ಜಿ. ಪಂಚಾಯಿತಿಗಳಿಗೆ ಅನುದಾನ ಸಿಎಂ ಭರವಸೆ

ಬೆಂಗಳೂರು, ಸೆ. ೨೩- ರಾಜ್ಯದ ಜಿಲ್ಲಾ ಪಂಚಾಯ್ತಿಗಳಿಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನ ನೀಡುವ ಭರವಸೆಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೀಡಿದ್ದಾರೆ.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿಂದು ರಾಜ್ಯದ ಎಲ್ಲ ಜಿಲ್ಲಾ ಪಂಚಾಯ್ತಿಗಳ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರುಗಳು ಭೇಟಿ ಮಾಡಿದ ಸಂದರ್ಭದಲ್ಲಿ ಹೆಚ್ಚಿನ ಅನುದಾನ ನೀಡುವ ಭರವಸೆ ನೀಡಿದರು.
ಸದ್ಯ ರಾಜ್ಯದಲ್ಲಿ ನೆರೆಯಿಂದ ಹೆಚ್ಚಿನ ಅನುದಾನ ನೀಡಲು ಆಗುತ್ತಿಲ್ಲ. ಸ್ವಲ್ಪ ಸಹಕರಿಸಿ, ಮುಂದೆ ಹೆಚ್ಚಿನ ಅನುದಾನ ನೀಡುತ್ತೇನೆ ಎಂದು ಹೇಳಿದರು.
ರಾಜ್ಯದ ನೆರೆ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿಭಾಯಿಸಿ ನೆರೆ ಸಂತ್ರಸ್ಥರಿಗೆ ಪುನರ್ವಸತಿ ಕಲ್ಪಿಸಬೇಕಾಗಿದೆ. ಹಾಗಾಗಿ ಆ ಕಡೆ ಸರ್ಕಾರ ಹೆಚ್ಚಿನ ಹಣ ವ್ಯಯ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಜಿಲ್ಲಾ ಪಂಚಾಯ್ತಿಗಳಿಗೆ ಅನುದಾನ ಹೆಚ್ಚಿಸುತ್ತೇನೆ ಎಂಬ ಮಾತುಗಳನ್ನು ಅವರು ಆಡಿದರು.
ಇದಕ್ಕೂ ಮೊದಲು ಎಲ್ಲ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರುಗಳು ಹೆಚ್ಚಿನ ಅನುದಾನ ಕೋರಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಹಾಗೆಯೇ ನೆರೆ ಪರಿಹಾರ ಕಾರ್ಯಗಳಿಗೆ ತಮ್ಮ ಒಂದು 1 ತಿಂಗಳ ಗೌರವ ಧನ ನೀಡುವುದಾಗಿಯೂ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರುಗಳು ಮುಖ್ಯಮಂತ್ರಿಗಳಿಗೆ ತಿಳಿಸಿದರು.

Leave a Comment