ಜಿಲ್ಲೆಯಲ್ಲಿ ಸಂಪತ್ತಿದೆ, ಆದರೆ ಸರಿಯಾಗಿ ಬಳಕೆ ಆಗ್ತಿತ್ತ:ಡಿಕೆಶಿ

ಬಳ್ಳಾರಿ, : ಜಿಲ್ಲೆಯಲ್ಲಿ ದೊಡ್ಡ ಸಂಪತ್ತು ಇದೆ. ಆದರೆ, ಇದು ಸರಿಯಾದ ರೀತಿಯಲ್ಲಿ ಬಳಕೆ ಆಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಜನರಿಗೆ ಉದ್ಯೋಗ, ಆರೋಗ್ಯ, ಶಿಕ್ಷಣ ಮತ್ತು ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಅತೀ ಹೆಚ್ಚು ಒತ್ತು ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ ಹೇಳಿದರು.

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿರುವ ತುಂಗಭದ್ರಾ ಜಲಾಶಯ ಇದ್ದರೂ ಸಹ ಪಕ್ಕದ ತಾಲೂಕುಗಳು ಕುಡಿಯುವ ನೀರಿನಿಂದ ವಂಚಿತರಾಗಿದ್ದಾರೆ. ನೀರು ಪಕ್ಕದಲ್ಲೇ ಹರಿಯುತ್ತಿದ್ದರೂ ಸಹ ಕುಡಿಯುವ ನೀರು ಪಡೆಯುವ ಅವಕಾಶ ಇಲ್ಲ. ಹಲವು ತಾಲೂಕುಗಳು ಸೇರಿದಂತೆ ಬಳ್ಳಾರಿ ನಗರದಲ್ಲೂ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದೆ. ಬಳ್ಳಾರಿ ನಗರದಲ್ಲಿ 24*7 ನೀರಿನ ಸೌಲಭ್ಯ ಕಲ್ಲಿಸುವ ಜವಾಬ್ದಾರಿ ನನ್ನ ಮೇಲೆ ಇದೆ. ಅದನ್ನು ನನ್ನ ಅವಧಿಯಲ್ಲಿ ಸಮರ್ಥವಾಗಿ ನಿಭಾಯಿಸುತ್ತೇನೆ ಎಂದರು.

ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿರುವ ಜನ ಸಾಮಾನ್ಯರಿಗೆ ಉತ್ತಮ ಶಿಕ್ಷಣ, ಕುಡಿಯುವ ನೀರು, ಉದ್ಯೋಗ ಕಲ್ಪಿಸಲು ಪ್ರಥಮ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಹಸಿರು ವನವನ್ನು ಹೆಚ್ಚಿಸಲು ದೊಡ್ಡ ಕಾರ್ಯಕ್ರಮ ರೂಪಿಸಲಾಗುವುದು. ಅಲ್ಲದೇ, ಜಿಲ್ಲೆಯನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಲು ಯೋಜನೆಗಳನ್ನು ರೂಪಿಸಲಾಗುವುದು ಎಂದು ತಿಳಿಸಿದರು.

13000 ಕೋಟಿ ರೂ.ಹಣವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲು ಯೋಜನೆ ಸಿದ್ಧ ಪಡಿಸಲಾಗಿದೆ. ಅಲ್ಲದೆ, ಇದನ್ನು ಬಳಕೆ ಮಾಡಿಕೊಳ್ಳಲು ಕೋರ್ಟ್ ಗೆ ವರದಿಯನ್ನು ಸಲ್ಲಿಸಲಾಗಿದೆ. ಕೋರ್ಟ್ ನಿಂದ ಒಪ್ಪಿಗೆ ಬಂದ ನಂತರ ಅಭಿವೃದ್ಧಿ ಕಾರ್ಯಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಗಣಿಗಾರಿಕೆ ಯಿಂದ ಪ್ರತಿ ಮನೆಯಲ್ಲಿ ಎರಡು ಸೆ.ಮೀ. ಧೂಳು ತುಂಬಿದೆ. ಇದನ್ನು ಹೋಗಲಾಡಿಸಲು ಮೈನಿಂಗ್ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.

ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ, ಶಾಸಕ ಈ. ತುಕಾರಾಂ, ಮಾಜಿ ವಿಧಾನ ಪರಿಷತ್ ಸದಸ್ಯ ಕೆ.ಎಲ್. ಸ್ವಾಮಿ, ನಗರ ಜಿಲ್ಲಾಧ್ಯಕ್ಷ ಮಹಮ್ಮದ್ ರಫೀಕ್, ಗ್ರಾಮೀಣ ಜಿಲ್ಲಾಧ್ಯಕ್ಷ ಬಿ.ವಿ. ಶಿವಯೋಗಿ ಮತ್ತಿತರರು ಉಪಸ್ಥಿತರಿದ್ದರು.

Leave a Comment