ಜಿಲ್ಲೆಯ 8.50 ಲಕ್ಷ ಮಕ್ಕಳಿಗೆ ಅಲ್ಬೆಂಡಾಜೋಲ್ ಮಾತ್ರೆ ನುಂಗಿಸುವ ಗುರಿ

ಕಲಬುರಗಿ,ಆ.09.:ಕಲಬುರಗಿ ಜಿಲ್ಲೆಯಾದ್ಯಂತ ಆಗಸ್ಟ್ 10 ರಂದು ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನಾಚರಣೆ ಹಮ್ಮಿಕೊಳ್ಳಲಾಗಿದೆ. 19 ವರ್ಷದೊಳಗಿನ ಒಟ್ಟು 8.50 ಲಕ್ಷ ಮಕ್ಕಳಿಗೆ ಅಲ್ಬೆಂಡಾಜೋಲ್ ಮಾತ್ರೆಗಳನ್ನು ನೀಡಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ|| ಎಂ.ಕೆ. ಪಾಟೀಲ ತಿಳಿಸಿದರು.

ಅವರು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯ 3098 ಅಂಗನವಾಡಿ ಕೇಂದ್ರಗಳು, 3604 ಶಾಲೆಗಳು, 191 ಕಾಲೇಜುಗಳ ಮೂಲಕ 1 ರಿಂದ 2 ವರ್ಷಗೊಳಗಿನ 69493 ಹಾಗೂ 3 ರಿಂದ 19 ವರ್ಷದೊಳಗಿನ 781088 ಮಕ್ಕಳಿಗೆ ಜಂತು ನಿವಾರಕ ಮಾತ್ರೆಗಳನ್ನು ನುಂಗಿಸಲಾಗುವುದು. ಈ ಬಾರಿ ಖಾಸಗಿ ಶಾಲೆಯ ಮಕ್ಕಳಿಗೂ ಸಹ ಮಾತ್ರೆಗಳನ್ನು ನೀಡಲಾಗುತ್ತಿದೆ ಎಂದರು.

ಜಂತು ಹುಳು ರೋಗವು  ಮುಖ್ಯವಾಗಿ ಕಲುಷಿತ ನೀರು, ಬರಿಗಾಲಿನಿಂದ ನಡೆಯುವುದು, ಅಶುದ್ಧ ಆಹಾರ ಸೇವನೆಯಿಂದ ಹರಡುತ್ತದೆ. ಜಂತು ಹುಳು ಬಾದೆಯಿಂದ ಬಳಲುವ ಮಕ್ಕಳು ಸದಾ ಅನಾರೋಗ್ಯದಿಂದ ಪೀಡಿತರಾಗಿ ದೈಹಿಕ ಬೆಳವಣಿಗೆ ಕುಂಠಿತವಾಗುತ್ತದೆ. ಇದರಿಂದಾಗಿ ಕಲಿಕೆ ಕ್ಷಮತೆ ಕಡಿಮೆಯಾಗಿ ಮಕ್ಕಳ ಮೇಲೆ ವ್ಯತರಿಕ್ತ ಪರಿಣಾಮ ಬೀರುತ್ತದೆ. ಮಕ್ಕಳಿಗೆ 6 ತಿಂಗಳಿಗೊಂದು ಬಾರಿ ಅಲ್ಬೆಂಡಾಜೋಲ್ ಮಾತ್ರೆ ನುಂಗಿಸುವ ಮೂಲಕ ಈ ಸಮಸ್ಯೆಯ ನಿವಾರಣೆಗೆ ಪ್ರಯತ್ನಿಸಲಾಗುತ್ತಿದೆ ಎಂದರು.

ಎಲ್ಲ ಶಾಲೆ, ಅಂಗನವಾಡಿ ಕೇಂದ್ರಗಳಲ್ಲಿಮಕ್ಕಳಿಗೆ  ಮಾತ್ರೆ ನುಂಗಿಸುವಾಗ ಶೌಚದ ನಂತರ ಹಾಗೂ ಊಟಕ್ಕೆ ಮೊದಲು ಸ್ವಚ್ಛವಾಗಿ ಕೈ ತೊಳೆಯುವ ಕ್ರಮಗಳನ್ನು ತಿಳಿಸಲಾಗುತ್ತಿದೆ. ವೈಯಕ್ತಿಕ ಸ್ವಚ್ಛತೆ ಕುರಿತು ಸಹ ಜಾಗೃತಿ ಮೂಡಿಸಲಾಗುತ್ತಿದೆ. ಎರಡು ವರ್ಷದ ಒಳಗಿನ ಮಕ್ಕಳಿಗೆ ಅರ್ಧ ಹಾಗೂ ಮೂರು ವರ್ಷ ಮೇಲ್ಪಟ್ಟ ಮಕ್ಕಳಿಗೆ ಒಂದು ಅಲ್ಬೆಂಡಾಜೋಲ್ ಮಾತ್ರೆ ನುಂಗಿಸಲಾಗುತ್ತದೆ. ಜಿಲ್ಲೆಯಲ್ಲಿ ಅಲ್ಬೆಂಡಾಜೋಲ್ ಮಾತ್ರೆಯ ಸಾಕಷ್ಟು ದಾಸ್ತಾನು ಇದ್ದು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಗೂ ಶಿಕ್ಷಕರಿಗೆ ಮಾತ್ರೆ ನುಂಗಿಸುವ ತರಬೇತಿ ನೀಡಲಾಗಿದೆ ಎಂದರು.

ಜಿಲ್ಲೆಯಲ್ಲಿ ಮುಂದುವರೆದ ಗ್ರಾಮ ಸ್ವರಾಜ್ ಅಭಿಯಾನದಡಿ ತೀವ್ರಗೊಂಡ ಮಿಷನ್ ಇಂದ್ರಧನುಷ ಮೊದಲ ಸುತ್ತು ಕಾರ್ಯಕ್ರಮವನ್ನು ಆಗಸ್ಟ್ 13, 14, 17 ಹಾಗೂ 18ರಂದು ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯಾದ್ಯಂತ 2882478 ಜನಸಂಖ್ಯೆಯ ಸಮೀಕ್ಷೆ ಕೈಗೊಂಡು 1975 ಗರ್ಭಿಣಿಯರು, 2 ವರ್ಷದೊಳಗಿನ 9730 ಮಕ್ಕಳು, 5-6 ವರ್ಷದೊಳಗಿನ 6067 ಮಕ್ಕಳಿಗೆ ಲಸಿಕೆ ನೀಡಲು ಕ್ರಿಯಾ ಯೋಜನೆ ರೂಪಿಸಲಾಗಿದೆ.  ಇದಕ್ಕಾಗಿ 1026 ಲಸಿಕಾ ಕೇಂದ್ರಗಳನ್ನು ಹಾಗೂ 287 ಸಂಚಾರಿ ಲಸಿಕಾ ತಂಡಗಳನ್ನು ಸಹ ಸಿದ್ಧಪಡಿಸಲಾಗಿದೆ. ಸೆಪ್ಟೆಂಬರ್ ಮಾಹೆಯಲ್ಲಿ 10, 11, 12 ಮತ್ತು 14ರಂದು ಎರಡನೇ ಸುತ್ತು ಹಾಗೂ ಅಕ್ಟೋಬರ್ ತಿಂಗಳಲ್ಲಿ 9, 10, 12 ಮತ್ತು 15ರಂದು ಮೂರನೇ ಸುತ್ತಿನ ತೀವ್ರಗೊಂಡ ಇಂದ್ರಧನುಷ ಲಸಿಕಾ ಕಾರ್ಯಕ್ರಮ ನಡೆಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಆರ್.ಸಿ.ಹೆಚ್. ಅಧಿಕಾರಿ ಡಾ. ಅಂಬಾರಾಯ ರುದ್ರವಾಡಿ, ಸರ್ವೇಲನ್ಸ್ ಅಧಿಕಾರಿ ಡಾ. ತಾಳಿಕೋಟಿ, ತಾಲೂಕು ವೈದ್ಯಾಧಿಕಾರಿ ಡಾ. ರಾಜಕುಮಾರ ಮತ್ತಿತರರು ಪಾಲ್ಗೊಂಡಿದ್ದರು…

Leave a Comment