ಜಿಲ್ಲೆ ಬರಗಾಲ ಪೀಡಿತ ಪ್ರದೇಶ ಘೋಷಣೆಗೆ ಒತ್ತಾಯ

ರಾಯಚೂರು.ಆ.01- ಮುಂಗಾರು ಮಳೆ ಬಾರದಿರುವದರಿಂದ ರೈತರು ಬೆಳೆ ಬೆಳೆಯಲು ತೀವ್ರ ಆರ್ಥಿಕ ತೊಂದರೆಗೆ ಗುರಿಯಾಗಿರುವುದರಿಂದ ಜಿಲ್ಲೆಯನ್ನು ಬರಗಾಲ ಪೀಡಿತ ಪ್ರದೇಶವೆಂದು ಸರಕಾರ ಘೋಷಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ವಾಸುದೇವ ಮೇಟಿ ಹೇಳಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡಿ, ಈ ವರ್ಷ ಮುಂಗಾರು ಹಂಗಾಮಿನಲ್ಲಿ ಶೇ.35 ರಷ್ಟು ಮಾತ್ರ ಬಿತ್ತನೆಯಾಗಿದೆ. 3,50 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆ ಆಗಬೇಕಾಗಿತ್ತು. ಆದರೆ, ಕೇವಲ 1.22 ಲಕ್ಷ ಹೆಕ್ಟರ್‌ನಲ್ಲಿ ಮಾತ್ರ ರೈತರು ವಿವಿಧ ಬೆಳೆಗಳನ್ನು ಬಿತ್ತುವ ಕಾರ್ಯ ಮಾಡಿದ್ದಾರೆ. ಮಳೆ ಕೊರತೆಯಿಂದ ಶೇ.65 ರಷ್ಟು ಬಿತ್ತನೆ ಹಿನ್ನೆಡೆಯಾಗಿದೆ.
ಮಳೆ ಬಾರದಿರುವುದರಿಂದ ರೈತರು ಕೃಷಿ ಕಾರ್ಮಿಕರು, ತೀವ್ರ ಆತಂಕಕ್ಕೊಳಗಾಗಿದ್ದು, ತಕ್ಷಣವೇ ಸರಕಾರ ಜಿಲ್ಲೆಯನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಿ, ಸೂಕ್ತ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿದರು. ಸಿಂಧನೂರು ತಾಲೂಕಿಗೆ ಕೆನಾಲ್ ನೀರು ಹರಿಸಿರುವುದರಿಂದ ಆ ಭಾಗದಲ್ಲಿ ಕೊಂಚ ಬಿತ್ತನೆ ಕಾರ್ಯ ಆರಂಭಗೊಂಡಿದೆ. ಮಾನ್ವಿ, ಸಿರವಾರ ಹಾಗೂ ರಾಯಚೂರು ತಾಲೂಕಿನ ಕೊನೆ ಭಾಗದ ಕಾಲುವೆಗಳಿಗೆ ನೀರು ಹರಿಸಿದರೆ, ರೈತರು ಬಿತ್ತನೆ ಮಾಡಲು ಸಹಕಾರಿಯಾಗಲಿದೆ ಎಂದರು.
ತುಂಗಭದ್ರ ಕಾಡಾ ಇಲಾಖೆಯ ಮುಖ್ಯ ಅಭಿಯಂತರರು ಕಾಲುವೆಗೆ ನೀರು ಹರಿಸುವಂತೆ ಅನೇಕ ಬಾರಿ ಮನವಿ ಸಲ್ಲಿಸಿದರೂ, ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಗ್ಯಾಂಗ್ ಮ್ಯಾನ್ ಮತ್ತು ಸಿಬ್ಬಂದಿ ಕೊರತೆಯಿಂದ ಸಮರ್ಪಕವಾಗಿ ನೀರು ಹರಿಸಲು ಸಾಧ್ಯವಾಗುತ್ತಿಲ್ಲವೆಂದು ಕಾರ್ಯನಿರ್ವಾಹಕ ಅಭಿಯಂತರರು ಹಾರಿಕೆ ಉತ್ತರ ನೀಡುತ್ತಿದ್ದಾರೆ. ಸಿಂಧನೂರು ತಾಲೂಕಿನಲ್ಲಿ ಅಕ್ರಮವಾಗಿ ನೀರು ಕಬಳಿಸುತ್ತಿರುವ ದಂಧೆ ಹೆಚ್ಚಾಗಿದ್ದು, ಅದನ್ನು ತಡೆಯುವಂತೆ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಸ್ಪಂದಿಸುತ್ತಿಲ್ಲ.
ನೀರಾವರಿ ಇಲಾಖೆಯಲ್ಲಿ ಬೇಜವಾಬ್ದಾರಿ ವರ್ತಿಸುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲೆಗೆ ಮುಖ್ಯಮಂತ್ರಿ ಹಾಗೂ ಸಚಿವರು ಭೇಟಿ ನೀಡಿದ್ದಲ್ಲಿ ಘೆರಾವ್ ಹಾಕಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು. ಫಸಲ್ ಭೀಮ ಯೋಜನೆ ಅಡಿಯಲ್ಲಿ ವಿಮಾ ಕಂಪನಿಗಳು ರೈತರನ್ನು ವಂಚಿಸುತ್ತಿದ್ದಾರೆ. ಇದರಿಂದ ಕಂಪನಿಗಳು ಮಟ್ಕಾ ಕಂಪನಿಗಳಾಗಿ ಮಾರ್ಪಟ್ಟು ರೈತರ ಪಾಲಿಗೆ ಮರಣ ಶಾಸನವಾಗಿವೆ.
ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಕುಡಿಯುವ ನೀರಿನ ಅಭಾವ ಉಲ್ಬಣಗೊಂಡಿದ್ದರೂ, ಜಿಲ್ಲಾಧಿಕಾರಿ, ಜಿ.ಪಂ. ಸಿಇಓ ಭೇಟಿ ನೀಡಿ, ನೀರಿನ ಸಮಸ್ಯೆ ಬಗೆಹರಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಕೂಡಲೇ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಬೇಕು ಸೇರಿ ಇನ್ನಿತರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು.
ಸಿದ್ಧಲಿಂಗೇಶ್ವರ ಪಾಟೀಲ್, ಶರಣಪ್ಪ, ನಾಗರಾಜ್, ಬಸವರಾಜ್ ನಾಯಕ, ಮಲ್ಲಿಕಾರ್ಜುನ ರೆಡ್ಡಿ, ಕರಿಯಪ್ಪ, ರವಿ ಕುಮಾರ ಉಪಸ್ಥಿತರಿದ್ದರು.

Leave a Comment