ಜಿಲ್ಲೆಯಲ್ಲಿ ಅಮಾನ್ಯ ನೋಟು ಬದಲಾವಣೆ ಜಾಲ

16.70 ಲಕ್ಷ ವಶ: ಮೂವರು ಆರೋಪಿ ಬಂಧನ
* ನಗರದಲ್ಲಿ 2ನೇ ನೋಟು ಬದಲಾವಣೆ ಪ್ರಕರಣ
* ಪಶ್ಚಿಮ ಠಾಣಾ ಪೊಲೀಸರ ಮಿಂಚಿನ ಕಾರ್ಯಾಚರಣೆ
ರಾಯಚೂರು.ಫೆ.17- ಅಮಾನ್ಯ ನೋಟು ಬದಲಾವಣೆ ಅವಧಿ ಮುಗಿದು ಎರಡು ತಿಂಗಳು ಕಳೆದಿದ್ದರೂ, ಜಿಲ್ಲೆಯಲ್ಲಿ ಇನ್ನು ನೋಟು ಬದಲಾವಣೆ ಅಕ್ರಮ ರಾಜಾರೋಷವಾಗಿ ನಡೆಯುತ್ತಿದೆ ಎನ್ನುವುದಕ್ಕೆ ಪಶ್ಚಿಮ ಠಾಣೆಯ ಪೊಲೀಸರ ಕಾರ್ಯಾಚರಣೆ ಸಾಕ್ಷಿಯಾಗಿದೆ.

ನಿನ್ನೆ ಪಶ್ಚಿಮ ಠಾಣಾ ವ್ಯಾಪ್ತಿಯಲ್ಲಿ ನಡೆದ ಮಿಂಚಿನ ಕಾರ್ಯಾಚರಣೆಯಲ್ಲಿ 16.70 ಲಕ್ಷ ಮೊತ್ತದ ಅಮಾನ್ಯ 500 ನೋಟು ವಶಪಡಿಸಿಕೊಂಡು ಒಟ್ಟು ಮೂವರನ್ನು ಬಂಧಿಸುವ ಮೂಲಕ ಭಾರೀ ಜಾಲವನ್ನೆ ಪೊಲೀಸರು ಬೇಧಿಸುವಲ್ಲಿ ಯಶಸ್ವಿಯಾಗಿದ್ದು, ನೋಟು ಬದಲಾವಣೆಯ ಹಿಂದಿನ ವ್ಯಕ್ತಿ ಯಾರು ಎನ್ನುವುದು ಈಗ ತನಿಖೆಯ ಕೇಂದ್ರವಾಗಿ, ಬ್ಯಾಂಕ್ ಅಧಿಕಾರಿಗಳ ಮೇಲೆ ಪೊಲೀಸರ ಹದ್ದಿನ ಕಣ್ಣು ಕೇಂದ್ರೀಕರಣಗೊಂಡಿದೆ.

ಗಂಗಾವತಿ ಮೂಲದ ಧಾರವಾಡ ನಗರ ನಿವಾಸಿ ರವಿ ಕುಮಾರ, ನಗರದ ಹಣ್ಣು ವ್ಯಾಪಾರಿ ಅನ್ವರ್ ಅಲಿ (ಸೈಯದ್ ಅನ್ಸಾರಿ), ಮಾನ್ವಿ ತಾಲೂಕಿನ ಕಾತರಕಿಯ ಪರುಶುರಾಮ ಈ ಮೂವರನ್ನು ಬಂಧಿಸುವ ಮೂಲಕ ಅಮಾನ್ಯ ನೋಟು ಜಾಲಪತ್ತೆಗೆ ಪೊಲೀಸ್ ಮುಂದಾಗಿದೆ. ರವಿಕುಮಾರ ಹಾಗೂ ಅನ್ವರ್ ಅಲಿ ಇವರಿಗೆ ಸೇರಿದ ಒಟ್ಟು 16.70 ಲಕ್ಷ ಹಣ 500 ಮುಖಬೆಲೆ ಹಳೆ ನೋಟು ಬದಲಾವಣೆಗೆ ತರಲಾಗಿತ್ತು.

ಈ ಹಿಂದೆ ಇಂತಹದೆ ಪ್ರಕರಣದಲ್ಲಿ ಗಂಗಾಧರ ಎಂಬುವನನ್ನು ಬಂಧಿಸಲಾಗಿತ್ತು. ಬಳ್ಳಾರಿಯಿಂದ ಅಮಾನ್ಯಗೊಂಡ 10 ಲಕ್ಷ ರೂ. ನೋಟು ಬದಲಾವಣೆಗೆ ತರಲಾಗಿತ್ತು. ಆ ಸಂದರ್ಭದಲ್ಲಿಯೂ ನೋಟು ಬದಲಾವಣೆ ಮಾಡುವುದಾಗಿ ಪರುಶುರಾಮನೇ ಹೇಳಿರುವುದು ಗಮನಾರ್ಹವಾಗಿದೆ. ಮಾನ್ವಿ ಬ್ಯಾಂಕ್‌ವೊಂದರ ವ್ಯವಸ್ಥಾಪಕರು ತಮ್ಮೊಂದಿಗೆ ಆಪ್ತರಾಗಿದ್ದು, ಹಳೆ ನೋಟು ಬದಲಾಯಿಸಿಕೊಡುವುದಾಗಿ ರವಿಕುಮಾರನನ್ನು ಕರೆದಿದ್ದ ಎನ್ನುವುದು ಪೊಲೀಸ್ ವಿಚಾರಣೆಯಲ್ಲಿ ಬಹಿರಂಗಗೊಂಡಿದೆ.

ಶೇ.30 ರಷ್ಟು ಕಮಿಷನ್ ಆಧರಿಸಿ ಹಳೆ ನೋಟಿಗೆ ಹೊಸ ನೋಟು ಬದಲಾಯಿಸುವ ಒಪ್ಪಂದ ಕುದುರಿತ್ತು. ಐಬಿ ರಸ್ತೆಯಲ್ಲಿ ರವಿಕುಮಾರ ಮತ್ತು ಅನ್ವರ್ ಅಲಿ ಇರುವ ಮಾಹಿತಿ ಪಡೆದ ಪಿಎಸ್ಐ ಎಲ್.ಬಿ.ಅಗ್ನಿ ಅವರು ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿ ನಂತರ ಪರುಶುರಾಮನನ್ನು ಬಂಧಿಸಲಾಯಿತು. ನೋಟು ಸಾಗಿಸುವ ವಾಹನವನ್ನು ಜಪ್ತಿ ಮಾಡಲಾಗಿದೆ. ನೋಟು ಬದಲಾವಣೆಗೆ ನೆರವಾಗುತ್ತಿದ್ದ ಬ್ಯಾಂಕ್ ಮ್ಯಾನೇಜರ್ ಇದ್ದಾರೆಯೇ? ಇದ್ದರೆ ಅವರು ಯಾರು ಎನ್ನುವುದು ಈಗ ತನಿಖೆ ಕೇಂದ್ರವಾಗಿದ್ದು, ಪೊಲೀಸರು ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ.

Leave a Comment