ಜಿ.ಪಂಗೆ ಜಯಶೀಲಾ ಅಧ್ಯಕ್ಷೆ, ರಶ್ಮಿರಾಜಪ್ಪ ಉಪಾಧ್ಯಕ್ಷೆ

ದಾವಣಗೆರೆ ಆ. 10- ಜಿಲ್ಲಾ ಪಂಚಾಯತ್ ನೂತನ ಅಧ್ಯಕ್ಷರಾಗಿ ಇಂದು ಕೆ.ಆರ್.ಜಯಶೀಲಾ ಹಾಗೂ ಉಪಾಧ್ಯಕ್ಷರಾಗಿ ರಶ್ಮಿರಾಜಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ದಾವಣಗೆರೆ ಜಿಲ್ಲಾ ಪಂಚಾಯತ್ ನಲ್ಲಿ 22 ಬಿಜೆಪಿ ಸದಸ್ಯರು, 8 ಕಾಂಗ್ರೆಸ್, 4 ಪಕ್ಷೇತರ ಹಾಗೂ 2 ಜೆಡಿಎಸ್ ಸದಸ್ಯರಿದ್ದಾರೆ. ಬಿಜೆಪಿ ಸದಸ್ಯರ ಬಹುಮತವಿದೆ. ಇಂದು ಬೆಳಗ್ಗೆ ಅಧ್ಯಕ್ಷ ಸ್ಥಾನಕ್ಕೆ ಕೆ.ಆರ್.ಜಯಶೀಲಾ ಹಾಗೂ ಆರುಂಡಿ ಸುವರ್ಣ ನಾಗರಾಜ್, ಉಪಾಧ್ಯಕ್ಷ ಸ್ಥಾನಕ್ಕೆ ರಶ್ಮಿ ರಾಜಪ್ಪ ನಾಮಪತ್ರ ಸಲ್ಲಿಸಿದ್ದಾರೆ. ನಂತರ ಆರುಂಡಿ ಸುವರ್ಣ ನಾಗರಾಜ್ ತಮ್ಮ ನಾಮಪತ್ರ ಹಿಂಪಡೆದಿದ್ದಾರೆ. ಬಳಿಕ ಅಧ್ಯಕ್ಷರಾಗಿ ತೆಲಗಿ ಜಿ.ಪಂ ಕ್ಷೇತ್ರದ ಜಯಶೀಲಾ ಹಾಗೂ ಉಪಾಧ್ಯಕ್ಷರಾಗಿ ಹುಚ್ಚಂಗಿದುರ್ಗ ಕ್ಷೇತ್ರದ ರಶ್ಮಿರಾಜಪ್ಪ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾಧಿಕಾರಿ ಶಿವಯೋಗಿ ಕಳಸದ ಘೋಷಿಸಿದ್ದಾರೆ. ಈ ವೇಳೆ ಮಾತನಾಡಿರುವ ಅಧ್ಯಕ್ಷೆ ಕೆ.ಆರ್.ಜಯಶೀಲಾ ಜಿ.ಪಂ ಗೆ ಇನ್ನು ಹೆಚ್ಚಿನ ಅನುದಾನ ತರಲು ಆದ್ಯತೆ ನೀಡಲಾಗುವುದು. ಅದಕ್ಕಾಗಿ ಮುಖ್ಯಮಂತ್ರಿ, ಹಣಕಾಸು ಸಚಿವರ ಬಳಿ ನಿಯೋಗ ಕರೆದೊಯ್ಯುವುದಾಗಿ ತಿಳಿಸಿದರು.

Leave a Comment