ನಡೆಸಿ ರೈತರ ಗಮನಕ್ಕೆ ತಂದು ಅಳತೆ ಮಾಡಿಸಲಾಗಿದೆಯೇ ಇದಕ್ಕೆ ಸಂಬಂದಿಸಿದ ಫೈಲನ್ನು ಕೊಡಿ ಸ್ವಲ್ಪ ನೋಡಬೇಕು, ಯಾವ ಪ್ರಮಾಣದಲ್ಲಿ ಪರಿಹಾರ ನಿಗಧಿಮಾಡಿದ್ದೀರಿ, ರೈತರಿಗೆ ಪೂರ್ಣ ಮಾಹಿತಿ ತಿಳಿಸದೇ ಏಕೆ ಒಪ್ಪಿಗೆ ಪತ್ರಕ್ಕೆ ಸಹಿ ಪಡೆಯುತ್ತಿದ್ದೀರಲ್ಲ ಇದು ಸರಿಯೇ, ರೈತರಿಗೆ ಸರಿಯಾದ ಮಾಹಿತಿ ನೀಡಿ ನಂತರ ಸಹಿ ಪಡೆಯಿರಿ ಎಂದು ಪ್ರಶ್ನಿಸಿದರು. ಅಲ್ಲದೆ ಈ ಬಗ್ಗೆ ಪರಿಹಾರ ನಿಗಧಿ ಮಾಡಿರುವ ಬಗ್ಗೆ ಮಾಹಿತಿ ಕೊಡಿ ಎಂದು ಉಪವಿಭಾಗಾಧಿಕಾರಿಗಳಲ್ಲಿ ಮನವಿ ಮಾಡಿದರು.
ರೈತರ ಪರವಾದ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿ ಸಿಡಿಮಿಡಿಗೊಂಡ ಉಪವಿಭಾಗಾಧಿಕಾರಿ ಯಶೋಧ ಅವರು ನಿಮ್ಮ ಜಮೀನನ್ನೇನು ರಸ್ತೆಗೆ ವಶಪಡಿಸಿಕೊಂಡಿಲ್ಲವಲ್ಲ, ನಿಮಗೂ ಇದಕ್ಕೂ ಸಂಬಂಧವಿಲ್ಲ, ನೀವು ಜನಪ್ರತಿನಿಧಿಯಾದರೆ ನನಗೇನು, ನಿಮಗೇನು ಕಡತವನ್ನು ತೋರಿಸಬೇಕೆಂದೇನಿಲ್ಲಾ ಸಭೆಯಿಂದ ಹೊರಗೆ ನಡೀರಿ ಸುಮ್ಮನೆ, ನನ್ನ ಅಮೂಲ್ಯವಾದ ಸಮಯ ಹಾಳು ಮಾಡಬೇಡಿ, ನನ್ನ ಕೆಲಸದಲ್ಲಿ ನೀವು ಬಾಯಿ ತೂರಿಸಬೇಡಿ ಎಂದು ಉಡಾಫೆ ಉತ್ತರ ನೀಡಿದರು.
ಉಪವಿಭಾಗಾಧಿಕಾರಿ ಯಶೋಧ ಅವರ ಬೇಜವಾಬ್ಧಾರಿ ಮಾತಿಗೆ ಕೆರಳಿದ ಜಿ.ಪಂ.ಸದಸ್ಯ ದೇವರಾಜು ಅವರು ನೀವು ಅಧಿಕಾರಿಯೆಂಬುದು ನನಗೆ ಗೊತ್ತಿದೆ, ನಾನು ನನ್ನ ತಾಲೂಕಿನ ರೈತರ ಪರವಾಗಿ ಮಾತನಾಡುತ್ತಿದ್ದೇನೆ. ಹೊರಗೆ ಹೋಗಿ ಎನ್ನಲು ನಿಮಗೇನು ಅಧಿಕಾರವಿದೆ. ಇದು ಯಾರಿಗೂ ತಿಳಿಸದಂತಹ ಗುಪ್ತ ಸಭೆಯೇ? ಮೊದಲು ಜನಪ್ರತಿನಿಧಿಗಳಿಗೆ ಗೌರವ ಕೊಡುವುದನ್ನು ಕಲಿಯಿರಿ, ರೈತರಿಗೆ ಅನ್ಯಾಯವಾಗದಂತೆ ಕೆಲಸ ಮಾಡಿ ರೈತರ ತೆರಿಗೆ ಹಣದಿಂದ ಜೀವನ ನಡೆಸುತ್ತಿರುವವರು ನೀವು ಎಂಬುದನ್ನು ಮರೀಬೇಡಿ ಎಂದು ತರಾಟೆಗೆ ತೆಗೆದುಕೊಂಡರು. ಅಲ್ಲದೆ ಸಭೆಗೆ ಬಂದಿದ್ದ ಸಂತ್ರಸ್ಥ ರೈತರೊಂದಿಗೆ ಮಿನಿವಿಧಾನಸೌಧಕ್ಕೆ ಮುತ್ತಿಗೆ ಉಉವಿಭಾಗಾಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿ.ಎಲ್.ದೇವರಾಜು ಅವರು ಭೂಮಿಯ ಆರ್.ಟಿ.ಸಿ ಯಲ್ಲಿ ಜಮೀನಿನಲ್ಲಿರುವ ಮರಮುಟ್ಟುಗಳನ್ನು ಗುರುತು ಮಾಡಲು ಮುಲಾಜಿಲ್ಲದೇ ಸರ್ವೆ ಅಧಿಕಾರಿಗಳು ಹಣಕ್ಕೆ ಒತ್ತಾಯ ಮಾಡುತ್ತಿದ್ದಾರೆ. ರೈತರ ಬಳಿ ವಿಚಾರ ತಿಳಿಸದೇ ನೀವು ಬಲವಂತವಾಗಿ ಸಹಿ ಹಾಕಿಸಿಕೊಳ್ಳುತ್ತಿದ್ದೀರಿ ಇದು ಯಾವ ನ್ಯಾಯ ಮೇಡಂ, ನೀವು ಜನಸಾಮಾನ್ಯರಿಗೆ ನ್ಯಾಯ ದೊರಕಿಸಿಕೊಡಲು ಇರುವ ಅಧಿಕಾರಿ ಆದ್ದರಿಂದ ರೈತರಿಗೆ ತೊಂದರೆಯಾಗದಂತೆ ಕೆಲಸ ಮಾಡಿ ರೈತರು ಬೈಪಾಸ್ ರಸ್ತೆಯ ನಿರ್ಮಾಣಕ್ಕೆ ತಮ್ಮ ಜೀವನಾಧಾರವಾದ ಭೂಮಿಯನ್ನು ಕಳೆದುಕೊಳ್ತಿದ್ದಾರೆ. ಆದ್ದರಿಂದ ಧರ್ಮಕರ್ಮ ನೋಡಿಕೊಂಡು ಪರಿಹಾರ ನಿಗಧಿ ಮಾಡಿ ಇಲ್ಲವೇ ಬೈಪಾಸ್ ರಸ್ತೆಯ ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡಿ ಎಂದು ಉಪವಿಭಾಗಾಧಿಕಾರಿ ಯಶೋಧ ಅವರನ್ನು ಆಗ್ರಹಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಕೆ.ರತ್ನಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಂತ್ರಸ್ಥ ರೈತರು ಉಪಸ್ಥಿತರಿದ್ದರು.

Leave a Comment