ಜಿಲ್ಲೆಯಲ್ಲಿ ಸ್ವೀಪ್ ಚಟುವಟಿಕೆ ಆರಂಭಿಸಲು ಸೂಚನೆ

ಮಂಗಳೂರು, ಫೆ.೧೨- ಮತದಾರರ ಜಾಗೃತಿಗೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳು ಕ್ರಿಯಾಯೋಜನೆ ರೂಪಿಸಿ ಕಳೆದ ಸಾಲಿಗಿಂತ ಶೇ.೧೦ರಷ್ಟು ಹೆಚ್ಚು ಮತದಾನ ದಾಖಲಿಸುವ ಗುರಿ ನಿಗದಿಪಡಿಸಿಕೊಳ್ಳಲು ಜಿಪಂ ಸಿಇಒ ಹಾಗೂ ಸ್ವೀಪ್ ಸಮಿತಿಯ ಅಧ್ಯಕ್ಷ ಡಾ.ಸೆಲ್ವಮಣಿ ಆರ್. ಹೇಳಿದರು. ನಗರದ ಜಿಪಂನಲ್ಲಿ ಸೋಮವಾರ ನಡೆದ ಸ್ವೀಪ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯ ಸರಕಾರ, ಕೇಂದ್ರ ಸರಕಾರದ ಕಚೇರಿಗಳು, ಶಾಲಾ ಕಾಲೇಜುಗಳು, ಗ್ರಾಮ ಪಂಚಾಯತ್‌ಗಳಲ್ಲಿ ಮತದಾರರ ಜಾಗೃತಿ ಕೇಂದ್ರಗಳನ್ನು ಆರಂಭಿಸಬೇಕು. ಕಚೇರಿಯ ಮುಖ್ಯಸ್ಥರು ತಮ್ಮ ವ್ಯಾಪ್ತಿಯಡಿ ಬರುವ ಅರ್ಹ ಮತದಾರರ ಹೆಸರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿದ್ದಾರೆಂಬುದನ್ನು ಖಾತ್ರಿಪಡಿಸಿಕೊಳ್ಳಬೇಕೆಂದರು. ಚುನಾವಣಾ ಜಾಗೃತಿ ಕ್ಲಬ್‌ಗಳು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಬೇಕೆಂದು ಸ್ವೀಪ್ ಸಮಿತಿ ಕಾರ್ಯದರ್ಶಿ ಸುಧಾಕರ ಸಭೆಗೆ ಮಾಹಿತಿ ನೀಡಿದರು. ಅಲ್ಲದೆ, ಈಗಾಗಲೇ ಸುಳ್ಯ, ಬೆಳ್ತಂಗಡಿ ತಾಲೂಕುಗಳಿಂದ ಕ್ರಿಯಾಯೋಜನೆ ಬಂದಿದ್ದು, ಉಳಿದ ತಾಲೂಕು ಮತ್ತು ಪುರಸಭೆ ಹಾಗೂ ಪಟ್ಟಣ ಪಂಚಾಯತ್‌ಗಳಿಂದ ಕ್ರಿಯಾಯೋಜನೆ ನೀಡಲು ಹೇಳಿದರು. ಮುಂದಿನ ವಾರದಲ್ಲಿ ಬಿಎಲ್‌ಒಗಳ ಸಭೆ ಕರೆಯಲಾಗುವುದು. ಅರ್ಹ ಮತದಾರರು ಪಟ್ಟಿಯಿಂದ ಕೈಬಿಡದಂತೆ ಆರೋಗ್ಯ ಇಲಾಖೆ ಮತ್ತು ಶಿಕ್ಷಣ ಇಲಾಖೆಯವರು ಜನನ ಪ್ರಮಾಣ ಮತ್ತು ಎಸೆಸೆಲ್ಸಿ ಪಾಸಾದವರ ಸಮಗ್ರ ಪಟ್ಟಿಯನ್ನು ತಮಗೆ ಸಲ್ಲಿಸುವಂತೆ ಸಿಇಒ ಸೂಚಿಸಿದರು. ಮಹಾನಗರ ಪಾಲಿಕೆ ಆಯುಕ್ತ ಮುಹಮ್ಮದ್ ನಝೀರ್ ಹಾಗೂ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

Leave a Comment