ಜಿಲ್ಲೆಯಲ್ಲಿ ತೊಗರಿ ಖರೀದಿ ಕೇಂದ್ರ ಹೆಚ್ಚಳಕ್ಕಾಗಿ ಮನವಿ

ಕಲಬುರಗಿ, ಜ. 11: ಜಿಲ್ಲೆಯಲ್ಲಿ ತೊಗರಿ ಖರೀದಿ ಕೇಂದ್ರಗಳು ಕಡಿಮೆ ಸಂಖ್ಯೆಯಲ್ಲಿ ಇರುವದರಿಂದ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ಸಂಕಷ್ಟದಲ್ಲಿರುವ ರೈತರನ್ನು ಕಾಪಾಡಲು ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತೊಗರಿ ಖರೀದಿ ಕೇಂದ್ರ ಆರಂಭಿಸಬೇಕು ಎಂದು ಹೈದ್ರಾಬಾದ ಕರ್ನಾಟಕ ರೈತ ಸಂಘ ಅಧ್ಯಕ್ಷ ದಯಾನಂದ ಪಾಟೀಲ ಆಗ್ರಹಿಸಿದರು.
ಪತ್ರಿಕಾ ಭವನದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ತೊಗರಿ ಖರೀದಿ ಕೇಂದ್ರಗಳ ಸಂಖ್ಯೆ ಕಡಿಮೆ ಇದೆ. ಕೆಲವು ಮಧ್ಯವರ್ತಿಗಳು ರೈತರಿಂದ ಕಡಿಮೆ ಬೆಲೆಯಲ್ಲಿ ತೊಗರಿ ಖರೀದಿಸಿ ಸರಕಾರದ ಅಧಿಕೃತ ಖರೀದಿ ಕೇಂದ್ರಕ್ಕೆ ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ. ರೈತರಿಗೆ ಸರ್ಕಾರ ನೆರವು ನೇರವಾಗಿ ಸಿಗುತ್ತಿಲ್ಲ ಎಂದು ವಿಷಾಧಿಸಿ ಜಿಲ್ಲಾಧಿಕಾರಿಗಳು ಕೂಡಲೆ ಹೆಚ್ಚಿನ ಸಂಖ್ಯೆಯಲ್ಲಿ ತೊಗರಿ ಖರೀದಿ ಕೇಂದ್ರ ಆರಂಭಿಸಬೇಕು ಹಾಗೂ ಖರೀದಿ ಕೇಂದ್ರದ ಮೇಲೆ ನಿಗಾ ಇಟ್ಟು ಭ್ರಷ್ಟ ಅಧಿಕಾರಿಗಳು ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಬೇಕು ಎಂದು ಮನವಿ ಸಲ್ಲಿಸಿದ್ದೇವೆ ಎಂದು ವಿವರಿಸಿದರು.
ನಮ್ಮ ಮನವಿಗೆ ಸ್ಪಂಧಿಸಿರುವ ಜಿಲ್ಲಾಧಿಕಾರಿಗಳು ಐದು ದಿನದಲ್ಲಿ ಖರೀದಿ ಕೇಂದ್ರಗಳ ಹೆಚ್ಚಳಕ್ಕೆ ಕ್ರಮಕೈಗೊಳ್ಳುವದಾಗಿ ತಿಳಿಸಿದ್ದಾರೆ ಎಂದು ಅವರು ವಿಳಂಬವಾದರೆ ಐದು ದಿನದ ನಂತರ ಎಪಿಎಂಸಿ ಎದುರು ರೈತರೊಂದಿಗೆ ಉಗ್ರ ಹೋರಾಟ ಮಾಡುವದಾಗಿ ದಯಾನಂದ ಪಾಟೀಲ ಎಚ್ಚರಿಸಿದರು.
ಅತೀವೃಷ್ಠಿ ಹಾಗೂ ಅನಾವೃಷ್ಠಿ ಪರಿಹಾರ 10 ಸಾವಿರ ರೂ. ಸ್ವಾಮಿನಾಥನ್ ವರದಿ ಜಾರಿಗೆ, ರಾಷ್ಟ್ರೀಕೃತ ಬ್ಯಾಂಕ್ ಸಾಲಾ ಮನ್ನಾ, ತೊಗರಿಗೆ ಬೆಂಬಲ ಬೆಲೆ 7500 ರೂ. ಬಿಸಿಲು ನಾಡು ಜಿಲ್ಲೆ ಕಲಬುರಗಿಯಲ್ಲಿ ಸೋಲಾರ್ ಪಾರ್ಕ್ ನಿರ್ಮಾಣ, ರೈತರ ಪಂಪ್‍ಸೆಟ್‍ಗೆ ಹಗಲು ಹೊತ್ತಿನಲ್ಲಿ 12 ಗಂಟೆ ವಿದ್ಯುತ್, ಪ್ರತಿ ತಾಲೂಕಿನಲ್ಲಿ ಕೊಲ್ಡ್ ಸ್ಟೊರೇಜ್ ಸೇರಿದಂತೆ ವಿವಿಧ ಬೇಡಿಕೆಗಳ ಕುರಿತು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಆದಿನಾತ ಹೀರಾ, ಬಿ.ಬಿ. ನಾಯಕ, ಬಸವರಾಜ, ವಿಠಲ ಕೆರಿ ಅಂಬಲಗಾ, ಶ್ರೀಮಂತರಾವ ಪಾಟೀಲ, ಶ್ರೀಶೈಲ ಎಚ್. ಚಿಚಕೋಟಿ ಬಂಗರಗಾ, ಮಧುಮತಿ ದೇಶಮುಖ ಹಾಗೂ ಇತರರು ಇದ್ದರು. ….

Leave a Comment