ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ನೀರಿಗೆ ತತ್ವಾರ

 

ಕಲಬುರಗಿ,ಮೇ.15-ಇಲ್ಲಿನ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲೂ ಈಗ ನೀರಿನ ಬವಣೆ ಎದುರಾಗಿದೆ. ಆಸ್ಪತ್ರೆಗೆ ಅಗತ್ಯವಾದ ನೀರು ಪೂರೈಕೆ ಮಾಡದೇ ಇರುವುದರಿಂದ ತೀವ್ರ ಸಮಸ್ಯೆ ತಲೆದೋರಿದೆ.

ಆಸ್ಪತ್ರೆಗೆ ನಿತ್ಯ 3 ಲಕ್ಷ ಲೀಟರ್ ನೀರಿನ ಅಗತ್ಯವಿದ್ದು, ಸದ್ಯ ಕೇವಲ 60 ಸಾವಿರ ಲೀಟರ್ ನೀರು ಪೂರೈಕೆ ಮಾಡಲಾಗುತ್ತಿದೆ. ಹೀಗಾಗಿ ಆಸ್ಪತ್ರೆಗೆ ಬರುವ ರೋಗಿಗಳು ಮತ್ತವರ ಜೊತೆಗೆ ಬರುವವರು ಮತ್ತು ಆಸ್ಪತ್ರೆಯ ಸಿಬ್ಬಂದಿ ಪರದಾಡಬೇಕಾದಂತಹ ಸ್ಥಿತಿ ನಿರ್ಮಾಣವಾಗಿದೆ. ಸಮರ್ಪಕವಾಗಿ ನೀರು ಪೂರೈಕೆ ಮಾಡದೇ ಇರುವುದರಿಂದ ಆಸ್ಪತ್ರೆಯ ಸ್ವಚ್ಛತೆಗೂ ಹೊಡೆತ ಬಿದ್ದಿದ್ದು, ನೀರಿಲ್ಲದೆ ಶೌಚಾಲಯಗಳನ್ನು ಸ್ವಚ್ಛಗೊಳಿಸಲು ಆಗದೆ, ಆಸ್ಪತ್ರೆಯ ನೆಲ ಒರೆಸಲು ಆಗದೆ ಗಬ್ಬು ವಾಸನೆ ಹರುಡುವಂತಾಗಿದೆ. ಇದರಿಂದಾಗಿ ರೋಗಿಗಳ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಗಳಿವೆ. ಈ ಮೊದಲು ನಗರ ನೀರು ಸರಬರಾಜು ಮಂಡಳಿ ಮತ್ತು ಮಹಾನಗರ ಪಾಲಿಕೆ ವತಿಯಿಂದ ಆಸ್ಪತ್ರೆಗೆ 3 ಲಕ್ಷ ಲೀಟರ್ ನೀರು ಪೂರೈಕೆ ಮಾಡಲಾಗುತ್ತಿತ್ತು. ಕಳೆದ ಒಂದುವರೆ ತಿಂಗಳಿಂದ ಕೇವಲ 60 ಸಾವಿರ ಲೀಟರ್ ಮಾತ್ರ ನೀರು ಪೂರೈಕೆ ಮಾಡುತ್ತಿರುವುದರಿಂದ ಆಸ್ಪತ್ರೆಯ ಸ್ವಚ್ಛತೆ ಕಾಪಾಡುವುದು ಕಷ್ಟವಾಗಿದೆ. ಆಸ್ಪತ್ರೆಗೆ ಬರುವ ಒಳ ಮತ್ತು ಹೊರ ರೋಗಿಗಳು ಹೊರಗಿನಿಂದ ನೀರು ತಂದು ಕುಡಿಯುವ ಮತ್ತು ಬಳಸುವ ಪರಿಸ್ಥಿತಿ ಬಂದೊದಗಿದೆ.

ಆಸ್ಪತ್ರೆಯಲ್ಲಿ ನಿತ್ಯ 25 ರಿಂದ 30 ಹೆರಿಗೆ, ಶಸ್ತ್ರ ಚಿಕಿತ್ಸೆ ನಡೆಯುತ್ತವೆ. ಹೆರಿಗೆ ಮತ್ತು ಶಸ್ತ್ರ ಚಿಕಿತ್ಸೆ ನಡೆಸಲು ನೀರು ಬೇಕು. ನೀರಿನ ಕೊರತೆಯಿಂದಾಗಿ ಮುಂದೊಂದು ದಿನ ಇದನ್ನು ನಿಲ್ಲಿಸಬೇಕಾದಂತಹ ಪರಿಸ್ಥಿತಿ ಬರಬಹುದು. ಆದ್ದರಿಂದ ಸಂಬಂಧಪಟ್ಟವರು ಈ ಬಗ್ಗೆ ಗಮನ ಹರಿಸಿ ಆಸ್ಪತ್ರೆಗೆ ಅಗತ್ಯವಾದ ನೀರು ಪೂರೈಕೆ ಮಾಡುವುದರ ಮೂಲಕ ಈ ಸಮಸ್ಯೆ ಬಗೆಹರಿಬೇಕಿದೆ.

ಆಸ್ಪತ್ರೆಗೆ ನಿತ್ಯ 3 ಲಕ್ಷ ಲೀಟರ್ ನೀರು ಬೇಕು. ಆದರೆ ಕೇವಲ 60 ಸಾವಿರ ಲೀಟರ್ ಮಾತ್ರ ನೀರು ಪೂರೈಕೆ ಮಾಡಲಾಗುತ್ತಿದೆ. ಇದರಿಂದ ಆಸ್ಪತ್ರೆಯ ಸ್ವಚ್ಛತೆ ಕಾಪಾಡುವುದು ಕಷ್ಟವಾಗುತ್ತಿದೆ. ಇದರಿಂದ ಹೆರಿಗೆ ಮತ್ತು ಶಸ್ತ್ರ ಚಿಕಿತ್ಸೆ ನಡೆಸುವುದು ಕಷ್ಟವಾಗಿದೆ. ಕಳೆದ ಒಂದುವರೆ ತಿಂಗಳಿಂದ ಇದೇ ಪರಿಸ್ಥಿತಿ ಮುಂದುವರಿದಿದ್ದು, ಸಮರ್ಪಕವಾಗಿ ನೀರು ಪೂರೈಕೆ ಮಾಡಲು ಕ್ರಮ ಕೈಗೊಳ್ಳುವಂತೆ ಮಹಾನಗರ ಪಾಲಿಕೆ ಆಯುಕ್ತರು, ನಗರ ನೀರು ಸರಬರಾಜು ಮಂಡಳಿಗೆ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಜಿಲ್ಲಾ ಶಸ್ತ್ರಜ್ಞ ಡಾ.ಶಿವಾನಂದ ಸುರಗಾಳಿ “ಸಂಜೆವಾಣಿ”ಗೆ ತಿಳಿಸಿದರು.

ಸಂಬಂಧಪಟ್ಟವರು ಈ ಬಗ್ಗೆ ನಿಗಾವಹಿಸಿ ಆಸ್ಪತ್ರೆಗೆ ಅಗತ್ಯವಾದ ನೀರು ಪೂರೈಕೆ ಮಾಡಲು ಕ್ರಮ ಕೈಗೊಳ್ಳಬೇಕಿದೆ.

Leave a Comment