ಜಿಲ್ಲೆಯಲ್ಲಿ ಮಳೆ : ಕೊಚ್ಚಿಹೋದ ಸಂತೆಕಲ್ಲೂರು ಸೇತುವೆ

ರಾಯಚೂರು.ಜು.17- ಮುಂಗಾರು ಮಳೆ ಅಭಾವದ ಸಂಕಷ್ಟದಲ್ಲಿದ್ದ ಜಿಲ್ಲೆಗೆ ನಿನ್ನೆ ಉತ್ತಮ ಮಳೆಯಿಂದ ಲಿಂಗಸೂಗೂರು ತಾಲೂಕಿನ ಸಂತೆಕಲ್ಲೂರು ಹತ್ತಿರ ಸೇತುವೆ ಶಿಥಿಲಗೊಂಡು ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.
ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ತಾತ್ಕಾಲಿಕ ರಸ್ತೆ ಕೊಚ್ಚಿ ಹೋಗಿದೆ. ಕಳೆದ ವರ್ಷ ಸಂಚಾರ ತೊಂದರೆಯಿಂದಾಗಿ ತಾತ್ಕಾಲಿಕ ಸೇತುವೆ ನಿರ್ಮಿಸಲಾಗಿತ್ತು. ಈ ತಾತ್ಕಾಲಿಕ ಸೇತುವೆ ನಿರ್ಲಕ್ಷ್ಯ ಹಿನ್ನೆಲೆ, ಕೊಚ್ಚಿ ಹೋಗಿದೆಂದು ಹೇಳಲಾಗಿದೆ. ಇದರಿಂದ ಬಳ್ಳಾರಿ, ಚಿತ್ರದುರ್ಗ, ಶಿವಮೊಗ್ಗ, ಲಿಂಗಸೂಗೂರು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಜಿಲ್ಲೆಯಾದ್ಯಂತ ನಿನ್ನೆ ಮುಂಗಾರು ಅತ್ಯುತ್ತಮವಾಗಿದೆ.
ವಾಡಿಕೆಯಂತೆ ಜಿಲ್ಲೆಯಲ್ಲಿ ನಿನ್ನೆ 3.74 ಮಿ.ಮೀ.ಮಳೆಯಾಗಬೇಕಾಗಿತ್ತು. ಆದರೆ, ಸರಾಸರಿ ಎಲ್ಲೆಡೆ 13.88 ಮಳೆಯಾಗಿದೆ. ಮುಂಗಾರು ಹಂಗಾಮಿ ಆರಂಭಗೊಂಡಾಗಲಿಂದ ನಿನ್ನೆಯ ಮಳೆ ಒಂದಿಷ್ಟು ವಿಸ್ತೃತ ಮತ್ತು ರೈತರಿಗೆ ಒಂದಷ್ಟು ಸಮಾಧಾನಕರವಾಗಿ ಸುರಿದಿದೆ. ಜೂ.1 ರಿಂದ ಜು.17 ರವರೆಗೆ ಜಿಲ್ಲೆಯ ಸರಾಸರಿ ಮಳೆಯಲ್ಲಿ 28 ಮಿ.ಮೀ.ಕೊರತೆ ಮಳೆ ಕೊರತೆಯಿದೆ.
47 ದಿನಗಳಲ್ಲಿ ಸರಾಸರಿ 128.84 ಮಳೆಯಾಗಬೇಕಾಗಿತ್ತು. ಆದರೆ, ಇಲ್ಲಿವರೆಗೂ 97.68 ಮಿ.ಮೀ.ಮಳೆಯಾಗಿದೆ. ನಿನ್ನೆ ಒಂದೇ ದಿನ ಐದು ತಾಲೂಕುಗಳಲ್ಲಿ ಮಳೆ ಪ್ರಮಾಣ ತೀವ್ರವಾಗಿದ್ದರಿಂದ ಒಂದಷ್ಟು ಜಮೀನನಲ್ಲಿ ನೀರು ಹರಿಯುವಂತೆ ಮಾಡಿದೆ. ದೇವದುರ್ಗ ತಾಲೂಕಿನಲ್ಲಿ 13.7 ಮಿ.ಮೀ., ಲಿಂಗಸೂಗೂರು 16.6 ಮಿ.ಮೀ., ಮಾನ್ವಿ 18.2 ಮಿ.ಮೀ., ರಾಯಚೂರು 7.6 ಮಿ.ಮೀ., ಸಿಂಧೂನೂರು 15.3 ಮಿ.ಮೀ. ಮಳೆಯಾಗಿದೆ.
ಮುಂಗಾರು ಮಳೆ ನಿರೀಕ್ಷೆಯಲ್ಲಿದ್ದ ಜನರು ನಿನ್ನೆ ರಾತ್ರಿ ಸುರಿದ ಮಳೆಯಿಂದ ಒಂದಷ್ಟು ಕೃಷಿ ಚಟುವಟಿಕೆಗೆ ಅಲ್ಪ ಪ್ರಮಾಣದಲ್ಲಿ ನೆರವಾಗಿದೆಂಬ ಸಂತೃಪ್ತಿಯಲ್ಲಿದ್ದಾರೆ. ಕೆರೆ, ಕುಂಟೆಗಳಲ್ಲಿ ನೀರು ಕಾಣುವಷ್ಟು ಮಳೆಯಾಗಿದೆ. ಇದರಿಂದ ಜಾನುವಾರುಗಳಿಗೆ ಅಲ್ಪಪ್ರಮಾಣದಲ್ಲಿ ಅನುಕೂಲವಾಗಿದೆ ಎನ್ನುವುದು ಲೆಕ್ಕಚಾರ. ನಿನ್ನೆ ಸುರಿದ ಮಳೆಯಿಂದ ಕೆಲವೆಡೆ ರಸ್ತೆಗಳು ಹದಗೆಟ್ಟು ಹೋಗಿದ್ದರೇ, ಇನ್ನೂ ಕೆಲವೆಡೆ ವಿದ್ಯುತ್ ಅಸ್ತವ್ಯಸ್ತಗೊಂಡಿದೆ.
ಲಿಂಗಸೂಗೂರು ತಾಲೂಕಿನಲ್ಲಿ ಹರಿದು ಬಿದ್ದ ವಿದ್ಯುತ್ ತಂತಿಯಿಂದಾಗಿ ಓರ್ವ ಬಾಲಕ ಮೃತಪಟ್ಟ ಘಟನೆ ನಡೆದಿದೆ. ಜಿಲ್ಲೆಯಲ್ಲಿ ಭಾರೀ ಮಳೆ ಅಭಾವದಿಂದ ಪರಿಸ್ಥಿತಿ ಗಂಭೀರಗೊಂಡಿತ್ತು. ಕುಡಿವ ನೀರಿಗೂ ಹಾಹಾಕಾರ ಉಂಟಾಗುವಂತಿತ್ತು. ಆದರೆ, ಇನ್ನೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬಾರದ ಕಾರಣ ಬಿತ್ತನೆಗೆ ಹೆಚ್ಚಿನ ಉತ್ತೇಜನ ದೊರೆಯದಿರುವುದು ರೈತರು ಕಳವಳಕ್ಕೆ ಗುರಿಯಾಗುವಂತೆ ಮಾಡಿದೆ.

Leave a Comment