ಜಿಲ್ಲೆಯಲ್ಲಿ ದೀಪ ಬೆಳಗಿಸುವ ಮೂಲಕ ಒಗ್ಗಟ್ಟು ಪ್ರದರ್ಶನ

ಕೊರೊನಾ ಲಾಕ್ ಡೌನ್ : ಪ್ರಧಾನಿ ಕರೆಗೆ ಭಾರೀ ಬೆಂಬಲ
ರಾಯಚೂರು.ಏ.06- ಕೊರೊನಾ ವೈರಸ್ ವಿರುದ್ಧ ಹೋರಾಟದ ಭಾಗವಾಗಿ ಲಾಕ್ ಡೌನ್ ಅವಧಿಯಲ್ಲಿ ಒಂದೊಂದು ಕಾರ್ಯಕ್ರಮ ನೀಡುವ ಪ್ರಧಾನಿ ನರೇಂದ್ರ ಮೋದಿ ಅವರ ಕರೆಯ ಮೇರೆಗೆ ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ದೀಪ ಬೆಳಗಿಸುವ ಕಾರ್ಯಕ್ರಮ ಜಿಲ್ಲೆಯಾದ್ಯಂತ ನಡೆಸಲಾಯಿತು.
ಸರಿಯಾಗಿ ರಾತ್ರಿ 9 ಗಂಟೆಗೆ ಅನೇಕ ಮನೆಗಳಲ್ಲಿ ವಿದ್ಯುತ್ ಕಡಿತಗೊಳಿಸಿ, ಮೆಣದಬತ್ತಿ, ದೀಪ ಇಲ್ಲವೇ ಮೊಬೈಲ್ ಟಾರ್ಚ್ ಹಿಡಿದು ಪ್ರಧಾನಿ ಮೋದಿ ಅವರಿಗೆ ಬೆಂಬಲಿಸಿದರು. ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ ಅವರು ತಮ್ಮ ಅಧಿಕೃತ ಸರ್ಕಾರಿ ನಿವಾಸದಲ್ಲಿ ತುಳಸಿ ಕಟ್ಟೆ ಮುಂದೆ ಮೆಣದಬತ್ತಿ ಬೆಳಗಿಸಿದರೇ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಹ ಕುಟುಂಬ ಸಮೇತ ದೀಪ ಬೆಳಗಿಸಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಆದಿಮನಿ ವೀರಲಕ್ಷ್ಮೀ ಅವರು ದೀಪ ಬೆಳಗಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಅವರು ಕಟುಂಬದೊಂದಿಗೆ ದೀಪ ಬೆಳಗಿಸಿದರು. ಶಾಸಕ ಡಾ.ಶಿವರಾಜ ಪಾಟೀಲ್ ಅವರು ತಮ್ಮ ಸಹ ಕುಟುಂಬ ಪರಿವಾರದೊಂದಿಗೆ ದೀಪ ಬೆಳಗಿಸಿದರು. ಕೊರೊನಾ ವೈರಸ್ ವಿರುದ್ಧ ಲಾಕ್ ಡೌನ್ 10 ದಿನಗಳ ಹಿನ್ನೆಲೆಯಲ್ಲಿ ದೀಪ ಬೆಳಗಿಸುವ ಮೂಲಕ ಒಗಟ್ಟು ಪ್ರದರ್ಶಿಸಲಾಯಿತು.
ಮಾ.25 ರಿಂದ ದೇಶದ ಲಾಕ್ ಡೌನ್ ಘೋಷಿಸಲಾಗಿತ್ತು. ಕೊರೊನಾ ಹರಡುವಿಕೆ ತಡೆಯಲು ಕೇಂದ್ರ ಸರ್ಕಾರದ ಈ ತೀರ್ಮಾನದ ಬಗ್ಗೆ ಜನರ ಅಭಿಮತ ಮತ್ತು ಕೊರೊನಾ ವಿರುದ್ಧದ ಸಂಘರ್ಷದಲ್ಲಿ ಅವರ ಬದ್ಧತೆ ದೀಪ ಬೆಳಗಿಸುವ ಮೂಲಕ ಪ್ರದರ್ಶಿಸಲಾಯಿತು. 9 ನಿಮಿಷಗಳ ಕಾಲ ಜಿಲ್ಲೆಯಲ್ಲಿ ದೀಪಗಳ ಮಿಣುಗುವಿಕೆ ಆಕರ್ಷಕವಾಗಿತ್ತು.

Leave a Comment