ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಭದ್ರತಾ ಸಿಬ್ಬಂದಿಯನ್ನು ನೇಮಕ ಮಾಡಲು ಒತ್ತಾಯ

ಬಳ್ಳಾರಿ, ಮೇ.19: ನಗರದಲ್ಲಿರುವ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಆವರಣವನ್ನು ಕಾಪಾಡಲು ಭದ್ರತಾ ಸಿಬ್ಬಂದಿಯನ್ನು ನೇಮಕ ಮಾಡುವುದರ ಬಗ್ಗೆ ಹಾಗೂ ನಗರದ ಹೆಚ್.ಆರ್.ಜಿ.ವೃತ್ತದ ಪಕ್ಕದಲ್ಲಿರುವ ಅಸಂಪೂರ್ಣ ಹಾಗೂ ಅನುಪಯುಕ್ತವಾಗಿರುವ ಸರ್ಕಾರಿಯ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡದ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಯುವಸೇನ ಸೋಶಿಯಲ್ ಯ್ಯಾಕ್ಷನ್ ಕ್ಲಬ್ ಒತ್ತಾಯಿಸಿದೆ.

ಈ ಕುರಿತಂತೆ ಹೆಚ್ಚುವರಿ ಜಿಲ್ಲಾಧಿಕಾರಿ ವಿಜಯ ದಾನಮ್ಮನವರ್ ರವರಿಗೆ ಮನವಿ ಪತ್ರ ಸಲ್ಲಿಸಿರುವ ಯುವಸೇನ ಸೋಶಿಯಲ್ ಯ್ಯಾಕ್ಷನ್ ಕ್ಲಬ್ ನ ಅಧ್ಯಕ್ಷ ಮೇಕಲ ಈಶ್ವರರೆಡ್ಡಿ ಹಾಗೂ ಕಾರ್ಯಕರ್ತರು:

ಎಸ್.ಕೃಷ್ಣ, ಜಿ.ಎಂ. ಭಾಷ, ಸಲಾವುದ್ದೀನ್.ಎಸ್.ಆರ್. ಎಂ.ರಾಮಕ್ರಿಷ್ಣ, ಶಿವಾನಂದ,ಎಂ.ಕೆ.ಜಗನ್ನಾಥ, ಪಿ.ನಾರಾಯಣ, ಶ್ರೀನಿವಾಸ, ಕೆ.ವೆಂಕಟೇಶ, ಶ್ರೀಧರ್, ಎಂ.ಎರ್ರಿಸ್ವಾಮಿ ಮತ್ತಿತರರು

ನಗರದಲ್ಲಿರುವಂತಹ ಜಿಲ್ಲಾ ಸರ್ಕಾರಿ ಆಸ್ಪತ್ರೆಯು 2016ನೇ ಮಾರ್ಚ್‍ವರೆಗೆ ವಿಮ್ಸ್ ಆಧೀನದಲ್ಲಿದ್ದಾಗ ಆಸ್ಪತ್ರೆಯ ಆವರಣವನ್ನು, ಆಸ್ಪತ್ರೆಗೆ ದಾಖಲಾಗುವ ಹೊರ-ಒಳ ರೋಗಿಗಳು ಮತ್ತು ಅವರ ಸಂಬಂಧಪಟ್ಟ ಎಲ್ಲಾ ವ್ಯಕ್ತಿಗಳ ನಿಯಂತ್ರಣ ಅವರ ಆಧೀನದಲ್ಲಿತ್ತು. ಹಾಗೂ ನಿಗಧಿಪಡಿಸಿದ ಸಮಯದಲ್ಲಿ ಮಾತ್ರ ರೋಗಿಗಳನ್ನು ಪರಾಮರ್ಶಿಸುವುದಕ್ಕೆ ರೋಗಿಗಳ ಸಂಬಂಧಿಕರು ಹೋಗಿ-ಬರಲು ವ್ಯವಸ್ಥೆ ಇತ್ತು. ಅಷ್ಟೇ ಅಲ್ಲದೇ ರಾತ್ರಿ ಸಮಯದಲ್ಲಿ ಬೇರೆಯಾರು ಬರದಂತೆ ಮತ್ತು ಆಸ್ಪತ್ರೆಯ ಆವರಣದ ಸುತ್ತ-ಮುತ್ತಲೂ ಯಾವುದೇ ಅನೈತಿಕ ಚಟುವಟಿಕೆಗಳು ನಡೆಯದಂತೆ ನೋಡಿಕೊಳ್ಳುತ್ತಾ ನಿಯಂತ್ರಣ ಮಾಡುತ್ತಿದ್ದರು. ಅಷ್ಟೇ ಅಲ್ಲದೇ ವಿಮ್ಸ್‍ನಿಂದ ಸರ್ಕಾರ ಆಧೀನದಲ್ಲಿದ್ದಾಗ ಆಸ್ಪತ್ರೆಯ ಭದ್ರತಾ ಸಿಬ್ಬಂಧಿಯವರು ರೋಗಿಗಳಿಗೆ ಸಂಬಂಧಪಟ್ಟವರ ವಾಹನಗಳ ನಿಲುಗಡೆ ಕೂಡ ಒಂದೇ ಕಡೆ ಸುಂದರವಾಗಿ ಶಿಸ್ತಾಗಿ ನಿರ್ವಹಣೆ ಮಾಡುತ್ತಿದ್ದರು. ಆದರೆ ಈಗ ಭದ್ರತಾ ಸಿಬ್ಬಂಧಿ ಇಲ್ಲದಿರುವುದರಿಂದ ಆಸ್ಪತ್ರೆಯಲ್ಲಿ ಕೆಲಸ ಮಾಡುವಂತಹ ಡಿ-ಗ್ರೂಪ್ ನೌಕರರೇ ಭದ್ರತಾ ಸಿಬ್ಬಂಧಿಯವರು ನಿರ್ವಹಿಸುವ ಎಲ್ಲಾ ಕೆಲಸಗಳನ್ನು ನಿರ್ವಹಣೆ ಮಾಡುವ ಪರಿಸ್ಥಿತಿ ಒದಗಿ ಬಂದಿದೆ.

ಆದರೆ ಡಿ-ಗ್ರೂಪ್ ನೌಕರರು ನೇಮಕಗೊಂಡ ಹುದ್ದೆಯನ್ನು ನಿರ್ವಹಿಸುತ್ತಾ ಮತ್ತು ಇದರ ಜೊತೆಗೆ ಆಸ್ಪತ್ರೆಗೆ ದಾಖಲಾಗುವ ರೋಗಿಗಳನ್ನು ಮತ್ತು ರೋಗಿಗಳಿಗೆ ಸಂಬಂಧಪಟ್ಟ ವ್ಯಕ್ತಿಗಳನ್ನು ಹೋಗಿ-ಬರಲು ನಿಯಂತ್ರಿಸುವುದನ್ನು ಮತ್ತು ಆಸ್ಪತ್ರೆಯ ಆವರಣ ಕಾವಲು ಕಾಯುವುದನ್ನು ಈ ಎಲ್ಲಾ ಕೆಲಸಗಳನ್ನು ನಿರ್ವಹಿಸಲು ಕಷ್ಟಕರವಾಗಿದೆ.

ಆದ್ದರಿಂದ ಆದಷ್ಟು ಬೇಗ ಬಳ್ಳಾರಿ ಜಿಲ್ಲಾ ಆಸ್ಪತ್ರೆಗೆ ಭದ್ರತಾ ಸಿಬ್ಬಂಧಿಯನ್ನು ನೇಮಕ ಮಾಡುವಂತೆ ಆದೇಶವನ್ನು ಹೊರಡಿಸಬೇಕೆಂದು ಮನವಿ ಮಾಡಿದ್ದಾರೆ.

ಸರ್ಕಾರಿಯ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡದ ಬಗ್ಗೆ

ಬಳ್ಳಾರಿ ನಗರದ ಹೆಚ್.ಆರ್.ಜಿ. ವೃತ್ತದ ಪಕ್ಕದಲ್ಲಿರುವಂತಹ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡವು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸಂಬಂಧಪಟ್ಟಿದ್ದಾಗಿರುತ್ತದೆ. 1999 ರಲ್ಲಿ ಶ್ರೀಮತಿ ಸೋನಿಯಾಗಾಂಧಿಯವರು ಬಳ್ಳಾರಿ ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿಯಿಂದ ಸ್ಪರ್ಧಿಸಿ ವಿಜೇತರಾದ ನಂತರ ಬಳ್ಳಾರಿ ಜಿಲ್ಲಾ ಅಭಿವೃದ್ಧಿಗಾಗಿ ನೀಡಿದ ಅನುದಾನಗಳಲ್ಲಿ ಈ ಕಟ್ಟಡ ನಿರ್ಮಾಣವನ್ನು ಕೈಗೊಂಡರು.

ಆದರೆ ಸದರಿ ಕಟ್ಟಡ ನಿರ್ಮಾಣದ ಸಮಯದಲ್ಲಿ ಬಹಳಷ್ಟು ನಾಯಕರು, ಸಂಘ-ಸಂಸ್ಥೆಗಳು ಮತ್ತು ಇನ್ನಿತರರು ಕಟ್ಟಡ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದರು. ಕಾರಣ ಒಂದೆಡೆ ರಸ್ತೆಯಲ್ಲಿ ವಾಹನಗಳ ಸಂಚಾರ, ಮತ್ತೊಂದೆಡೆ ರೈಲು ಸಂಚಾರ, ಇದರಿಂದ ವಾಯು ಮಾಲಿನ್ಯ ಮತ್ತು ಶಬ್ದಮಾಲಿನ್ಯ ಉಂಟಾಗುವುದೆನ್ನುವ ಕಾರಣದಿಂದ ಈ ಕಟ್ಟಡ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸದೇ ಅಷ್ಟಕ್ಕೆ ನಿಲ್ಲಿಸಿದ್ದಾರೆ. ಆದರೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ ಈ ಅಸಂಪೂರ್ಣ ಕಟ್ಟಡದಲ್ಲಿ ಸಾರ್ವಜನಿಕರು ಮತ್ತು ಸುತ್ತ-ಮುತ್ತಲಿನ ವಾಣಿಜ್ಯ ಮಳಿಗೆದಾರರು ಹಾಗೂ ಗ್ರಾಹಕರು ಇನ್ನಿತರರು ಈ ಅಸಂಪೂರ್ಣ ಕಟ್ಟಡವನ್ನು ಕೇವಲ ಮಲಮೂತ್ರ ವಿಸರ್ಜನೆಗೆ ಹಾಗೂ ಇನ್ನಿತರೆ ಅನೈತಿಕ ಚಟುವಟಿಕೆಗಳ ನಿಲಯವಾಗಿ ಬಳಸುತ್ತಿದ್ದಾರೆ.

ಈ ಅಸಂಪೂರ್ಣ ಕಟ್ಟಡವು ವೃಥಾ ಆಗದಂತೆ ಸಂಬಂಧಪಟ್ಟ ಇಲಾಖೆಯಿಂದ ವಶಪಡಿಸಿಕೊಂಡು ಸ್ವಂತ ಕಟ್ಟಡ ಇಲ್ಲದಂತಹ ಸರ್ಕಾರಿ ಕಛೇರಿ/ಇಲಾಖೆಗಳಿಗೆ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಬಳ್ಳಾರಿ ಜಿಲ್ಲೆಯಲ್ಲಿ ಅನೇಕ ಕಾರ್ಖಾನೆಗಳು ಇವೆ ಆದರೆ ಕಾರ್ಮಿಕ ಇಲಾಖೆಗೆ ಸ್ವಂತ ಕಛೇರಿ ಇರುವುದಿಲ್ಲ. ಈ ಅಸಂಪೂರ್ಣ ಆಸ್ಪತ್ರೆಯ ಕಟ್ಟಡವನ್ನು ಸ್ವಂತ ಕಟ್ಟಡ ಇಲ್ಲದಂತಹ ಕಾರ್ಮಿಕ ಇಲಾಖೆಯ ಕಛೇರಿಗೆ ವರ್ಗಾಯಿಸಿಕೊಟ್ಟಲ್ಲಿ ಕಾರ್ಮಿಕ ಇಲಾಖೆಗೆ ಅನುಕೂಲವಾಗುತ್ತದೆ ಎಂದು ಅವರುಗಳು ಹೇಳಿದ್ದಾರೆ.

 

Leave a Comment