ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಕಾಂಗ್ರೆಸ್ ಕಚೇರಿ ತೆರೆಯುವ ಭರವಸೆ

ಕೊರಟಗೆರೆ, ಫೆ. ೧೭- ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಕಛೇರಿಗಳನ್ನು ತೆರೆದು ಕಾರ್ಯಕರ್ತರಿಗೆ ಸ್ಪಂದಿಸುವ ಕೆಲಸವನ್ನು ಪಕ್ಷದಿಂದ ಮಾಡಲಾಗುವುದು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣಯ್ಯ ತಿಳಿಸಿದರು.

ಪಟ್ಟಣದ ಬೈಲಾಂಜನೇಯ ಸ್ವಾಮಿ ದೇವಾಲಯ ಆವರಣದಲ್ಲಿ ಕಸಬಾ ಹೋಬಳಿ ಮತ್ತು ಪಟ್ಟಣದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಅವರು  ಮಾತನಾಡಿದರು.

ಕೊರಟಗೆರೆ ಕ್ಷೇತ್ರದಲ್ಲಿ ಕಾರ್ಯಕರ್ತರ ಕುಂದು-ಕೊರತೆ ಹಾಗೂ ಸಮಸ್ಯೆಗಳಿಗೆ ಸ್ಪಂದಿಸಲು ಶೀಘ್ರದಲ್ಲಿ ಪಕ್ಷದ ಕಛೇರಿಯನ್ನು ತೆರೆಯಲಾಗುವುದು. ಈಗಾಗಲೇ ಕ್ಷೇತ್ರದಲ್ಲಿ ಹೋಬಳಿ ವಾರು ಕಾರ್ಯಕರ್ತರ ಸಭೆಯನ್ನು ನಡೆಸಲಾಗುತ್ತಿದ್ದು, ಫೆ. 18ರಂದು ತುಮಕೂರು ನಗರದ ಸರ್ಕಾರಿ ಜೂನಿಯರ್ ಕಾಲೇಜು ಎದುರು ಜಿಲ್ಲಾ ಕಾಂಗ್ರೆಸ್ ಕಛೇರಿಯನ್ನು ತೆರೆಯಲಾಗುತ್ತಿದ್ದು, ಕಾರ್ಯಕರ್ತರೆಲ್ಲರೂ ಪ್ರಾರಂಭೋತ್ಸವಕ್ಕೆ ಆಗಮಿಸುವಂತೆ ಮನವಿ ಮಾಡಿದರು.

ಮುಂಬರುವ ವಿಧಾನಸಭಾ ಚುನಾವಣೆಗೆ ಕೊರಟಗೆರೆ ಕ್ಷೇತ್ರದಿಂದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸ್ಪರ್ಧಿಸುವುದು ಖಚಿತ. ಈ ಬಗ್ಗೆ ಕಾರ್ಯಕರ್ತರಲ್ಲಿ ಗೊಂದಲ ಬೇಡ. ಆದರೆ ಅದಕ್ಕೆ ಸ್ಪಂದಿಸುವ ಹಾಗೂ ಪಕ್ಷ ಬಲಪಡಿಸುವ ಕೆಲಸವನ್ನು ನಾವೆಲ್ಲರೂ ಒಟ್ಟಾಗಿ ಮಾಡಬೇಕಿದೆ. ಡಾ. ಜಿ. ಪರಮೇಶ್ವರ್ ರಾಜ್ಯವನ್ನು ಆಳುತ್ತಿರುವ ಪಕ್ಷದ ಮುಖ್ಯಸ್ಥರಾಗಿದ್ದು, ಸರ್ಕಾರದಲ್ಲಿ ಅತ್ಯಂತ ಜವಾಬ್ದಾರಿಯುತ ಎರಡನೇ ಸ್ಥಾನವಾದ ಗೃಹ ಖಾತೆ ಹೊಣೆ ಹೊತ್ತಿದ್ದಾರೆ. ಇಷ್ಟೆಲ್ಲಾ ಬಿಡುವಿಲ್ಲದ ಸಮಯದಲ್ಲೂ ಕ್ಷೇತ್ರಕ್ಕೆ ನೂರಾರು ಕೋಟಿ ರೂ.ಗಳ ಅನುದಾನ ಹಾಗೂ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದು, ಸಾರ್ವಜನಿಕರು ಹಾಗೂ ಕಾರ್ಯಕರ್ತರು ಇದನ್ನು ತಿಳಿದುಕೊಳ್ಳಬೇಕಿದೆ ಎಂದರು.

ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಹೆಚ್.ಆರ್. ಮಲ್ಲಿಕಾರ್ಜುನಯ್ಯ ಮಾತನಾಡಿ, ಕ್ಷೇತ್ರದಲ್ಲಿ ಕಾಂಗ್ರೆಸ್ ಬಲಿಷ್ಠವಿದ್ದರೂ ಕೆಲ ತಂತ್ರ-ಕುತಂತ್ರಗಳಿಂದ ಹಾಗೂ ಸರಿಯಾಗಿ ಕಾರ್ಯನಿರ್ವಹಿಸದೆ ಕಳೆದ ಚುನಾವಣೆಯಲ್ಲಿ 224 ಶಾಸಕರುಗಳ ಪೈಕಿ ಏಕೈಕ ಮುಖ್ಯಮಂತ್ರಿಯಾಗುವ ಮಹತ್ತರ ಸ್ಥಾನವನ್ನು ಕ್ಷೇತ್ರದ ಸೋಲಿನಿಂದ ತಪ್ಪಿರುವುದು ನಮ್ಮೆಲ್ಲರ ದುರಾದೃಷ್ಠಕರ. ಆದರೆ, ಕ್ಷೇತ್ರದ ಇಬ್ಬರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು ಅಧಿಕಾರವನ್ನು ವಿಕೇಂದ್ರಿಕರಣ ಮಾಡದೆ ಹೋಬಳಿ ಮತ್ತು ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಸಮಿತಿಗಳನ್ನು ಮಾಡದೆ ತಪ್ಪು ಮಾಡುತ್ತಿದ್ದು, ಜಿಲ್ಲಾಧ್ಯಕ್ಷರು ಇದನ್ನು ಸರಿಪಡಿಸಬೇಕಿದೆ.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೊರಟಗೆರೆ ಕ್ಷೇತ್ರದಿಂದ ಡಾ.ಜಿ.ಪರಮೇಶ್ವರ್ ಸ್ಪರ್ಧಿಸುವುದು ಖಚಿತವಾಗಿದ್ದು, ಅವರ ಸ್ಥಾನಕ್ಕೆ ಮತ್ತ್ಯಾರೆ ಸ್ಪರ್ಧಿಸಿದರೂ ಕ್ಷೇತ್ರದ ಮುಖಂಡರೂ ಹಾಗೂ ಕಾರ್ಯರ್ತರು ಒಪ್ಪಿಕೊಳ್ಳಲಾಗುವುದಿಲ್ಲ ಎಂದರು.
ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್, ಹಿಂದುಳಿದ ವರ್ಗಗಳ ಅಧ್ಯಕ್ಷ ಪುರುಷೋತ್ತಮ್‍ರಾವ್, ಬ್ಲಾಕ್

ಕಾಂಗ್ರೆಸ್ ಅಧ್ಯಕ್ಷ ರಾಮಚಂದ್ರಪ್ಪ, ಜಿ.ಪಂ. ಸದಸ್ಯ ನಾರಾಯಣಮೂರ್ತಿ, ಪ.ಪಂ. ಉಪಾಧ್ಯಕ್ಷ ಕೆ.ವಿ. ಮಂಜುನಾಥ್, ಸದಸ್ಯರುಗಳಾದ ಸೈಯದ್ ಸೈಪುಲ್ಲಾ, ಲಾರಿ ಸಿದ್ದಪ್ಪ, ಕೆ.ಆರ್. ಓಬಳರಾಜು, ಕೆ.ವಿ. ಪುರುಷೋತ್ತಮ್, ಕೆ.ಬಿ. ಲೋಕೇಶ್, ಆಶ್ರಯ ಸಮಿತಿ ಸದಸ್ಯ ಕಣಿವೆ ಹನುಮಂತರಾಯಪ್ಪ, ತಾ.ಪಂ.ಉಪಾಧ್ಯಕ್ಷೆ ನರಸಮ್ಮನರಸಿಂಹಮೂರ್ತಿ, ಗ್ರಾ.ಪಂ.ಅಧ್ಯಕ್ಷ ಶಿವರಾಂ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಕವಿತಾ ಮುಖಂಡರುಗಳಾದ ಪುಟ್ಟಹರಿಯಪ್ಪ, ಮುಕ್ತಿಯಾರ್, ಆಟೋಕುಮಾರ್, ಕೆ.ಎಂ. ಸುರೇಶ್, ಹೆಚ್.ನಟೇಶ್, ಗಂಗಾಧರಪ್ಪ, ಜಯಮ್ಮ ಮತ್ತಿತರರು ಉಪಸ್ಥಿತರಿದ್ದರು.

Leave a Comment